ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗ್ರಾಮೀಣಾಭಿವೃದ್ಧಿ ಕುರಿತ ಮಾತು-ಮಂಥನಕ್ಕೆ ಸಾಕ್ಷಿಯಾದ ಸಮ್ಮೇಳನ

Lingaraj Badiger
Updated On : 2 Jun 2014, 11:52 am

ಸಾಹಿತ್ಯ, ಕಥೆ, ಕವನ ಇತ್ಯಾದಿಗಳು ಸಾಹಿತ್ಯ ಸಮ್ಮೇಳನದ ಸಂಪ್ರದಾಯ. ಇದಕ್ಕೆ ಹೊರತಾಗಿ ಗ್ರಾಮೀಣಾಭಿವೃದ್ಧಿ ಕುರಿತಂತೆ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿ ನಡೆದಿದ್ದನ್ನು 9ನೇ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನ ಸಾಕ್ಷೀಕರಿಸಿತು.
ಸಂವಾದ: ಗ್ರಾಮೀಣಾಭಿವೃದ್ಧಿ ವಿಚಾರದಲ್ಲಿ ಆಗಿರುವ ಬೆಳವಣಿಗೆ, ಎಡವಿರುವ ಸಂದರ್ಭಗಳು, ಆಗಬೇಕಾದ ಕಾರ್ಯಗಳು ಕುರಿತಂತೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳು, ಜನಪ್ರತಿನಿಧಿಗಳು, ಸಿಬ್ಬಂದಿವರ್ಗ, ಸಂಶೋಧಕರು ತಮ್ಮ ಮಾಹಿತಿಯನ್ನು ಪ್ರಸ್ತುಪಡಿಸಿದರು. ಈ ಸಂದರ್ಭದಲ್ಲಿ ಸಾಹಿತ್ಯ ಪ್ರೇಮಿಗಳು ಚಿಕ್ಕದಾದ ಸಂವಾದವನ್ನೂ ನಡೆಸಿ ತಮ್ಮಲ್ಲಿನ ಆತಂಕಗಳನ್ನು ಹೊರಗೆಡಹಿದರು.
ಜಿಲ್ಲಾ ಪಂಚಾಯಿತಿ, ತಾ.ಪಂ., ಗ್ರಾ.ಪಂ. ಮೂಲಕ ಅನೇಕ ಗ್ರಾಮೀಣ ಅಭಿವೃದ್ಧಿ ಯೋಜನೆಗಳನ್ನು ಸರ್ಕಾರ ನೀಡಿದೆ. ಸರ್ಕಾರದ ಯೋಜನೆಗಳ ಅನುಷ್ಠಾನ ಆಗುವಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಬಳಸಿಕೊಳ್ಳುವ ಜನ ಸಮೂಹದ ಪಾತ್ರ ಬಹಳ ಮುಖ್ಯ. ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು, ಹಳ್ಳಿಗಳ ಏಳಿಗೆಗೆ ಬಗ್ಗೆ ಸರ್ಕಾರದ ಕಾಳಜಿ ಏನಿರಬೇಕೆಂಬ ಬಗ್ಗೆ ಚರ್ಚಿಸಲಾಯಿತು.
ಮನೆ ಬಾಗಿಲಿಗೇ ಸೌಲಭ್ಯ: ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಸುಬ್ರಹ್ಮಣ್ಯ ಮಾತನಾಡಿ, ಪಂಚಾಯತ್‌ರಾಜ್ ವ್ಯವಸ್ಥೆ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆ. ಸರ್ಕಾರ ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವ ವ್ಯವಸ್ಥೆಯಾಗಿದೆ ಎಂದರು.
ಜಿ.ಪಂಚಾಯಿತಿ, ತಾ. ಪಂಚಾಯಿತಿ, ಗ್ರಾ.ಪಂಚಾಯಿತಿಗೆ ತನ್ನದೇ ಆದ ಪರಿಧಿ ಇದ್ದು, ವಿವಿಧ ಜವಾಬ್ದಾರಿಗಳನ್ನು ಈ ಸಂಸ್ಥೆಗಳಿಗೆ ವಹಿಸಲಾಗಿದೆ ಎಂದು ಹೇಳಿದ ಅವರು ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಜನರಿಂದ ತೆರಿಗೆ ಸಂಗ್ರಹಿಸುವ ಅಧಿಕಾರ ಇರುವುದು ಗ್ರಾಮ ಪಂಚಾಯಿತಿಗೆ ಮಾತ್ರ. ಹಾಗೆಯೇ ಗ್ರಾಮ ಸಭೆಗಳು ಈ ಎಲ್ಲಾ ವ್ಯವಸ್ಥೆಗೆ ಬೇರು ಇದ್ದಂತೆ ಎಂದು ಅಭಿಪ್ರಾಯಪಟ್ಟರು.
ಸಮನ್ವಯ ಅಗತ್ಯ: ನಂತರ ಮಾತನಾಡಿದ ಹೊಸನಗರ ತಾಲೂಕು ಮೇಲಿನ ಬೆಸುಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್.ವಿ.ಲಲಿತಾ, ಇರುವ ವ್ಯವಸ್ಥೆಯೊಳಗೆ ಅಧಿಕಾರಿಗಳು, ಸಿಬ್ಬಂದಿ, ಜನರು ಹಾಗೂ ಜನಪ್ರತಿನಿಧಿಗಳನ್ನು ಒಟ್ಟಾಗಿ ತೆಗೆದುಕೊಂಡು ಹೋದರೆ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ ಮಾತನಾಡಿ, ಯೋಜನಾಬದ್ಧವಾಗಿ ಕೆಲಸ ಮಾಡಿದರೆ ಅಭಿವೃದ್ಧಿ ತಂತಾನೆ ಆಗುತ್ತದೆ. ಇಂದು ತಾಲೂಕು ಪಂಚಾಯಿತಿ ಪೋಸ್ಟ್‌ಮನ್ ಕೆಲಸ ಮಾಡುತ್ತದೆ. ವೈಯಕ್ತಿಕವಾಗಿ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಎಂಬ ಎರಡು ಹಂತದ ವ್ಯವಸ್ಥೆ ಸಾಕೆಂಬುದು ನನ್ನ ಅಭಿಪ್ರಾಯವೆಂದರು.
ಮಾರ್ಗಸೂಚಿಯೇ ಅಡ್ಡಿ: ಪಿಡಿಓ ಎಸ್.ಪ್ರಕಾಶ್ ಮಾತನಾಡಿ, ಸರ್ಕಾರದ ಮಾರ್ಗಸೂಚಿಗಳು ಅನೇಕ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯ ನಿರ್ವಹಿಸಲು ಅಡ್ಡಿಯಾಗುತ್ತಿದೆ. ಅನೇಕ ಗ್ರಾಮ ಪಂಚಾಯಿತಿಗಳು ಆರ್ಥಿಕ ಸಂಕಷ್ಟದಲ್ಲಿವೆ. ಇವುಗಳಿಗೆ ಕೇರಳ ಮಾದರಿ ಅನಿರ್ಭಂಧಿತ ಅನುದಾನ ಕಲ್ಪಿಸುವ ಅಗತ್ಯವಿದೆ ಎಂದರು.
ಗ್ರಾಪಂ ವ್ಯವಸ್ಥೆ ಕುರಿತಂತೆ ಸಂಶೋಧನೆ ಮಾಡಿರುವ ಸಚ್ಚಿದಾನಂದ ಮಾತನಾಡಿ, ಇಲಾಖೆಗಳ ನಡುವಿನ ಘರ್ಷಣೆಗಳಿಂದಾಗಿ ಗ್ರಾಮೀಣ ಪ್ರದೇಶದ ಜನರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಮತ್ತು ಗ್ರಾಮ ಪಂಚಾಯಿತಿ ವ್ಯವಸ್ಥೆ ಸೋಲುತ್ತಿರುವ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜೆ.ಸದಾನಂದ, ನರೇಗಾ ಯೋಜನೆಯಿಂದ ಗ್ರಾಮಾಂತರ ಪ್ರದೇಶದ ಅನೇಕ ಸಮಸ್ಯೆ ಪರಿಹರಿಸಿಕೊಳ್ಳಲು ಅವಕಾಶವಿದ್ದರೂ, ಉಪಯೋಗಿಸಲು ಗ್ರಾಮೀಣ ಜನರು ಹಿಂದೇಟು ಹಾಕುತ್ತಿದ್ದಾರೆ ಎಂದು ವಿಷಾದಿಸಿದರು.
ಪತ್ರಕರ್ತ ಆರ್.ಎಸ್.ಹಾಲಸ್ವಾಮಿ ಗೋಷ್ಠಿಯನ್ನು ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement