ಕಾಡಾನೆ ಸೆರೆಗೆ 'ಅಭಿಮನ್ಯು' ಕಾರ್ಯಾಚರಣೆ
ವಿಶೇಷ ವರದಿ
ಶಿವಮೊಗ್ಗ: ಅಮ್ಮನಗುಡ್ಡದಲ್ಲಿ ಅಲೆಯುತ್ತಿರುವ ಕಾಡಾನೆ ಹಿಡಿಯುವ ಅರಣ್ಯ ಇಲಾಖೆ ಕಾರ್ಯಾಚರಣೆಯ ಮೂರನೇ ದಿನವಾದ ಶುಕ್ರವಾರ ಸಹ ಯಶ ಕಾಣಲಿಲ್ಲ. ಆದರೆ, ಕಾಡಾನೆ ಹಿಡಿಯುವ ಪ್ರಯತ್ನದಲ್ಲಿ ಮಾತ್ರ ಒಂದಷ್ಟು ಉತ್ತಮ ಪ್ರಯತ್ನ ನಡೆದವು.
ಈ ಮಧ್ಯೆಯೇ ಕಾಡಾನೆ ಹಿಡಿಯಲೇಬೇಕೆಂಬ ಹಠ ತೊಟ್ಟಿರುವ ಅರಣ್ಯ ಇಲಾಖೆಯು 'ಅಭಿಮನ್ಯು' ನಾಮಧೇಯದ ಚಾಣಾಕ್ಷ ಆನೆ ಕಾರ್ಯಾಚರಣೆಗೆ ಕರೆಸಲು ಮುಂದಾಗಿದೆ.
ಬುಧವಾರ ಮುಂಜಾನೆಯಿಂದ ಆರಂಭವಾದ ಕಾಡಾನೆ ಹಿಡಿಯುವ ಕಾರ್ಯಾಚರಣೆ ಶುಕ್ರವಾರದ ಸಂಜೆವರೆಗೆ ವಿಸ್ತರಣೆಗೊಂಡಿದೆ. ಅದು ಶನಿವಾರವೂ ಮುಂದುವರಿಯಲಿದೆ. ಆದರೆ, ಅಭಿಮನ್ಯು ಆನೆಯನ್ನು ಬಳಸಿಕೊಂಡ ನಂತರ ಚಟುವಟಿಕೆ ತೀವ್ರಗೊಳಿಸಲು ನಿರ್ಧರಿಸಲಾಗಿದೆ.
ಗಾಬರಿ ಬಿದ್ದ ಪಡೆ: ಅತಿ ವೇಗವಾಗಿ ಅಡ್ಡಾಡುತ್ತಿರುವ ಕಾಡಾನೆಯನ್ನು ಒಂದು ಸೀಮಿತ ಪರಿಧಿಯಲ್ಲೇ ಇರುವಂತೆ ಮಾಡುವ ಉದ್ದೇಶದಿಂದ ಗುರುವಾರ ದುಬಾರೆ ಮತ್ತು ಸಕ್ರೆಬೈಲಿನ ಆರು ಆನೆಗಳನ್ನು ಕಾಡಿನ ವಿವಿಧ ಪ್ರದೇಶಗಳಲ್ಲಿ ಬಿಡಲಾಗಿತ್ತು. ಕಾಡಾನೆ ಈ ಆನೆಗಳ ಸಾಂಗತ್ಯ ಪಡೆದುಕೊಳ್ಳುತ್ತದೆ. ನಂತರ ಸುಲಭವಾಗಿ ಹಿಡಿಯಬಹುದೆಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಲೆಕ್ಕಾಚಾರವಾಗಿತ್ತು. ಆದರೆ, ಬುದ್ಧಿವಂತಿಕೆ ಪ್ರದರ್ಶಿಸಿದ ಕಾಡಾನೆ ಈ ಆನೆಗಳ ಸಮೀಪ ಬಾರದೇ ಹೋಯಿತು.
ಇಷ್ಟರ ಮಧ್ಯೆಯೇ ಗುರುವಾರ ತಾನಿದ್ದ ಪ್ರದೇಶದಿಂದ ಹೆಚ್ಚು ದೂರ ಕ್ರಮಿಸದ ಕಾಡಾನೆ ಮಾವಿನ ಕೆರೆ ಸುತ್ತಮುತ್ತಲ ಪ್ರದೇಶದಲ್ಲೇ ಬೀಡುಬಿಟ್ಟಿದೆ.
ಶುಕ್ರವಾರ ನಸುಕಿನಲ್ಲೇ ಆನೆಗಳ ಸಹಿತ ಕಾರ್ಯಾಚರಣೆಗಿಳಿದ ಅರಣ್ಯ ಸಿಬ್ಬಂದಿಗೆ ಕಾಡಾನೆ ಹಿಡಿಯುವ ಒಂದು ಅವಕಾಶ ಸಿಕ್ಕಿತು. ಬೆಳಗ್ಗೆ 10 ಗಂಟೆ ಸುಮಾರಿಗೆ ಮಲಗಿದ್ದ ಕಾಡಾನೆಯನ್ನು ಸಮೀಪಿಸಿದ್ದ ಕಾರ್ಯಾಚರಣೆ ತಂಡ, ಅರವಳಿಕೆ ಮದ್ದನ್ನು ಆನೆಗೆ ಗುರಿ ಇಟ್ಟು ಇನ್ನೇನು ಪ್ರಯೋಗ ಮಾಡಬೇಕೆಂಬ ಹೊತ್ತಿನಲ್ಲಿ ಬುಸುಗುಡುತ್ತ ಕಾರ್ಯಾಚರಣೆ ನಡೆಸಿದ ತಂಡದ ಮೇಲೆ ದಂಡೆತ್ತಿಬಂದಿದೆ.
ಇದನ್ನು ನಿರೀಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ ದಿಕ್ಕಾಪಾಲಾಗಿ ಚದುರಿ ಓಡಿದ್ದಾರೆ. ಈ ಸಂದರ್ಭದಲ್ಲಿ ಒಂದಷ್ಟು ಮಂದಿಗೆ ಮೈಕೈಗೆ ಗಾಯಗಳಾಗಿವೆ. ನಂತರ ಹಾಗೂ ಹೀಗೂ ಕಾಡಾನೆಯಿಂದ ತಪ್ಪಿಸಿಕೊಂಡು ಸುಧಾರಿಸಿಕೊಂಡಿದ್ದಾರೆ.
ಈ ಕಾಡಾನೆ ಹಿಡಿಯುವುದು ಅಷ್ಟು ಸುಲಭದ ಮಾತಲ್ಲ. ನಮ್ಮ ನಿರೀಕ್ಷೆಗಿಂತ ಅದು ಹೆಚ್ಚಾಗಿ ಚುರುಕಾಗಿದೆ. ವೇಗವಾಗಿ ಚಲಿಸುತ್ತಿದೆ. ಕಾಡಿನೊಳಗೆ ನಡೆಯುತ್ತಿರುವ ಘಟನೆಗಳನ್ನು ಸೂಕ್ಷ್ಮಗಳನ್ನು ಗ್ರಹಿಸುತ್ತಿದೆ. ಹೀಗಾಗಿ ಕಾರ್ಯಾಚರಣೆ ಶ್ರಮಕ್ಕೆ ಫಲ ಸಿಗುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳು 'ಕನ್ನಡಪ್ರಭ'ಕ್ಕೆ ವಿವರಿಸಿದರು.
ಹೊಸ ಪ್ರಯೋಗ: ಬಿಡಾರದ ಆರು ಆನೆಗಳನ್ನು ಬಿಟ್ಟು ಕಾಡಾನೆ ಹಿಡಿಯುವ ಪ್ರಯೋಗ ಅಷ್ಟಾಗಿ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಬೇರೆ ಪ್ರಯೋಗಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ಮೈಸೂರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಚಾಣಾಕ್ಷ, ಧೈರ್ಯವಂತ, ಗಟ್ಟಿಗ ಎಂದು ಕರೆಸಿಕೊಳ್ಳುವ ಸುಮಾರು 45 ವಯಸ್ಸಿನ 'ಅಭಿಮನ್ಯು' ಆನೆಯನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
20 ದಿನಗಳ ಹಿಂದಷ್ಟೇ ಹಾಸನ ಭಾಗದಲ್ಲಿ ಹಿಡಿಯಲಾಗಿದ್ದ ಪುಂಡಾನೆಗಳನ್ನು ಶಿವಮೊಗ್ಗ- ಸಕ್ರೆಬೈಲು ಆನೆ ಬಿಡಾರದಲ್ಲಿ ಇಳಿಸಿಕೊಳ್ಳಲು ಬಂದಿದ್ದ 'ಅಭಿಮನ್ಯು' ಸದ್ಯ ದಾಂಡೇಲಿಯಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿದೆ. ಅದು ಮೈಸೂರು ಕಡೆ ಪ್ರಯಾಣ ಬೆಳೆಸುವ ಮುನ್ನ ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಲಾಗಿದೆ.
ಹೀಗಾಗಿ ಶನಿವಾರ ಸಂಜೆ ಅಥವಾ ಭಾನುವಾರ 'ಅಭಿಮನ್ಯು' ಅಮ್ಮನಗುಡ್ಡಕ್ಕೆ ಬರಲಿದ್ದು, ಉಳಿದ ಆರು ಆನೆಗಳನ್ನು ಹೊಂದಿರುವ ಕಾರ್ಯಾಚರಣೆ ತಂಡದ ನೇತೃತ್ವ ವಹಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.