ನಿವೇಶನ ಅಕ್ರಮ ವಿರುದ್ಧ ಕ್ರಮ
ಶಿವಮೊಗ್ಗ: ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಅಕ್ರಮದ ಬಗ್ಗೆ ಜೂ.17ರಂದು ಕರೆದಿರುವ ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಸಭೆಯಲ್ಲಿ ಚರ್ಚೆ ನಡೆಸಿ ಕ್ರಮ ಜರುಗಿಸುವ ಕುರಿತು ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ತಮ್ಮ ಭೇಟಿ ಮಾಡಿದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ನನ್ನ ತಿಳಿವಳಿಕೆಯ ಪ್ರಕಾರ ಅಧ್ಯಕ್ಷರ ವಿವೇಚನಾ ಕೋಟಾ ಸರ್ಕಾರ ರದ್ದು ಮಾಡಿದೆ ಎಂದರು.
ತಪ್ಪು ಮಾಹಿತಿ ನೀಡಿದವರಿಗೆ ನೋಟೀಸ್ ನೀಡಿ ಕ್ರಮ ಕೈಗೊಳ್ಳಲು ಮೊದಲು ನಿರ್ಧರಿಸಲಾಗಿತ್ತು. ಆದರೆ ನಿರಪಾಧಿಗಳಿಗೆ ತೊಂದರೆಯಾಗುವುದನ್ನು ತಪ್ಪಿಸುವ ದಿಸೆಯಲ್ಲಿ ಚರ್ಚಿಸಲಾಗುವುದು ಎಂದ ಅವರು, ಅಕ್ರಮವಾಗಿ ನಿವೇಶನ ಪಡೆದವರ ವಿರುದ್ಧ ಕಾನೂನು ಕ್ರಮ ನಿಶ್ಚಿತ. ಆದರೆ ಪ್ರಾಮಾಣಿಕವಾಗಿ ನಿವೇಶನ ಪಡೆದವರಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಅವರ ಹಿತ ರಕ್ಷಿಸಲಾಗುವುದು ಎಂದರು. ವಾಜಪೇಯಿ ಬಡಾವಣೆ ಅಕ್ರಮ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಸಿಬಿಐ ತನಿಖೆಗೆ ಆಗ್ರಹ
ಶಿವಮೊಗ್ಗ: ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ.
ಅಕ್ರಮವೆಸಗಿರುವ ಸೂಡಾ ಮಾಜಿ ಅಧ್ಯಕ್ಷರಾದ ಜ್ಞಾನೇಶ್ವರ್, ದತ್ತಾತ್ರಿ ಹಾಗೂ ಆಯುಕ್ತ ಸದಾಶಿವಪ್ಪ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ನಗರದಲ್ಲಿ ಶುಕ್ರವಾರ ಮನವಿ ಸಲ್ಲಿಸಿದ ಅವರು, ಪ್ರಕರಣದ ಬಗ್ಗೆ ಸಿಬಿಐ ತನಿಖೆಯೇ ಸೂಕ್ತ ಎಂದಿದ್ದಾರೆ. ಈ ಸಂದರ್ಭಟ್ರಸ್ಟ್ನ ಕಲ್ಲೂರು ಮೇಘರಾಜ್, ಮಲ್ಲೇಶಪ್ಪ, ಬಿ. ಕೃಷ್ಣಪ್ಪ, ಸುವರ್ಣ ನಾಗರಾಜ್, ಸತೀಶ್ ಪೂಜಾರಿ, ಸತೀಶ್ ಪೂಜಾರಿ, ಆಶಾ ಹರೀಶ್ ಇದ್ದರು.