ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬೆಲೆ ಜಾಸ್ತಿಯಾದರೂ ಆತಂಕದ ಬವಣೆ ತಪ್ಪಿಲ್ಲ!

Vishwanath S
Updated On : 15 Jun 2014, 11:32 am

ಶಿವಮೊಗ್ಗ: ಅಡಕೆ ಬೆಲೆ ಸೂತ್ರವಿಲ್ಲದ ಗಾಳಿಪಟದಂತಾಗಿರುವ ಸಂದರ್ಭದಲ್ಲಿ ಮಾರುಕಟ್ಟೆ ವಿಶ್ಲೇಷಕರು, ಕೃಷಿ ತಜ್ಞರು, ಸಂಶೋಧಕರು, ರೈತ ಮುಖಂಡರು ಆತಂಕ ಹೊರಹಾಕಿದ್ದಾರೆ.
ಬೆಲೆ ಹೆಚ್ಚಾದ ಸಂದರ್ಭದಲ್ಲಿ ಆತಂಕಪಡುವ ಸಂಗತಿ ಏನೆಂಬ ಪ್ರಶ್ನೆ ಏಳುವುದು ಸಹಜ. ಆದರೆ, ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಕಣ್ಣಾಮುಚ್ಚಾಲೆ ವ್ಯಾಪಾರ, ಮುಂದಾಗಬಹುದಾದ ಅವಘಡದ ಮುನ್ಸೂಚನೆ ಅರಿತು ತಜ್ಞರು, ವಿಶ್ಲೇಷಕರು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಹಾಗೆಯೇ ಸರ್ಕಾರ ಅಡಕೆ ವಹಿವಾಟಿನ ಮೇಲೆ ನಿಗಾ ಇಡಬೇಕೆಂದು ಆಶಯ ವ್ಯಕ್ತಪಡಿಸಿದ್ದಾರೆ.
ಕೆಂಪಡಕೆ ಬೆಲೆ ಸದ್ಯ ಕ್ವಿಂಟಾಲ್‌ಗೆ ಮಾಮೂಲಿ ದರಕ್ಕಿಂತ ದುಪ್ಪಟ್ಟಿದೆ. ಇದು ಖಂಡಿತವಾಗಿ ಆರೋಗ್ಯಕರ ಮಾರುಕಟ್ಟೆಯ ಲಕ್ಷಣವಲ್ಲ ಎಂಬುದು ಹಿರಿಯ ವಿಜ್ಞಾನಿ ಪ್ರಕಾಶ್ ಕಮ್ಮರಡಿಯವರ ಅಭಿಪ್ರಾಯ. ಎಂದೆಂದಿಗೂ ಮಾರುಕಟ್ಟೆ ಸ್ಪರ್ಧಾತ್ಮಕವಾಗಿರಬೇಕು. ಕೊಡು ಕೊಳ್ಳುವವರಿಗೆ ಸಮಾನ ಅವಕಾಶ ಇರಬೇಕು, ಮುಕ್ತ ಮಾರುಕಟ್ಟೆ ಇರಬೇಕು, ಪರಿಸ್ಥಿತಿ ಮಾರಾಟಗಾರ ಮತ್ತು ಖರೀದಿದಾರನಿಗೆ ತಿಳಿದಿರಬೇಕು ಎಂದು ಹೇಳುವ ಅವರು ಬೇಡಿಕೆ ಮತ್ತು ಸರಬರಾಜು ಗೊತ್ತಿರದ ಮಾರುಕಟ್ಟೆ ಮಾರುಕಟ್ಟೆಯೇ ಅಲ್ಲ ಎಂಬುದು ಅವರ ಮಾತು.
ಅಡಕೆಯ ಪ್ರಾಥಮಿಕ ಮಾರುಕಟ್ಟೆ ಚೆನ್ನಾಗಿಯೇ ಇದೆ. ಆದರೆ, ಎರಡನೇ ಹಂತದ ಮಾರಾಟ ವಹಿವಾಟು ಸಂಪೂರ್ಣ ಕತ್ತಲಲ್ಲಿ ನಡೆಯುತ್ತಿದೆ.
ಈ ಅಂಶಕ್ಕೂ ಪ್ರಕಾಶ್ ಪೂರಕ ಮಾಹಿತಿ ನೀಡುತ್ತಾರೆ. ರಾಜ್ಯದಲ್ಲಿ ವಾರ್ಷಿಕ 6 ಲಕ್ಷ ಎಕರೆಗಳಲ್ಲಿ 35 ಲಕ್ಷ ಕ್ವಿಂಟಾಲ್ ಅಡಕೆ ಉತ್ಪಾದನೆಯಾಗುತ್ತಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಸುಮಾರು 12ರಿಂದ 15 ಲಕ್ಷ ಕ್ವಿಂಟಾಲ್ ಅಡಕೆ ಮಾರಾಟವಾಗುತ್ತದೆ. ಕನಿಷ್ಟ ಬೆಲೆ ಎಂದರೆ 18-20 ಸಾವಿರ ಕೋಟಿ ರುಪಾಯಿ ವಹಿವಾಟು ನಡೆಯುತ್ತದೆ.
ಆದರೆ, ಮಾರುಕಟ್ಟೆಗೆ ಬರುವ ಅಡಕೆ ಮುಂದೆ ಹೇಗೆ ವಹಿವಾಟು ನಡೆಯುತ್ತದೆ, ಯಾರು ವಹಿವಾಟುದಾರರು ಎಂಬುದರ ಬಗ್ಗೆ ಎಲ್ಲೂ ದಾಖಲೆಯೇ ಸಿಗುವುದಿಲ್ಲ. ಅಂತಿಮವಾಗಿ 15-20 ಸಂಖ್ಯೆಯಲ್ಲಿರುವ ಗುಟ್ಕಾ ಕಂಪನಿಯನ್ನು ಅಡಕೆ ತಲುಪುತ್ತದಾದರೂ ಅದು ಯಾರ ಕೈಯಿಂದ ದಾಟುತ್ತದೆ, ಎಷ್ಟು ಹಣಕ್ಕೆ ದಾಟುತ್ತದೆ, ಎಷ್ಟು ತೆರಿಗೆ ವಂಚಿಸಲಾಗುತ್ತಿದೆ ಎಂಬುದು ಗುಪ್ತಗಾಮಿನಿ.
ಸರಾಸರಿ ಶೇ.50ರಷ್ಟು ತೆರಿಗೆ ವಂಚನೆ ನಡೆಯುತ್ತದೆಂದು ಪ್ರಕಾಶ್ ಬೆರಳಂಚಿನಲ್ಲಿ ಲೆಕ್ಕಹಾಕುತ್ತಾರೆ. ಇಷ್ಟೇ ಅಲ್ಲದೇ ಬೆಲೆ ನಿಗದಿ ಮಾಡುವಲ್ಲಿ ಅನೇಕ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ ಎಂಬುದು ಅವರ ವಿವರಣೆ.
ಇವರ ಮಾತಿಗೆ ಪುಷ್ಟಿ ನೀಡುವಂತೆ ಅಡಕೆ ಬೆಳೆಗಾರ ಹಾಗೂ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಅನೇಕ ಕಾರಣಗಳನ್ನು ಕೊಡುತ್ತಾರೆ. ದಾಸ್ತಾನುದಾರರು, ರವಾನೆ ಮಂಡಿಯವರಿಗೆ ಅಡಕೆ ಉತ್ಪನ್ನ ತಯಾರಕನ ಬಗ್ಗೆ ಗೊತ್ತಿದೆ. ಅವನ ಬಳಿ ಎಷ್ಟು ದಾಸ್ತಾನಿದೆ, ಪ್ರತಿ ದಿನ ಎಷ್ಟು ಬೇಕಾಗಬಹುದು, ಮಾರುಕಟ್ಟೆಯಲ್ಲಿ ಎಷ್ಟು ಅಡಕೆ ಲಭ್ಯತೆ ಇದೆ ಎಂದರಿತು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ವಿವರಿಸುತ್ತಾರೆ.
ಉತ್ಪಾದನೆಯಿಂದ ಮಾರುಕಟ್ಟೆ, ರವಾನೆ, ಮೌಲ್ಯವರ್ಧನೆವರೆಗೆ ಎಲ್ಲವೂ ಪಾರದರ್ಶಕಬೇಕು. ಇಲ್ಲವಾದರೆ, ಕುದುರೆ ಬಾಲಕ್ಕೆ ಜೂಜು ಕಟ್ಟಿದಂತೆ. ರೈತನನ್ನು ಶೋಷಣೆ ಮಾಡುವ ವ್ಯವಹಾರ ಎಂದವರು ಅಭಿಪ್ರಾಯಪಡುತ್ತಾರೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಅಡಕೆ ಖರೀದಿ ವಹಿವಾಟಿನ ಬಗ್ಗೆ ಪಾರದರ್ಶಕತೆಗೆ ವ್ಯವಸ್ಥೆ ಮಾಡಬೇಕಾಗಿದೆ ಎಂದರು.
ಬೆಲೆ ಹೆಚ್ಚಳಕ್ಕೆ ತಜ್ಞರು ಕೊಡುವ ಕಾರಣ
   ಗುಟ್ಕಾ ನಿಷೇಧ ಗುಮ್ಮದ ಹಿನ್ನೆಲೆಯಲ್ಲಿ ಗುಟ್ಕಾ ತಯಾರಿಕಾ ಕಂಪನಿಗಳು ಸಾಕಷ್ಟು ಅಡಕೆ ದಾಸ್ತಾನು ಇಟ್ಟುಕೊಂಡಿರಲಿಲ್ಲ. ಇದೀಗ ಅಡಕೆ ಬೇಡಿಕೆ ಹೆಚ್ಚಾಗಿದೆ.
   ಯುಪಿಎ ಸರ್ಕಾರದ ಅವಧಿಯಲ್ಲಿ ಅಡಕೆ ಆಮದು ಮೇಲೆ ಹಾಕಲಾದ ಶೇ.100ರಷ್ಟು ಆಮದು ಸುಂಕವೂ ಕಾರಣ. ಹೀಗಾಗಿ ಬೇರೆ ದೇಶಗಳಿಂದ ಅಡಕೆ ದೊಡ್ಡ ಪ್ರಮಾಣದಲ್ಲಿ ಬರುತ್ತಿಲ್ಲ.
   ಗುಟ್ಕಾ ಪೌಚ್‌ನಲ್ಲಿ ಅಡಕೆ ಪ್ರತ್ಯೇಕಗೊಂಡಿದ್ದರಿಂದ ಗುಣಮಟ್ಟದ ಅಡಕೆ ಬಳಸುವುದು ಅನಿವಾರ್ಯ. ಮುಂಚೆ ಕಳಪೆ ಅಡಕೆ ಹೇರಳವಾಗಿ ಬಳಸಲಾಗುತ್ತಿತ್ತು.
   ಗುಟ್ಕಾ ಹೊರತಾಗಿ ಅಡಕೆಯ (ಪಾನ್ ಪರಾಗ್) ಉತ್ಪನ್ನಗಳು ಬೇರೆ ಬೇರೆ ಹಂತಗಳಲ್ಲಿ ಮಾರುಕಟ್ಟೆ ಪ್ರವೇಶ ಮಾಡಿವೆ.
   ಅಡಕೆ ಮೌಲ್ಯವರ್ಧನೆ ಮಾಡುವ ಕಂಪನಿಗಳ ಸ್ಥಿತಿಗತಿ ಅರಿತು ಮಧ್ಯವರ್ತಿಗಳು ಅಡಕೆಯನ್ನು ಕಡಿಮೆ ದರಕ್ಕೆ ಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು.
ಬೆಲೆ ಹೆಚ್ಚಳದ ಪರಿಣಾಮಗಳು
   ಅಡಕೆಗೆ ಚಿನ್ನದ ಬೆಲೆ ಬಂದಿರುವುದರಿಂದ ಆಹಾರ ಬೆಳೆ ಬೆಳೆಯುವ ಪ್ರದೇಶದಲ್ಲೂ ಅಡಕೆ ನೆಲೆಯೂರುವ ಸಾದ್ಯತೆ.
   ಬಯಲು ಸೀಮೆ, ನೀರಾವರಿ ಇಲ್ಲದ ಪ್ರದೇಶಗಳಲ್ಲಿ ಅಡಕೆಗೆ ರೈತರು ಹೊರಳುವ ಸಾಧ್ಯತೆ ಹೆಚ್ಚು.
   ಅಡಕೆ ಬೆಲೆ ಹೆಚ್ಚಿದ್ದರಿಂದ ಅಡಕೆ ತೋಟದಲ್ಲಿ ಕೂಲಿ ಹೆಚ್ಚಳ
   ಈಗಾಗಲೇ ನರ್ಸರಿಗಳಲ್ಲಿ ಅಡಕೆ ಸಸಿಗೆ ಹೆಚ್ಚಿನ ಬೇಡಿಕೆ
   ಅಡಕೆ ತೋಟಗಳ ಮಾರಾಟ ಚಟುವಟಿಕೆಗಳು ಸಂಪೂರ್ಣ ಸ್ಥಗಿತ


-ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement