ಡಿಸಿ ಕಚೇರಿ ಎದುರು ಪ್ರತಿಭಟನೆ
ಶಿವಮೊಗ್ಗ: ರಾಜ್ಯ ಸರ್ಕಾರ ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯನ್ನು ಸಡಿಲಗೊಳಿಸುತ್ತಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಆರ್‌ಟಿಇ ಕಾಯ್ದೆಯನ್ನು ಜಾರಿಗೆ ತರಲು ಪ್ರಸ್ತುತ ಇರುವ ನಿಯಮಗಳನ್ನು ತಿದ್ದುಪಡಿ ಮಾಡಿ ಶೇ.75ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗರ ಬೇಕೆಂಬುದನ್ನು ಕಡ್ಡಾಯ ಮಾಡಿಲ್ಲ. ಶೇ.25ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿರುವ ಶಾಲೆಯನ್ನೂ ಮೈನಾರಿಟಿ ಕೋಟಾದಲ್ಲಿ ತರಲಾಗಿದೆ. ಸಚಿವ ಸಂಪುಟ ಈ ಸಂಬಂಧ ಕೈಗೊಂಡ ನಿಯಮ ವಿರೋಧಿಸುವುದಾಗಿ ಪ್ರತಿಭಟನಾಕಾರರು ಹೇಳಿದರು.
ಸರ್ಕಾರದ ಈ ನಿಲವಿನಿಂದ ಅಲ್ಪಸಂಖ್ಯಾತ ಆಡಳಿತ ಮಂಡಳಿಗಳ ಶಾಲೆಗಳ ಸಂಖ್ಯೆ 1,059 ರಿಂದ 6,000 ದಾಟಿದೆ. ಇವುಗಳಿಗೆ ಆರ್‌ಟಿಇ ಕಾಯ್ದೆಯಿಂದ ವಿನಾಯಿತಿ ಸಿಗಲಿದೆ. ಇದರಿಂದಾಗಿ ರಾಜ್ಯದ ಹಿಂದುಳಿದ ದಲಿತ ಹಾಗೂ ಬಡ ವಿದ್ಯಾರ್ಥಿಗಳಿಗೆ ದೊರೆಯಬೇಕಿದ್ದ ಸುಮಾರು 40 ಸಾವಿರ ಸೀಟುಗಳು ಆಡಳಿತ ಮಂಡಳಿ ಪಾಲಾಗಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಈ ತೀರ್ಮಾನದಿಂದ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಮೋಸವಾಗುತ್ತದೆ. ಪ್ರತಿಯೊಬ್ಬರಿಗೂ ಪ್ರಾಥಮಿಕ ಶಿಕ್ಷಣ ದೊರೆಯಲಿ ಹಾಗೂ ಹಣದ ಕೊರತೆಯಿಂದ ಶಿಕ್ಷಣ ವಂಚಿತರಾಗಬಾರದು ಎಂಬ ಕಾರಣದಿಂದ ಜಾರಿಗೆ ತರಲಾದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ನಿರರ್ಥಕವಾದಂತಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ದಿಸೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಸರ್ಕಾರ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕೋಟಾ ನಿಯಮದಲ್ಲಿ ಯಾವುದೇ ತಿದ್ದುಪಡಿ ತರಬಾರದು. ಬಡ ವಿದ್ಯಾರ್ಥಿಗಳ ಹಿತ ಕಾಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಪದಾಧಿಕಾರಿಗಳಾದ ದರ್ಶನ್, ಚರಣ್, ಬಾಲಯ್ಯ, ಅಜಯ್, ಶೋಬಿತ್, ಪ್ರವೀಣ್ ಸೇರಿದಂತೆ ಹಲವರು ಇದ್ದರು.