ಪೋಷಕರಲ್ಲಿ ಶೈಕ್ಷಣಿಕ ಅರಿವು ಮೂಡಿಸಿ: ನ್ಯಾ. ಜ್ಯೋತಿಶ್ರೀ
ಭದ್ರಾವತಿ: ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು, ಓದಿ ವಿದ್ಯಾವಂತರಾಗಿ ದೇಶದ ಸಕ್ರಿಯ ನಾಗರಿಕರಾಗಬೇಕೇ ವಿನಃ ಬಾಲ್ಯದಲ್ಲಿಯೇ ಬಾಲಕಾರ್ಮಿಕನಾಗಿ ದುಡಿತಕ್ಕೆ ಸೇರಿ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದೆಂದು ಸಿವಿಲ್ ನ್ಯಾಯಾಧೀಶರಾದ (ಹಿರಿಯ ವಿಭಾಗ) ಜ್ಯೋತಿಶ್ರೀ ತಿಳಿಸಿದರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಏರ್ಪಡಿಸಿದ್ದ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವಕೀಲರಾದ ಬಿ.ಎಸ್. ರೂಪರಾವ್ ಉಪನ್ಯಾಸ ನೀಡಿದರು. ಕಾರ್ಮಿಕ ನಿರೀಕ್ಷಕ ಶಿವಕುಮಾರ್ ಬಾಲಕಾರ್ಮಿಕ ವಿರೋಧಿ ಪ್ರಮಾಣವಚನ ಬೋಧಿಸಿದರು. ಸಹಾಯಕ ಸರ್ಕಾರಿ ಅಭಿಯೋಜಕ ಶ್ರೀಧರ್, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಮಹೇಶ್ಕುಮಾರ್, ಸಿವಿಲ್ ನ್ಯಾಯಾಧೀಶರಾದ (ಕಿರಿಯ ವಿಭಾಗ) ರಾಚೋಟಿ ಮಹಾಗುಂಡಪ್ಪ ಶಿರೂರ್ ಮೊದಲಾದವರು ಮಾತನಾಡಿದರು. ತಹಸೀಲ್ದಾರ್ ಸಿದ್ದಮಲ್ಲಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ನ್ಯಾಯಾಧೀಶರಾದ ಸುಜಾತ ಸಾಂಬ್ರಾಣಿ, ತಾ.ಪಂ. ಇಒ ಜಯಣ್ಣ, ಬಿಇಒ ಟಿ.ಎನ್.ಸೋಮಶೇಖರಯ್ಯ, ಡಿವೈಎಸ್ಪಿ ಸದಾನಂದ ಪಿ.ನಾಯಕ್, ನಗರಸಭೆ ಪರಿಸರ ಎಂಜಿನಿಯರ್ ರುದ್ರೇಗೌಡ, ಕಾಲೇಜಿನ ಪ್ರಾಂಶುಪಾಲ ಗುಡ್ಡದಮಲ್ಲಪ್ಪ ಮೊದಲಾದವರಿದ್ದರು.