ಕಾಂಗ್ರೆಸ್ ಮುಕ್ತ ಕರ್ನಾಟಕವೇ ನಮ್ಮ ಗುರಿ: ಬಿಎಸ್ವೈ
ಕ.ಪ್ರ.ವಾರ್ತೆ, ಸಾಗರ, ಜೂ.2
ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿಸುವುದೇ ನಮ್ಮ ಮುಂದಿನ ಗುರಿ ಎಂದು ನೂತನ ಸಂಸದ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಾಲೂಕು ಬಿಜೆಪಿ ಘಟಕ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮತದಾರರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ದೇಶಕ್ಕಾಗಿ ಪಣತೊಟ್ಟು ಅದು ಪ್ರಜ್ಞಾವಂತ ಮತದಾರರು, ಪಕ್ಷದ ಕಾರ್ಯಕರ್ತರಿಂದ ಈಡೇರಿದಂತಾಗಿದೆ. ಈಗ ನಮ್ಮ ಮುಂದೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆ ಮಾಡುವ ಗುರಿ ಇದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು, ಮತದಾರರು ಈಗಿನಿಂದಲೇ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ವಿಫಲ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರ ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ಇದಕ್ಕೆ ಪರಿಹಾರವಾಗಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟುವ ಕೆಲಸ ನಡೆಯಬೇಕು. ಕಾರ್ಯಕರ್ತರು ಜಾತಿ, ವರ್ಗ, ಮತ ಭೇದವಿಲ್ಲದೆ ಎಲ್ಲರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಬೇಕು. ಕಾಂಗ್ರೆಸ್ಸಿನ ಆಡಳಿತ ವೈಫಲ್ಯವನ್ನು ಜನರ ಗಮನಕ್ಕೆ ತಂದು ಈ ದಿಸೆಯಲ್ಲಿ ಹೋರಾಟ ರೂಪಿಸಬೇಕಿದೆ ಎಂದರು.
ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಇಡೀ ಜಗತ್ತು ಭಾರತವನ್ನು ಕುತೂಹಲದಿಂದ ನೋಡುತ್ತಿದೆ. ಪ್ರಧಾನಿ ಮೋದಿಯವರು ತೆಗೆದುಕೊಳ್ಳುತ್ತಿರುವ ನಿಲುವುಗಳು ಆಶಾಭಾವನೆ ಮೂಡಿಸುತ್ತಿದೆ. ರೈತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈಲು ಮಾರ್ಗ: ತಾಳಗುಪ್ಪ ರೈಲು ಮಾರ್ಗವನ್ನು ಕೊಂಕಣ ರೈಲು ಮಾರ್ಗಕ್ಕೆ ಸೇರಿಸುವ ಕುರಿತು ರೇಲ್ವೆ ಸಚಿವ ಡಿ.ವಿ.ಸದಾನಂದ ಗೌಡರ ಜೊತೆ ಈಗಾಗಲೆ ಚರ್ಚೆ ನಡೆಸಿದ್ದೇನೆ. ಮಾರ್ಗ ಮಧ್ಯೆ ಸುಮಾರು 52 ಕಿ.ಮೀ. ಅರಣ್ಯವಿದೆ. ಜೊತೆಗೆ ಸುರಂಗಮಾರ್ಗ ನಿರ್ಮಿಸುವ ಅಗತ್ಯವಿರುವುದರಿಂದ ಪರಿಸರ ತಜ್ಞರ ಜೊತೆ ಚರ್ಚೆ ನಡೆಸಿ ಮುಂದಿನ ಹೆಜ್ಜೆ ಇಡಲಾಗುವುದು. ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹಿಂದಿನ ಸರ್ಕಾರದ ಅವಧಿಯಲ್ಲಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ವಾಪಸ್ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕ್ಷೇತ್ರದಲ್ಲಿ ಮತದಾರರು ಜಾತಿ ರಾಜಕಾರಣ ಮಾಡಲಿಲ್ಲ. ಅಪಪ್ರಚಾರಕ್ಕೆ ಕಿವಿಗೊಡಲಿಲ್ಲ. ಯಡಿಯೂರಪ್ಪನವರು ಮಾಡಿದ ಜನಪರ ಕೆಲಸ ಹಾಗೂ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂಬ ಒತ್ತಾಸೆಯಿಂದ ಮತ ಕೊಟ್ಟು ಗೆಲ್ಲಿಸಿದ್ದಾರೆ ಎಂದರು.
ತಾಳಗುಪ್ಪ- ಕೊಂಕಣ ರೈಲು: ಸಾಗರದಲ್ಲಿ ರೈಲು ಸೇವೆಗೆ ಪುನರ್ಜನ್ಮ ನೀಡಿದವರು, ಪಟ್ಟಣಕ್ಕೆ ಶರಾವತಿ ಹಿನ್ನೀರಿನಿಂದ ನೀರು ತರುವ ಯೋಜನೆಗೆ, ಒಳಚರಂಡಿ ಯೋಜನೆಗೆ, ತುಮರಿಯಲ್ಲಿ ಹೊಸ ಲಾಂಚ್ ಸೇವೆ ಆರಂಭಿಸಿದವರು ಯಡಿಯೂರಪ್ಪ. ಮುಂದೆ ತಾಳಗುಪ್ಪ ರೈಲು ಮಾರ್ಗವನ್ನು ಕೊಂಕಣ ರೈಲುಮಾರ್ಗಕ್ಕೆ ಸೇರಿಸುವ ಕೆಲಸವನ್ನು ಮಾಡುತ್ತಾರೆ ಎನ್ನುವ ಭರವಸೆ ಇದೆ ಎಂದು ಹೇಳಿದರು.
ಬಿ.ಆರ್.ಜಯಂತ್, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾವಿರಾರು ಕೋಟಿ ರೂ. ಹಣ ಸೋರಿಕೆಯಾಗುತ್ತಿದೆ. ಇದರಲ್ಲಿ ದೊಡ್ಡ ಪಾಲಿನ ಹಣವನ್ನು ರೈತರ ಕೂಲಿ ವೆಚ್ಚಕ್ಕೆ ಕೊಡುವಂತಾಗಬೇಕು ಎಂದು ಒತ್ತಾಯಿಸಿದರಲ್ಲದೆ ಹೋರಾಟಗಾರರಿಗೆ ಯಾವುದೇ ಅಧಿಕಾರ ಬೇಕಿಲ್ಲ. ಯಡಿಯೂರಪ್ಪನವರು ಕೇಂದ್ರದಲ್ಲಿ ಮಂತ್ರಿಯಾಗದಿದ್ದರೂ ಜನಪರವಾದ ಕೆಲಸ ಮಾಡುವ ಶಕ್ತಿ ಅವರಿಗಿದೆ ಎಂದು ಹೇಳಿದರು.
ಯು.ಎಚ್.ರಾಮಪ್ಪ, ಟಿ.ಡಿ.ಮೇಘರಾಜ್, ಚೇತನರಾಜ್ ಮಾತನಾಡಿದರು. ಪಕ್ಷದ ಪ್ರಮುಖರಾದ ಪಾಣಿ ರಾಜಪ್ಪ, ಜಗದೀಶ ಒಡೆಯರ್, ಬಿ.ಎಸ್.ಗುರುಮೂರ್ತಿ, ಸತೀಶಬಾಬು, ಎಸ್.ವಿ.ಕೃಷ್ಣಮೂರ್ತಿ, ಸಂತೋಷ ಶೇಟ್, ವ.ಶಂ.ರಾಮಚಂದ್ರಭಟ್, ನಗರಸಭೆ ಸದಸ್ಯರು ಮತ್ತಿತರರು ಹಾಜರಿದ್ದರು.
ಮತದಾರರಿಗೆ ಬಿಎಸ್ವೈ ಅಭಿನಂದನೆ
ಸೊರಬ: ಪ್ರಜಾಪ್ರಭುತ್ವದಲ್ಲಿ ಪ್ರಜ್ಞಾವಂತಿಕೆ ಮತದಾನವಾಗಿದ್ದು, ಇದೇ ಮೊದಲ ಬಾರಿಗೆ ಎಂದು ಸಂಸದ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಪಟ್ಟಣದ ದಿವಾಕರ ಭಟ್ ಭಾವೆ ಇವರ ತೋಟದ ಆವರಣದಲ್ಲಿ ಸೋಮವಾರ ಮಧ್ಯಾಹ್ನ ತಾಲೂಕು ಬಿಜೆಪಿ ಪಕ್ಷ ಹಮ್ಮಿಕೊಂಡಿದ್ದ ಅಭಿನಂದನಾ ಸಭೆ ಉದ್ದೇಶಿಸಿ ಮಾತನಾಡಿ, ಅನಿರೀಕ್ಷಿತ, ಅಚ್ಚರಿ ಫಲಿತಾಂಶ ನೀಡಿದ ಅಭಿವೃದ್ಧಿಯನ್ನು ಬೆಂಬಲಿಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಎಂದರು. ಅಧಿಕಾರಕ್ಕಾಗಿ ಜನಸೇವೆಯಲ್ಲ, ಜನಸೇವೆಗಾಗಿ ದೊರೆತ ಅಧಿಕಾರ ಎಂದರಿತು ನಿಸ್ವಾರ್ಥ ಸೇವೆಗೆ ಮುಂದಾಗಬೇಕಾದುದು ನಮ್ಮ ಮುಂದಿನ ಕರ್ತವ್ಯ. ನಾನು ಮರೆಯಲಾಗದ ಚುನಾವಣೆ ಇದು. ತಂದೆಯ ಸ್ಥಾನಕ್ಕೆ ಮಗ ಬರುವುದು ಸಾಮಾನ್ಯ, ಆದರೆ, ಅನಿರೀಕ್ಷಿತವಾಗಿ ಮಗನ ಸ್ಥಾನಕ್ಕೆ ನಾನು ಹೋಗಬೇಕಾಯಿತು ಎಂದು ಹೇಳಿದರು.
ಮಾಜಿ ಸಂಸದ ಬಿ.ವೈ. ರಾಘವೇಂದ್ರ, ಜಿಪಂ ಸದಸ್ಯ ಹುನವಳ್ಳಿ ಗಂಗಾಧರಪ್ಪ, ಇದೇ ವೇಳೆ ವಿವಿಧ ಸಂಘ, ಸಂಸ್ಥೆ, ಸಮಾಜದವರು ಬಿಎಸ್ವೈ ಅವರಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು. ಕಾರ್ಯಕ್ರಮಕ್ಕೂ ಮುನ್ನ ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರು ಆರ್ ಎಸ್ಎಸ್ ಹೊಸಬಾಳೆ ದತ್ತಾತ್ರೇಯ ಅವರ ಮನೆಗೆ ತೆರಳಿ ಉಭಯ ಕುಶಲೋಪರಿ ಮಾತನಾಡಿದರು. ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಸದಸ್ಯರಾದ ಗುರುಕುಮಾರ್ ಪಾಟೀಲ್, ಕೋಮಲಾ ನಿರಂಜನ್, ಮಲ್ಲಮ್ಮ ಮಲ್ಲಿಕಾರ್ಜುನ್, ಪಕ್ಷದ ಪ್ರಮುಖರಾದ ದತ್ತಾತ್ರಿ, ಅಶೋಕ್ ಅಗಡಿ, ಎಂ.ಆರ್. ಪಾಟೀಲ್, ಚೆನ್ನವೀರಪ್ಪ, ಕೀರ್ತಿಗೌಡ, ಚಿಕ್ಕಾವಲಿ ನಾಗರಾಜಗೌಡ ಮುಂತಾದವರು ಇದ್ದರು.
ತೆರಿಗೆ ಪದ್ಧತಿ ಸರಳೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಚಿಂತನೆ
ಶಿಕಾರಿಪುರ: ತೆರಿಗೆ ಪದ್ಧತಿಯನ್ನು ಸರಳೀಕರಿಸುವ ಮೂಲಕ ಪ್ರಾಮಾಣಿಕ ತೆರಿಗೆ ಪಾವತಿಸುವ ವರ್ತಕರಿಗೆ ಅಧಿಕಾರಿಗಳಿಂದ ಕಿರುಕುಳ ತಪ್ಪಿಸುವ ನೂತನ ತೆರಿಗೆ ಪದ್ಧತಿಗೆ ಪ್ರಧಾನಿ ನರೇಂದ್ರಮೋದಿ ಚಿಂತನೆ ನಡೆಸಿದ್ದು ಈ ದಿಸೆಯಲ್ಲಿ ವರ್ತಕ ಸಮುದಾಯಕ್ಕೆ ಅಧಿಕಾರಿ ವರ್ಗದಿಂದ ಕಿರುಕುಳ ತಪ್ಪಿಸುವ ಮಹತ್ತರ ಜವಾಬ್ದಾರಿ ಚುನಾಯಿತ ಪ್ರತಿನಿಧಿಗಳ ಮುಂದಿದೆ ಎಂದು ನೂತನ ಸಂಸದ ಯಡಿಯೂರಪ್ಪ ತಿಳಿಸಿದರು.
ಸೋಮವಾರ ಪಟ್ಟಣದ ಮಾಳೇರಕೇರಿಯಲ್ಲಿನ ಬಿಜೆಪಿ ಕಚೇರಿಯಲ್ಲಿ ನೂತನವಾಗಿ ಅತೀ ಹೆಚ್ಚು ಮತಗಳ ಅಂತರದಿಂದ ಲೋಕಸಭೆಗೆ ಆಯ್ಕೆಯಾದ ಹಿನ್ನಲೆಯಲ್ಲಿ ತಾಲೂಕು ವರ್ತಕರ ಸಂಘದ ವತಿಯಿಂದ ನಡೆದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಮತದಾರರಿಗೆ ಕೃತಜ್ಞತೆ: ಲೋಕಸಭೆ ಚುನಾವಣೆಯಲ್ಲಿ ತಾಲೂಕಿನಲ್ಲಿ 59 ಸಾವಿರಕ್ಕಿಂತ ಅಧಿಕ ಮತಗಳ ಅಂತರವನ್ನು ದೊರಕಿಸಿ ಆಯ್ಕೆಗೆ ಸಹಕರಿಸಿದ ತಾಲೂಕಿನ ಜನತೆಗೆ ಕೃತಜ್ಞತೆಯನ್ನು ಸಲ್ಲಿಸಿದ ಅವರು ಜನತೆಯ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿರುವುದಾಗಿ ತಿಳಿಸಿದರು.
ತಾ.ವರ್ತಕರ ಸಂಘದ ವತಿಯಿಂದ ಅಧ್ಯಕ್ಷ ಗುಡ್ಡಪ್ಪ, ಷಾ ಸೂರಜ್ಮಲ್ ಜೈನ್, ಜಿತೇಂದ್ರ, ಎಂ.ಬಿ ಶಿವಕುಮಾರ್ ಬಸವರಾಜ್, ಮಧುಕೇಶ್ವರ್, ವೀರೇಶ್,ಶಿವಬಸವ, ಹದಡಿ ಮಂಜುನಾಥ್, ಪಾಲಾಕ್ಷಪ್ಪ ಮತ್ತಿತರರು ನೂತನ ಸಂಸದರನ್ನು ಅಭಿನಂದಿಸಿದರು. ಈ ಸಂದರ್ರ್ಭದಲ್ಲಿ ಮಾಜಿ ಸಂಸದ ರಾಘವೇಂದ್ರ, ಮುಖಂಡ ಗುರುಮೂರ್ತಿ, ಸುಕೇಂದ್ರಪ್ಪ, ಅಗಡಿ ಅಶೋಕ್ ಮತ್ತಿತರರು ಇದ್ದರು.