ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪುತ್ರನಿಗೆ ಶಿಕಾರಿಪುರ ಧಾರೆ

Mainashree
Updated On : 1 Aug 2014, 10:25 am

ಶ್ರೀಕಾಂತ ಭಟ್
ಶಿಕಾರಿಪುರ: 1983ನೇ ಸಾಲಿನಿಂದ ತಮ್ಮನ್ನು ಎತ್ತಾಡಿಸಿ ಬೆಳೆಸಿದ ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ತಮ್ಮ ಪುತ್ರನಿಗೆ ಧಾರೆ ಎರೆಯುವ ಉದ್ದೇಶದಿಂದ ಬಿಲ್ಲು ಹೆದೆಗೇರಿಸಿರುವ ಬಿ.ಎಸ್.ಯಡಿಯೂರಪ್ಪನವರು ರಾಜಕೀಯ ದಾಳಗಳನ್ನು ಉರುಳಿಸಲಾರಂಭಿಸಿದ್ದಾರೆ. ಜೊತೆಗೆ ರಾಜಕೀಯ ವಿಶ್ವವಿದ್ಯಾಲಯದಲ್ಲಿ ತಾವು ಕಲಿತ ಎಲ್ಲಾ ವಿದ್ಯೆಗಳನ್ನು ಒರೆಗೆ ಹಚ್ಚಲು ಮುಂದಡಿ ಇಟ್ಟಿದ್ದಾರೆ.
ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಈ ವಿಧಾನಸಭಾ ಚುನಾವಣೆಗೆ ಸಣ್ಣ ಪ್ರಮಾಣದಲ್ಲಿ ಸಜ್ಜಾಗಿದ್ದ ಯಡಿಯೂರಪ್ಪ ಪಾಳಯ ಫಲಿತಾಂಶ ಪ್ರಕಟವಾದ ನಂತರವಂತೂ ಮತದಾರರಿಗೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ ತಮ್ಮ ಪುತ್ರನನ್ನು ಹಳ್ಳಿಹಳ್ಳಿ ಕಟ್ಟೆಗಳ ಮೇಲೆ ನಿಲ್ಲಿಸಿ ತಮ್ಮ ಉತ್ತರಾಧಿಕಾರಿ ಇವನೇ ಎಂಬಂತೆ ಭಾಷಣ ಮಾಡಿ ಬಂದಿದ್ದರು.
ಜನರ ಮನಸ್ಸಿನಲ್ಲಿ ಬಿ.ವೈ.ರಾಘವೇಂದ್ರ ಹೆಸರು ಕೂರಿಸುವುದು ಅವರ ಉದ್ದೇಶವಾಗಿತ್ತು. ಹೀಗೆ ಆರಂಭವಾದ ಪಯಣ ಶಿಕಾರಿಪುರ ಕ್ಷೇತ್ರದ ಹಳ್ಳಿಹಳ್ಳಿಗೆ ಮುಟ್ಟಿಬಂದಿತ್ತು. ಇದೀಗ ಅಧಿಕೃತವಾಗಿ ಅಖಾಡಕ್ಕಿಳಿದಿದ್ದು, ಗುರುವಾರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮವೂ ಜನರಿಗೆ ಅನೇಕ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದು ಗೋಚರಿಸಿತು.
ಹಗುರವಾಗಿ ಪರಿಗಣಿಸಿದಂತಿಲ್ಲ:  ಕಳೆದ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಪಡೆದ ಲೀಡ್ ಗಮನಿಸಿದರೆ ಬಿ.ವೈ.ರಾಘವೇಂದ್ರ ಪ್ರಚಾರ ಮಾಡದಲೇ ಗೆಲ್ಲಬಹುದೆಂದು ಶಿಕಾರಿಪುರ ಜನ ಮಾತನಾಡುತ್ತಾರಾದರೂ ಯಡಿಯೂರಪ್ಪ ಮಾತ್ರ ಈ ಸಂಗತಿಯನ್ನು ಹಗುರವಾಗಿ ಪರಿಗಣಿಸಿದಂತಿಲ್ಲ.
ಒಂದು ವೇಳೆ ಕಾಂಗ್ರೆಸ್ ಜೆಡಿಎಸ್ ಬಹಿರಂಗ ಒಪ್ಪಂದ ಅಥವಾ ಒಳ ಒಪ್ಪಂದವಾದ ಪಕ್ಷದಲ್ಲಿ ನಡೆಯಬಹುದಾದ ರಾಜಕೀಯ ವಿಪ್ಲವಗಳನ್ನು ಗ್ರಹಿಸಿ ಈಗಲೇ ಅದಕ್ಕೆ ಬೇಕಾದ ತಂತ್ರಗಾರಿಕೆ ರೂಪಿಸಿದ್ದು ಗುರುವಾರದ ಪ್ರಚಾರ ಸಭೆಯಲ್ಲಿ ಕಂಡುಬಂತು.
ಯಡಿಯೂರಪ್ಪನವರೇ ಬೇಸರದಿಂದ ಹೇಳುವಂತೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟೆಲ್ಲಾ ಅಭಿವೃದ್ಧಿ ಕಾರ್ಯ ಮಾಡಿದರೂ ಶೇ.50ರಷ್ಟು ಕುಟುಂಬ ಮಾತ್ರ ತಮಗೆ ಮತ ಹಾಕಿವೆ. ಶೇ.35-40ರಷ್ಟು ಕುಟುಂಬಗಳು ಇನ್ನೂ ಪ್ರತಿಪಕ್ಷಕ್ಕೆ ಮತ ಹಾಕುತ್ತಾ ಬಂದಿವೆ.
ಇದೊಂದು ಸೂಕ್ಷ್ಮ ಸಂಗತಿ. ಒಂದು ವೇಳೆ ಕಾಂಗ್ರೆಸ್- ಜೆಡಿಎಸ್ ಕೂಡಿ ಆಟವಾಡಿದರೆ ಅದಕ್ಕೆ ಸರ್ಕಾರದಿಂದ ಸಹಕಾರವೂ ಇರುವುದರಿಂದ ಫಲಿತಾಂಶದಲ್ಲಿ ಏರುಪೇರಾದರೂ ಅಚ್ಚರಿ ಪಡಬೇಕಾಗಿಲ್ಲ. ಸದ್ಯಕ್ಕೆ ಆ ಪರಿಸ್ಥಿತಿ ಇಲ್ಲ, ಆದರೂ ಏನು ಬೇಕಾದರೂ ಆಗಬಹುದೆಂಬ ಆಲೋಚನೆಯಲ್ಲಿ ಮತಗಳ ಕ್ರೋಢೀಕರಣಕ್ಕೆ ಬಿಎಸ್‌ವೈ ಪ್ರಯತ್ನ ಆರಂಭಿಸಿದ್ದಾರೆ.
ಗುರುವಾರ ನಡೆದ ಪ್ರಚಾರ ಸಭೆಯಲ್ಲಿ ಸಂಸದ ಶ್ರೀರಾಮುಲು, ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಹರತಾಳು ಹಾಲಪ್ಪ, ಬಸವಣ್ಯಪ್ಪ, ಅಹಿಂದ ಮುಕುಡಪ್ಪ ಸೇರಿದಂತೆ ಲಿಂಗಾಯತ- ವೀರಶೈವ ಸಮಾಜದ ವಿವಿಧ ರಾಜಕೀಯ ಮುಖಂಡರು ಕಾಣಿಸಿಕೊಂಡು ಮತ ಯಾಚಿಸುವಂತೆ ಮಾಡಿದ್ದಲ್ಲದೇ, ಪ್ರಚಾರದಲ್ಲಿ ಇವರನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.
ಉರ್ದು ಭಾಷಣ:  ಬಹುಮುಖ್ಯವಾಗಿ ಲಿಂಗಾಯತ ಮತಗಳ ಕ್ರೋಢೀಕರಣದೊಂದಿಗೆ ಈಡಿಗ, ವಾಲ್ಮೀಕಿ, ಲಂಬಾಣಿ, ಬೋವಿ ಸಮಾಜದ ಮತಗಳನ್ನು ಕ್ರೋಢೀಕರಿಸಿಕೊಳ್ಳುವ ಉದ್ದೇಶ ಮೇಲ್ನೋಟಕ್ಕೆ ಪ್ರಚಾರ ಸಭೆಯಲ್ಲಿ ಗೋಚರಿಸುತ್ತಿತ್ತು. ಇದರೊಟ್ಟಿಗೆ ಮುಸ್ಲಿಂ ಸಮಾಜದ ಮುಖಂಡ ಖುರೇಷಿರಿಂದ ಉರ್ದು ಭಾಷಣ ಪ್ರಯೋಗವೂ ನಡೆಯಿತು.
ಇನ್ನೊಂದೆಡೆ ಬೇರೆ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯುವ ಮುನ್ನವೇ ವಿವಿಧ ಸಮಾಜದ ಮುಖಂಡರು, ಸಣ್ಣಪುಟ್ಟ ನಾಯಕರನ್ನು ಮಾತನಾಡಿಸಿ ಮುಗಿಸಿರುವ ಯಡಿಯೂರಪ್ಪ ಬಳಗ ಬಿಜೆಪಿ ಸಂಘಟನೆಗೆ ಹೆಚ್ಚಿನ ಶ್ರಮ ಕೊಡುತ್ತಿದ್ದೂ ಕ್ಷೇತ್ರದಲ್ಲಿ ಕಂಡುಬರುತ್ತದೆ. ಹಾಗೆಯೇ ಯಾವ ಭಾಗದಲ್ಲಿ ಯಾವ ಮುಖಂಡರ ಪ್ರಭಾವವಿದೆಯೋ ಅವರನ್ನು ಬಳಸಿಕೊಂಡು ಮತ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ.
ಶಿಕಾರಿಪುರ ಕ್ಷೇತ್ರದಲ್ಲಿ ಯಡಿಯೂರಪ್ಪನವರಿಗೆ ಜಾತಿ ಮೀರಿದ ಮತಗಳು ಬರುತ್ತವೆ ಎಂಬುದು ಆಡು ಮಾತಾದರೂ ಈ ಬಾರಿ ಕಣದಲ್ಲಿರುವುದು ಅವರ ಪುತ್ರ ಬಿ.ವೈ.ರಾಘವೇಂದ್ರ ಅವರಾಗಿರುವುದರಿಂದ ಯಡಿಯೂರಪ್ಪನವರು ಕೊಂಚ ಎಚ್ಚರಿಕೆಯ ಹಾಗೂ ಪ್ರಬುದ್ಧತೆಯ ಹೆಜ್ಜೆ ಇಡುತ್ತಿರುವುದಂತೂ ಎಲ್ಲರ ಗಮನಕ್ಕೆ ಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement