ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಹುಲ್ಲು ಕಳೆ ಬೆಳೆದೇ ಮುಚ್ಚಿ ಹೋಯಿತು ಎಲ್ಲಾ'

Lingaraj Badiger
Updated On : 3 Jun 2014, 11:34 am

ಗಂಭೀರ ಕವನಗಳಿಗೆ ಸಾಕ್ಷಿಯಾದ ಜಿಎಸ್ಸೆಸ್ ಮಹಾವೇದಿಕೆ, ಊಟದ ವೇಳೆಗೆ ಕೇಳುಗರ ಸಂಖ್ಯೆ ಕ್ಷೀಣ

ರಾಷ್ಟ್ರಕವಿ ಜಿಎಸ್ಸೆಸ್ ಮಹಾವೇದಿಕೆ,
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.2
ಜಿಲ್ಲಾ ಸಾಹಿತ್ಯ ಸಮ್ಮೇಳನದ ಮೊದಲ ದಿನ- ಟೊಳ್ಳು ಗಟ್ಟಿ- ಕವನಗಳ ವಾಚನ ಕಂಡಿದ್ದ ರಾಷ್ಟ್ರಕವಿ ಜಿಎಸ್ಸೆಸ್ ಮಹಾವೇದಿಕೆಯು ಎರಡನೇ ದಿನವಾದ ಸೋಮವಾರ ಗಂಭೀರ ಕವನಗಳಿಗೆ ಸಾಕ್ಷಿಯಾಯಿತು.
ಆದರೆ ಸರಿಯಾಗಿ ಭೋಜನದ ವೇಳೆಯಲ್ಲಿಯೇ ಕವಿಗೋಷ್ಠಿ ಆರಂಭವಾದ್ದರಿಂದ ಅತ್ಯಂತ ಕಡಿಮೆ ಕೇಳುಗರಿದ್ದರು.
ಕವಿ ಎಲ್.ಸಿ. ಸುಮಿತ್ರಾ ಅವರು 'ಹುಲ್ಲು ಕಳೆ ಬೆಳೆದೇ ಮುಚ್ಚಿ ಹೋಯಿತು ಎಲ್ಲಾ'  ಎಂದು ಬದುಕನ್ನು ಪ್ರತಿಬಿಂಬಿಸುವ ಕವನ ವಾಚಿಸಿದ ಮೇಲೆ ಶುಭಾ ಮರವಂತೆ ಅವರು 'ಪ್ರಶ್ನೆ ಉತ್ತರ' ಎಂಬ ಕವನದ ಮೂಲಕ ಮಗನಿಗೆ ಬುದ್ದಿ ಮಾತು ಹೇಳಿದ್ದು ಹೀಗೆ:
ಸೂತ್ರಗಳ ಲೆಕ್ಕಚಾರಗಳಿಗೆ
ತಲೆ ಕೆಡಿಸಿಕೊಳ್ಳಬೇಡ
ಇದ್ದುಬಿಡು ಸುಮ್ಮನೆ
ಪ್ರಶ್ನೆಗಳೇ ಸೋಲುತ್ತವೆ
ಉತ್ತರದ ಮುಂದೆ
ಕಮಲಾಮೂರ್ತಿ ಅವರು 'ಹೊಸ ವರ್ಷದ ಬೇಡಿಕೆ' ಕವನ ವಾಚಿಸಿ 'ಸಾಕು ನರಕ ಬೇಕು ನಾಕ, ಆಗದಿದ್ದರೆ ಕೊಟ್ಟುಬಿಡು
ದಯಾಮರಣ' ಎಂದರು.
ಅಕ್ಷತಾ ಹುಂಚದಕಟ್ಟೆ ಅವರು 'ಕಾರ್ಯಾಚರಣೆ' ಕವನದ ಮೂಲಕ ಕುಟುಂಬಮೊಂದು ಎತ್ತಂಗಡಿಯಾಗುವ ಚಿತ್ರಣ ನೀಡುತ್ತಾ 'ಬದುಕನ್ನುರುಳಿಸುವ ಎಲ್ಲ ಕಾರ್ಯಾಚರಣೆಗಳು ಕತ್ತಲಿಗೆ ಕಾಯುತ್ತವೆ, ಕತ್ತಲಲಿ ನಡೆಯುತ್ತವೆ' ಎಂದು ಮಾರ್ಮಿಕವಾಗಿ ನುಡಿದರು.
ವಿಲಿಯಂ ಸಾಗರ ಅವರು 'ಅಪ್ಪನ ಸಾವು ನೆನೆದು' ಕವನದಲ್ಲಿ ತಮ್ಮ ನೆನಪುಗಳನ್ನು ಹರಿಬಿಟ್ಟರು.
ಪ್ರಕಾಶ್ ಆರ್.ಕಮ್ಮಾರ್ ಅವರು 'ಮಾಡಿದ್ದುಣ್ಣೋ ಮಾರಾಯ' ಕವನದ ಮೂಲಕ 'ನಮ್ಮೊಡನೆ ಬೆರೆಯದ ದೇವರು ಇದ್ದರೇನು ಬಿಟ್ಟರೇನು' ಎಂದು ಪ್ರಶ್ನಿಸಿದರು.
ಡಾ. ಮಿರ್ಜಾ ಬಷೀರ್ ಅವರು ಸಭಾಂಗಣದ ಖಾಲಿ ಕುರ್ಚಿಗಳಿಗೆ ಸಮಸ್ಕರಿಸಿ 'ರಜೆ' ಕವನದ ಮೂಲಕ ಖ್ಯಾತನಾಮರು ತೀರಿಕೊಂಡಾಗ ರಜೆಗಾಗಿ ಕಾಯುವುದನ್ನು ವಿಡಂಬಿಸಿದರು. 'ಎಷ್ಟು ಬೇಗ ಸಾಯಬಹುದು ತಿಂಗಳಿಗೊಬ್ಬ ವಾರಕ್ಕೊಬ್ಬ ಬರಲಿ ರಜೆಯ ಹಬ್ಬ' ಎನ್ನುತ್ತಾ 'ಸತ್ತವರ ಮಾನ ಸತ್ತಮೇಲೂ ಕಳೆಯಬೇಡಿ' ಎಂದರು.
ಸುಧಾಕಿರಣ ಅಧಿಕಶ್ರೇಣಿ ಅವರು 'ಹಾಲು ಹಳ್ಳ ಹರಿಯರಿ' ಎನ್ನುತ್ತಾ 'ನಾಡ ಕಟ್ಟುವಲ್ಲಿ ಕರ್ಮಯೋಗಿ ಫಲವಿದೆ' ಎಂದು ನೆನಪಿಸಿದರು.
ಚುನಾವಣೆ ಭ್ರಷ್ಟಾಚಾರದ ಬಗ್ಗೆ ಸೂಚ್ಯವಾಗಿ ವಿಡಂಬಿಸಿದ ಡಾ. ವಿಜಯಾ ದೇವಿ ಅವರು 'ಅಣ್ಣ ಬಸವಣ್ಣ ನಿನ್ನ ಓಟು ಯಾರಿಗಣ್ಣ' ಕವನ ವಾಚಿಸಿ 'ಓಟು ನೋಟುಗಳ ಹಿಂದೆ ಅಯ್ಯಾ, ನಮ್ಮ ಓಟವಯ್ಯ ನಮ್ಮ ನೋಟವಯ್ಯ' ಎಂದರು
ದೀಪ್ತಿ ಭದ್ರಾವತಿ 'ಮನುವಿಗೊಂದು ಪತ್ರ' ಕವನದ ಮೂಲಕ ಸ್ತ್ರೀ ಸಂವೇದನೆಯ ಗಾಢ ಅನುಭವವನ್ನು ಕಟ್ಟಿಕೊಟ್ಟರು. 'ನಾವಿಲ್ಲಿ ತುಸು ಕ್ಷೇಮ, ಕಬ್ಬಿಣದ ಪಿಟಾರಿಗಳಲ್ಲಿ ಅಡಗಿಸಿಟ್ಟ ದನಿಗಳನ್ನು ಹುಡುಕಿದ ಮೇಲೆ' ಮೇಲೆ ಎನ್ನುತ್ತಾ 'ನೀನೊಮ್ಮೆ ಹೆಣ್ಣಾಗಿ ಹುಟ್ಟಿಬಿಡು' ಎಂದು ಮನವಿಗೆ ಸವಾಲೆಸೆದರು.
ನಂದಿನಿ ನಾಯ್ಡು ಅವರು ಅತ್ಯಾಚಾರದಿಂದ ಸತ್ತ ಹೆಣ್ಣುಮಕ್ಕಳ ನೆನಪಲ್ಲಿ ಕವನ ವಾಚಿಸಿ 'ಬಿಕ್ಕಿಬಿಕ್ಕಿ ಅತ್ತು ಬೇಡಿದ ಹೆಣ್ಣ ಹೆಂಡದಂತೆ ಹಂಚಿಕೊಂಡರು' ಎಂದು ಹಸಿಹಸಿ ಚಿತ್ರಣದ ಮೂಲಕ ಕರಾಳತೆಯ ಪರಿಚಯ ಮಾಡಿಕೊಟ್ಟರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅಲ್ಲಮಪ್ರಭು ಬೆಟ್ಟದೂರು ಅವರು ವಾಚಿಸಿದ 'ತೋಟಕ್ಕೆ ಸಲಹೆ' ಎಂಬ ಲಘು ಕವನಮೊಂದು ಹೀಗಿತ್ತು.
ಕವಿಗಳು ಹೇಳುತ್ತಾರೆ
ಹೂಗಳ ಬೆಳೆಯಿರಿ
ರಸಿಕರು ಹೇಳುತ್ತಾರೆ
ಹಣ್ಣುಗಳ ಬೆಳೆಯಿರಿ
ಸಂಸಾರಿಗರು ಹೇಳುತ್ತಾರೆ
ಕಾಯಿಪಲ್ಯೆ ಬೆಳೆಯಿರಿ
ನಾನು ಬೆಳೆಯುತ್ತೇನೆ
ಮೂರೂ ತಿಳಿಯಿರಿ
ಏಕೆಂದರೆ
ನಾ ಕವಿ, ರಸಿಕ, ಸಂಸಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement