ಬಾಲಕ ಸಾವು; ಪ್ರಕ್ಷುಬ್ದ
ಶಿವಮೊಗ್ಗ: ಬಸ್ ಡಿಕ್ಕಿಯಿಂದ ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ ಸಮೀಪದ ಹೊಸಹಳ್ಳಿಯಲ್ಲಿ ಭಾನುವಾರ ತ್ವೇಷಮಯ ವಾತಾವರಣ ಹೊಸಹಳ್ಳಿಯಲ್ಲಿ ಉಂಟಾಗಿತ್ತು.
ರಸ್ತೆ ಬದಿ ಸೈಕಲ್‌ನಲ್ಲಿ ಸಾಗುತ್ತಿದ್ದ ಬಾಲಕ ಸಲೀಂ ಪಾಶ (11) ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟನು. ರಸ್ತೆಯ ಬದಿ ನಿಂತಿದ್ದ ಲಾರಿಯನ್ನು ಹಾದು ಬಸ್ ಹೋಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬಾಲಕ ಬಸ್ಸಿಗೆ ಅಡ್ಡ ಬಂದಿದ್ದಾನೆ. ಪರಿಸ್ಥಿತಿ ನಿಯಂತ್ರಿಸಲು ಬಸ್ ಚಾಲಕ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೂ ನಿಯಂತ್ರಿಸಲು ಸಾಧ್ಯವಾಗದೇ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ಮಧ್ಯೆ ಬಾಲಕ ಸಲೀಂ ಬಸ್‌ನ ಹಿಂದಿನ ಚಕ್ರಕ್ಕೆ ಸಿಕ್ಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದರಿಂದ ಕೆರಳಿದ ಸ್ಥಳೀಯರು ಆಕ್ರೋಶಭರಿತರಾಗಿ ಬಸ್ ನಿರ್ವಾಹಕರನ್ನು ಥಳಿಸಿದ್ದಾರೆ. ಜೊತೆಗೆ ಬಸ್‌ಗೆ ಬೆಂಕಿ ಹಚ್ಚಲೂ ಮುಂದಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಬಾಲಕನ ಮೃತ ದೇಹ ತೆಗೆದುಕೊಂಡು ಹೋಗಲು ಆಂಬ್ಯುಲೆನ್ಸ್‌ಗೆ ಸ್ಥಳೀಯರು ಅವಕಾಶ ನೀಡಲಿಲ್ಲ. ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಣೆಯಾಗದ ಹೊರತು ಮೃತ ದೇಹ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಅಂತಿಮವಾಗಿ ಸ್ಥಳೀಯರನ್ನು ಮನವೊಲಿಸಿದ ಪೊಲೀಸರು ಮೃತ ದೇಹ ಸಾಗಿಸುವಲ್ಲಿ ಸಫಲರಾದರು.
ಕಳೆದ ಕೆಲವು ತಿಂಗಳ ಹಿಂದಷ್ಟೇ ಶಿವಮೊಗ್ಗ ನಗರ ವ್ಯಾಪ್ತಿಯೊಳಗೆ ನಡೆದ ಇದೇ ರೀತಿಯ ಎರಡು ರಸ್ತೆ ಅಪಘಾತ ಪ್ರಕರಣದಲ್ಲಿ ಪರಿಸ್ಥಿತಿ ಕೈಮೀರಿದ್ದನ್ನು ಅರಿತ ಪೊಲೀಸ್ ಅಧಿಕಾರಿಗಳು, ಸ್ಥಳಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ಕರೆಸಿಕೊಂಡು ಪರಿಸ್ಥಿತಿ ನಿಯಂತ್ರಿಸುವಲ್ಲಿ ಸಫಲರಾದರು.