ಶಿವಮೊಗ್ಗದಲ್ಲಿ ಡಾ.ರಾಜ್ ಸಂಗೀತೋತ್ಸವ ಇಂದು
ಶಿವಮೊಗ್ಗ: ಡಾ.ರಾಜ್ಕುಮಾರ್ ಹಾಡಿದ ಅಪರೂಪದ ಹಾಡುಗಳನ್ನು ಆಲಿಸುವ ಅಪರೂಪದ ಕಾರ್ಯಕ್ರಮ ಸೋಮವಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರಸ್ತುತಗೊಳ್ಳಲಿದೆ.
ಶಿವಮೊಗ್ಗದ ಯುವ ಕಲಾವಿದರು ರಾಜ್ಕುಮಾರ್ ಅವರ ಯಶಸ್ವಿ ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ. ಕಳೆದ ಬಾರಿ ನೆಹರೂ ಕ್ರೀಡಾಂಗಣದಲ್ಲಿ ನಡೆದ ಡಾ. ರಾಜ್ ಸಂಗೀತೋತ್ಸವ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿ ಇನ್ನಷ್ಟು ಹೊಣೆಗಾರಿಕೆಯೊಂದಿಗೆ ಕಾರ್ಯಕ್ರಮ ರೂಪಿಸಿದ್ದೇವೆ, ಶಿವಮೊಗ್ಗದ ಡಾ. ರಾಜ್ಕುಮಾರ್ ಪ್ರೇಮಿಗಳು ನಮ್ಮನ್ನು ಹರಸುತ್ತಾರೆಂಬ ವಿಶ್ವಾಸವಿದೆ ಎಂದು ಯುವ ಹಾಡುಗಾರ ಋತ್ವಿಕ್ ಮುರಳೀಧರ್ ತಿಳಿಸಿದ್ದಾರೆ.
ಡಾ. ರಾಜ್ಕುಮಾರ್ ಅವರ 86ನೇ ಹುಟ್ಟುಹಬ್ಬದ ಪ್ರಯುಕ್ತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜ್ ಹುಟ್ಟುಹಬ್ಬದ ದಿನದಂದೇ ಕಾರ್ಯಕ್ರಮ ನಡೆಸಲು ತಯಾರಿ ನಡೆಸಲಾಗಿತ್ತು. ಚುನಾವಣೆ ಹಿನ್ನೆಲೆ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲಾಯಿತು. ಕಾರ್ಯಕ್ರದಲ್ಲಿ ಡಾ. ರಾಜ್ಕುಮಾರ್ ಅವರು ಹಾಡಿದ ಸುಮಾರು 25ಕ್ಕೂ ಹೆಚ್ಚು ಗೀತೆಗಳನ್ನು ಆಲಿಸಬಹುದಾಗಿದೆ. ಋತ್ವಿಕ್ ಮುರಳೀಧರೆ ಸೇರಿದಂತೆ ಸುರೇಖಾ ಹೆಗಡೆ, ಅಮಿತ್ ಎಸ್. ಕುಮಾರ್, ಅನುಷಾ ಸತೀಶ್, ಚಾರ್ವಿ ಮುರುಳೀಧರ್ ಹಾಡಲಿದ್ದಾರೆ. ಬೆಂಗಳೂರಿನ ಸಂಗೀತ ವಾದ್ಯ ಸೃಷ್ಟಿ ಉಮೇಶ್ ತಂಡ ವಾದ್ಯ ಸಹಕಾರ ನೀಡಲಿದೆ.