ಮುಳುಗಡೆ ಸಂತ್ರಸ್ತರ ನಿರ್ಲಕ್ಷ್ಯ
ಸಾಗರ: ತಾಲೂಕಿನ ಹಿನ್ನೀರಿನ ಹೋಬಳಿಗೆ ಕಾಯಂ ವೈದ್ಯರ ನೇಮಕ, ಆರೋಗ್ಯ ಕವಚ- 108 ಆ್ಯಂಬುಲೆನ್ಸ್ ಸೇವೆ ಒದಗಿಸುವುದು, ರಾತ್ರಿ ವೇಳೆ ಲಾಂಚನ್ನು ಕಳಸವಳ್ಳಿ ದಡದಲ್ಲಿ ನಿಲ್ಲಿಸುವಂತೆ ಒತ್ತಾಯಿಸಿ ತುಮರಿಯಲ್ಲಿ ಜನಪರ ಹೋರಾಟ ವೇದಿಕೆ, ಸರಸ್ವತಿ ತರುಣ ರೈತ ಸಂಘ, ಕೂಲಿಕಾರ್ಮಿಕರ ಸಂಘ ಹಾಗೂ ವಿವಿಧ ಮಹಿಳಾ ಸಂಘಟನೆಗಳ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪತ್ರ ಚಳವಳಿಗೆ ಸಾಹಿತಿ ಡಾ. ನಾ.ಡಿಸೋಜ ಚಾಲನೆ ನೀಡಿದರು.
ಮುಳುಗಡೆ ಸಂತ್ರಸ್ತರನ್ನು ನಿರ್ಲಕ್ಷ್ಯ ಮಾಡಿರುವ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ ನಾನು ಪತ್ರ ಚಳವಳಿಗೆ ಚಾಲನೆ ನೀಡುತ್ತಿದ್ದೇನೆ ಎಂದು ಖಾರವಾಗಿ ಹೇಳಿದ ಡಿಸೋಜ, ಪತ್ರದ ಬೆಲೆ ಕಡಿಮೆ ಇದ್ದರೂ ಇದರ ಗಂಭೀರತೆಯನ್ನು ನಮ್ಮನ್ನು ಆಳುವವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕತ್ತಲಲ್ಲಿ ಜನತೆ: 1959 ರಲ್ಲಿ ಅಂದಿನ ವಿದ್ಯುತ್ ತಂತ್ರಿಗಳು ಶರಾವತಿ ವಿದ್ಯುಚ್ಛಕ್ತ್ತಿ ಉತ್ಪಾದನೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಈ ಯೋಜನೆ ಮೈಸೂರಿಗೆ ಹೆಮ್ಮೆ, ದೇಶಕ್ಕೆ ಬೆಳಕು ಎಂದಿದ್ದರು. ಆದರೆ, ಸರ್ಕಾರ ಈತನಕ ನಾಡಿಗೆ ವಿದ್ಯುತ್ ನೀಡಲು ತಮ್ಮ ಸರ್ವಸ್ವವನ್ನೂ ಕಳೆದುಕೊಂಡ ಜನರ ಏಳಿಗೆ ಬಗ್ಗೆ ಚಿಂತನೆ ಮಾಡದಿರುವುದು ವಿಷಾದನೀಯ. ದೀಪದ ಬುಡ ಕತ್ತಲು ಎನ್ನುವಂತೆ ಶರಾವತಿ ಹಿನ್ನೀರಿನ ಜನರು ನಾಡಿಗೆ ಬೆಳಕು ಕೊಟ್ಟು ತಾವು ಕತ್ತಲಿನಲ್ಲಿ ಉಳಿಯುವ ಸ್ಥಿತಿ ಉಂಟಾಗಿದೆ ಎಂದರು.
ಪ್ರತಿಯೊಂದನ್ನು ಹೋರಾಟದ ಮೂಲಕವೇ ಪಡೆಯುವ ಸ್ಥಿತಿ ನಮ್ಮದಾಗಿದೆ. ಜನಪ್ರತಿನಿಧಿಗಳು ಎನಿಸಿಕೊಂಡವರಿಗೆ ಹಿನ್ನೀರಿನ ಜನರ ಸಮಸ್ಯೆ ಅರ್ಥವೇ ಅಗುತ್ತಿಲ್ಲವೆ? ಅಭಿವೃದ್ಧಿ ಹೆಸರಿನಲ್ಲಿ ಜನರಿಗೆ ಆಸೆ ತೋರಿಸಿ, ಅವರನ್ನು ಮೋಸ ಮಾಡುವ ಚಟುವಟಿಕೆ ಹೆಚ್ಚುತ್ತಿದೆ. ಜನರ ಬದುಕಿಗೆ ಬೇಕಾದ ಆರೋಗ್ಯ ಸೇವೆಯನ್ನೂ ಜನರು ಹೋರಾಟದ ಮೂಲಕ ಪಡೆಯಲು ಹೊರಟಿರುವುದು ಸರ್ಕಾರ ಹಿನ್ನೀರಿನ ಜನರನ್ನು ತೀವ್ರವಾಗಿ ಕಡೆಗಣಿಸಿರುವುದಕ್ಕೆ ಸಾಕ್ಷಿಯಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತು ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ಸೌಲಭ್ಯ ಒದಗಿಸುವತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಪಿ.ರಾಮಚಂದ್ರರಾವ್, ಎಚ್.ಟಿ. ರಘುನಾಥ ಭಟ್, ಕೆ.ಜಿ. ಕೃಷ್ಣಮೂರ್ತಿ, ವಿ.ಟಿ. ಕೃಷ್ಣಮೂರ್ತಿ, ಎಚ್.ಬಿ.ರಾಘವೇಂದ್ರ, ಜಿ.ಟಿ. ಸತ್ಯನಾರಾಯಣ, ಜಿ.ಪಿ. ಶ್ರೀನಿವಾಸ್ ಇದ್ದರು.