ಮಾಜಿ ಅಧ್ಯಕ್ಷರ ವಿರುದ್ಧ ಎಫ್‌ಐಆರ್
ಶಿವಮೊಗ್ಗ: ಸರ್ಕಾರದ ಒಪ್ಪಿಗೆ ಇಲ್ಲದಿದ್ದರೂ ವಿವೇಚನ ಕೋಟಾದಡಿ ನಿವೇಶನ ಹಂಚಿದ್ದ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಇಬ್ಬರು ಮಾಜಿ ಅಧ್ಯಕ್ಷರು, ಒಬ್ಬ ಆಯುಕ್ತರ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಡಾ ಆಡಳಿತ ಮಂಡಳಿ ಸಭೆ ನಿರ್ಧರಿಸಿದೆ.
ಇದರೊಂದಿಗೆ ವಾಜಪೇಯಿ ಬಡಾವಣೆ ನಿವೇಶನ ಹಗರಣ ತಾರ್ಕಿಕ ತಿರುವು ಪಡೆದಿದೆ. ಈ ತೀರ್ಮಾನದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಜ್ಞಾನೇಶ್ವರ್, ದತ್ತಾತ್ರಿ ಹಾಗೂ ಆಯುಕ್ತ ಸದಾಶಿವಪ್ಪ ಅವರ ವಿರುದ್ಧ ಐಪಿಸಿ ಕಲಂ 419, 420 ಅನ್ವಯ ವಂಚನೆ ಮೊಕದ್ದಮೆ ದಾಖಲಿಸಲಾಗುವುದು ಎಂದು ಹಾಲಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದ್ದಾರೆ.
ವಿಪುಲ್ ಬನ್ಸಲ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನಿವೃತ್ತ ನ್ಯಾಯಮೂರ್ತಿ ರವೀಂದ್ರನಾಥ್ ನೇತೃತ್ವ ಸಮಿತಿ ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆ ಬಗ್ಗೆ ಪರಿಶೀಲನೆ ನಡೆಸಿ ಸಲ್ಲಿಸಿದ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು.
ಈ ಬಗಗೆ ಚರ್ಚಿಸಿ ವಿವೇಚನಾ ಕೋಟಾದಲ್ಲಿ ನಿವೇಶನ ಹಂಚುವುದಕ್ಕೆ ಸರ್ಕಾರಕ್ಕೆ 2010ರಲ್ಲಿ ಪತ್ರ ಬರೆದಿದ್ದನ್ನು ತಿರಸ್ಕರಿಸಿ 2011ರಲ್ಲಿ ಮರುಪತ್ರ ಬಂದಿದ್ದರೂ ಸಹ 142 ನಿವೇಶನ ಹಂಚಿರುವುದನ್ನು ಗಂಭೀರವಾಗಿ ಪರಿಗಣಿಸಲಾಯಿತು.
ಒಟ್ಟು 813 ನಿವೇಶನ ಹಂಚಿಕೆಯಲ್ಲಿ ಲೋಪವಾಗಿರುವ ಬಗ್ಗೆ ತನಿಖಾ ಸಮಿತಿ ಉಲ್ಲೇಖಿಸಿರುವುದನ್ನು, ನಿವೇಶನ ಹಂಚಿಕೆ ಸಮಿತಿ ಸದಸ್ಯರ ಪಾತ್ರವನ್ನೂ ಸಹ ಚರ್ಚಿಸಲಾಯಿತು.
ಬಿಜೆಪಿ ಶಾಸಕರ ಸಭಾತ್ಯಾಗ
ಸಭೆಯಲ್ಲಿ ಕಾಂಗ್ರೆಸ್ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜೆಡಿಎಸ್ ಶಾಸಕರಾದ ಗ್ರಾಮಾಂತರ ಕ್ಷೇತ್ರದ ಶಾರದಾ ಪೂರ್ಯಾನಾಯ್ಕ್, ಭದ್ರಾವತಿಯ ಅಪ್ಪಾಜಿಗೌಡ, ಬಿಜೆಪಿಯ ವಿಧಾನಪರಿಷತ್ ಸದಸ್ಯರಾದ ಆರ್.ಕೆ. ಸಿದ್ದರಾಮಣ್ಣ, ಎಂ.ಬಿ. ಭಾನುಪ್ರಕಾಶ್ ಪಾಲ್ಗೊಂಡಿದ್ದರು.
ಮಾಧ್ಯಮ ಪ್ರತಿನಿಧಿಗಳನ್ನು ಹೊರಗಿಟ್ಟು ನಡೆದ ಸಭೆಯಲ್ಲಿ ನಾಟಕೀಯ ಘಟನೆಗಳು ನಡೆದು ಮಧ್ಯದಲ್ಲಿಯೇ ಬಿಜೆಪಿ ವಿಧಾನಪರಿಷತ್ ಸದಸ್ಯರು ಹೊರನಡೆದರು. ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರು ಅನ್ಯಕಾರ್ಯ ನಿಮಿತ್ತ ತೆರಳಿದರು.
ಸಭೆಯಿಂದ ಹೊರಬಂದ ಬಿಜೆಪಿ ವಿಧಾನಪರಿಷತ್ ಸದಸ್ಯರು, ಸಮಿತಿ ವರದಿ ಅಧ್ಯಯನಕ್ಕೆ ಅವಕಾಶ ಬೇಕೆಂದು ಕೋರಿದೆವು. ಆದರೆ ಸೂಡಾ ಅಧ್ಯಕ್ಷರು ಅವಕಾಶ ನೀಡದೇ ಇಲ್ಲೇ ತೀರ್ಮಾನ ಹೇಳಿ ಎಂದರು. ಇದನ್ನು ಒಪ್ಪದೆ ಸಭಾತ್ಯಾಗ ಮಾಡಿದೆವು ಎಂದರು.