ಮದ್ಯದಂಗಡಿ ತೆರವಿಗೆ ಗ್ರಾಮಸ್ಥರ ಆಗ್ರಹ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಜೂ.3
ಶಿರಾಳಕೊಪ್ಪ ಹತ್ತಿರದ ಮಂಚಿಕೊಪ್ಪ ಗ್ರಾಮದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತಿರುವ ಮದ್ಯದಂಗಡಿ ತಕ್ಷಣ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ನೂರಾರು ಗ್ರಾಮಸ್ಥರು ಪ್ರತಿಭಟನೆ ಮಾಡಿ ಗ್ರಾಮ ಪಂಚಾಯಿತಿಗೆ ಮನವಿ ಅರ್ಪಿಸಿದರು.
ಪ್ರತಿಭಟನಾಕಾರರು ತಮ್ಮ ಮನವಿ ಪತ್ರದಲ್ಲಿ, ಎಲ್ಲೆಂದರಲ್ಲಿ ಮದ್ಯದ ಅಂಗಡಿಗಳು ತಲೆ ಎತ್ತಿವೆ. ಇದರಿಂದ ಗ್ರಾಮದಲ್ಲಿ ಹೆಣ್ಣುಮಕ್ಕಳು, ಚಿಕ್ಕ ಮಕ್ಕಳು ಓಡಾಡಲು ಹಿಂಜರಿಯುತ್ತಿದ್ದಾರೆ. ಶಾಲಾ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅನಧಿಕೃತ ಹೆಂಡದಂಗಡಿಗಳ ಮೇಲೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮ ಜರುಗಿಸಿ ಗ್ರಾಮದಲ್ಲಿ ಹೆಂಡದಂಗಡಿಗಳನ್ನು ತೆರವು ಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಅವರಿಗೆ ಮನವಿ ಅರ್ಪಿಸಿದ್ದಾರೆ.
ಮನವಿ ಸ್ವೀಕರಿಸಿದ ಪಿಡಿಒ ಪ್ರಭು ನಾಯ್ಕ ಸರ್ಕಾರಕ್ಕೆ ಮನವಿ ಕಳಿಸಿಕೊಡುವುದಾಗಿ ತಿಳಿಸಿದ್ದಾರೆ.