ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ರಾಜ್ಯದ ಸಂಸದರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಲಿ'

Lingaraj Badiger
Updated On : 3 Jun 2014, 11:34 am

ಶಿವಮೊಗ್ಗ:  ರಾಜ್ಯದ ಸಂಸದರು ಈ ಬಾರಿ ಸಂಸತ್ತಿನಲ್ಲಿ ಪ್ರಮಾಣ ವಚನವನ್ನು ಕನ್ನಡದಲ್ಲಿಯೇ ಸ್ವೀಕರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಒತ್ತಾಯಪೂರ್ವಕ ಮನವಿ ಮಾಡಿದ್ದಾರೆ.
ನಗರದಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು, ಕಳೆದ ಸಾಲಿನಲ್ಲಿಯೂ ಸಹ ಇದೇ ಒತ್ತಾಯ ಮಾಡಿದ್ದೆವು. ಆದರೂ ಕೆಲವರು ಮರೆತೋ, ಗೊತ್ತಿಲ್ಲದೆಯೋ ಅನುಸರಿಸಲಿಲ್ಲ. ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಈ ಬಾರಿ ಕನ್ನಡದಲ್ಲೇ ಪ್ರಮಾಣ ಸ್ವೀಕರಿಸಿ ಎಂದು ಒತ್ತಾಯಿಸಿದರು.
ಕನ್ನಡ ಮಾಧ್ಯಮದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಪ್ರಸ್ತಾಪಿಸಿದ ಅವರು, ಈ ದಿಕ್ಕಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ. ಈ ತೀರ್ಪು ಕನ್ನಡಕ್ಕೆ ಮಾತ್ರ ಗಂಡಾಂತರವಲ್ಲ. ಎಲ್ಲ ಭಾಷೆಗಳಿಗೂ ಸಹ. ಹಾಗಾಗಿ ಸಂವಿಧಾನ ತಿದ್ದುಪಡಿ ಮಾಡಲು ಎಲ್ಲರೂ ಒಟ್ಟಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕಿದೆ. ಮಾತೃಭಾಷೆ ಮಾಧ್ಯಮ ವಿಚಾರದಲ್ಲಿ ಸರ್ಕಾರ ಅಚಲ ನಿರ್ಧಾರ ತೆಗೆದುಕೊಳ್ಳಬೇಕು. ಮಾತೃಭಾಷೆ ಎಂಬ ಪರಿಭಾಷೆಯ ಬದಲಾಗಿ ರಾಜ್ಯ ಭಾಷೆಯಲ್ಲಿ 1 ರಿಂದ 4ನೇ ತರಗತಿವರೆಗೆ ಕನ್ನಡವನ್ನು ಕಡ್ಡಾಯಗೊಳಿಸಬೇಕು ಎಂದರು.
ಸರೋಜಿನಿ ಮಹಿಷಿ ಆಯೋಗದ ಶಿಫಾರ್ಸು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡಲು ಈ ಶಿಫಾರ್ಸುಗಳನ್ನು ತುರ್ತಾಗಿ ಕೆಲವನ್ನು ಕೈ ಬಿಟ್ಟು, ಕೆಲವನ್ನು ಸೇರಿಸಿ, ತಿದ್ದುಪಡಿ ಮಾಡಿ ಪರಿಷ್ಕರಿಸಿ ಜಾರಿಗೊಳಿಸಬೇಕು ಎಂದು ಅವರು ತಿಳಿಸಿದರು.
ತೃಪ್ತಿ ಇದೆ:  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ 2 ಅವಧಿಯ ಕಳೆದ 6 ವರ್ಷಗಳಲ್ಲಿ ಹಲವಾರು ಕನ್ನಡ ಪರ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡ ತೃಪ್ತಿ ತಮಗಿದೆ ಎಂದು ಇದೇ ಜು.10 ರಂದು ಅವಧಿ ಪೂರೈಸಲಿರುವ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಈ ಅವಧಿಯಲ್ಲಿ ಶಿಕ್ಷಣ ಕ್ಷೇತ್ರ, ಆಡಳಿತ ಭಾಷೆ ವಿಷಯವಾಗಿ, ಗಡಿ ಭಾಗದಲ್ಲಿ ಕನ್ನಡ ಉಳಿಸುವ, ನ್ಯಾಯಾಲಯದಲ್ಲಿ ಕನ್ನಡ ಬಳಕೆಗೆ ತರುವ, ಹೊರನಾಡು, ಹೊರ ರಾಷ್ಟ್ರಗಳಲ್ಲಿ ಕನ್ನಡ ಶಾಲೆಗಳನ್ನು ತೆರೆಯುವ ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಯಿತು. ರಾಜ್ಯದ 7 ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಕೇಂದ್ರಗಳು, ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಪ್ರಶಸ್ತಿ, ನುಡಿತೇರು ಯೋಜನೆ, ಮದರಸ, ಮಸೀದಿಗಳಲ್ಲಿ ಕನ್ನಡ ಭಾಷಾ ಕಲಿಕೆ, ಗಡಿ ಭಾಗಗಳಲ್ಲಿ ಕನ್ನಡ ಭವನಗಳನ್ನು ನಿರ್ಮಿಸಲಾಗಿದೆ ಎಂದರು.
ಶಿಫಾರ್ಸು ಸಲ್ಲಿಕೆ:  ರಾಜ್ಯ ಸರ್ಕಾರದಿಂದ 53 ಕನ್ನಡ ಭವನಗಳ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, 38 ಭವನಗಳಿಗೆ ಹಣ ಬಿಡುಗಡೆ ಆಗಿದೆ. ಈ ಪೈಕಿ 23 ಭವನಗಳು ಉದ್ಘಾಟನೆ ಆಗಿವೆ. 15 ಹೊರ ರಾಷ್ಟ್ರಗಳಲ್ಲಿ ಕನ್ನಡ ಕಲಿಕೆ ಕೇಂದ್ರಗಳನ್ನು ತೆರೆಯಲಾಗಿದ್ದು, 6 ತಿಂಗಳ ಕೋರ್ಸ್ಗಳನ್ನು ತೆರೆಯಲಾಗಿದೆ. ಸರ್ಕಾರ ಜಾರಿಗೆ ತರಲೇಬೇಕಾದ ಸುಮಾರು 33 ಅಂಶಗಳ ಶಿಫಾರ್ಸುಗಳನ್ನು ಪುಸ್ತಕ ರೂಪದಲ್ಲಿ ಸಲ್ಲಿಸಲಾಗುತ್ತಿದೆ. ಆಡಳಿತ ಕನ್ನಡ, ಉದ್ಯೋಗ ಕನ್ನಡ, ವಿದ್ಯಾರ್ಥಿ ಕನ್ನಡ, ನ್ಯಾಯಾಂಗ ಕನ್ನಡ, ಗಣಕ ಕನ್ನಡ, ಒಳನಾಡು ಕನ್ನಡ, ಗಡಿ ಕನ್ನಡ, ಹೊರನಾಡು ಕನ್ನಡ, ಶಾಸ್ತ್ರೀಯ ಕನ್ನಡ ಹಾಗೂ ಸಾಂಸ್ಕೃತಿಕ ಸಂಗತಿ ಎಂಬ 10 ಪರಿವಿಡಿಗಳಲ್ಲಿ ಇಡೀ ರಾಜ್ಯದಲ್ಲಿ ವಿವಿಧ ರೀತಿಯಲ್ಲಿ ಕನ್ನಡ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಶಿಫಾರ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ.ಮುರಳೀಧರ, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement