ಮರಳು ದರ ಹೆಚ್ಚಳಕ್ಕೆ ಡಿಸಿ ಕಾರಣ: ಆರೋಪ
ಶಿವಮೊಗ್ಗ: ರಾಜ್ಯ ಸರ್ಕಾರ ರೂಪಿಸಿರುವ ಮರಳು ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು, ಮರಳು ದರ ಹೆಚ್ಚಾಗುವುದಕ್ಕೆ ಜಿಲ್ಲಾಧಿಕಾರಿಗಳೇ ಕಾರಣ ಎಂದು ಬಿಜೆಪಿ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಕಾಡುಮೇಡುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಸಾವಿರಾರು ಲೋಡ್ ಮರಳನ್ನು ಜಿಲ್ಲಾಧಿಕಾರಿಗಳು ಏಕೆ ವಶಕ್ಕೆ ಪಡೆಯುತ್ತಿಲ್ಲ. ಹತ್ತಿರದ ಜಾಗಗಳಲ್ಲಿಯೇ ಅಧಿಕಾರಿಗಳು ಏಕೆ ಸುತ್ತಾಡುತ್ತಿದ್ದಾರೆ. ಆರಗ, ಮೇಗರವಳ್ಳಿ, ಮಂಡಗದ್ದೆ, ತೀರ್ಥಹಳ್ಳಿ, ಭದ್ರಾವತಿ, ಚೀಲೂರಿನಲ್ಲಿ ಅಕ್ರಮ ಮರಳು ಸಂಗ್ರಹಿಸಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೂ ಏಕೆ ದಾಳಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಜಿಲ್ಲಾಡಳಿತ ಕೂಡಲೇ ಮರಳು ನೀತಿ ಜಾರಿಗೆ ತರಬೇಕು. ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ವಶಪಡಿಸಿಕೊಂಡ ಪ್ರಕರಣ ತನಿಖೆಗೆ ಒಳಪಡಿಸುವ ಮೂಲಕ ನಾಗರಿಕರಿಗೆ ಸತ್ಯಾಸತ್ಯತೆ ತಿಳಿಸಬೇಕು ಎಂದು ಒತ್ತಾಯಿಸಿದರು. ಹಾಡೋನಹಳ್ಳಿಯಲ್ಲಿ ವಶಪಡಿಸಿಕೊಂಡಿದ್ದ 72 ಲೋಡ್ ಮರಳು ಈಗಾಗಲೇ ಮಾಯವಾಗಿದೆ ಎಂದರು.
ಮತ್ತೆ ಗುತ್ತಿಗೆದಾರರಿಗೆ: ಅಕ್ರಮ ಮರಳು ಸಂಗ್ರಹದ ಮೇಲೆ ದಾಳಿ ನಡೆಸಿದ್ದು ಸಾಗತಾರ್ಹವೇ. ಈ ದಾಳಿಯಲ್ಲಿ ವಶಪಡಿಸಿಕೊಂಡ ಮರಳನ್ನು ಎಲ್ಲಿ ಸಂಗ್ರಹಣೆ ಮಾಡಲಾಗಿದೆ, ಪ್ರಮಾಣ ಎಷ್ಟು ಎಂದು ಪ್ರಶ್ನಿಸಿದ ಅವರು, ವಶಪಡಿಸಿಕೊಂಡ ಮರಳನ್ನು ಮತ್ತೆ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದ್ದರಿಂದ ಸಮಗ್ರ ಮಾಹಿತಿಗಳನ್ನು ಕೂಡಲೇ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಇನ್ನೂ ಇದೆ: ಜಿಲ್ಲೆಯ ಇನ್ನೂ ಹಲವೆಡೆ ಅಕ್ರಮ ಮರಳು ಸಂಗ್ರಹಿಸಲಾಗಿದ್ದು, ಇಲ್ಲಿಯೂ ಜಿಲ್ಲಾಡಳಿತ ದಾಳಿ ನಡೆಸಬೇಕು ಎಂದ ಅವರು, ಜಿಲ್ಲಾದ್ಯಂತ 62 ಮರಳು ಕ್ವಾರಿಗಳಿಗೆ. ಆದರೆ ಅನುಮತಿ ಕೊಟ್ಟಿರುವುದು ಕೆಲವಕ್ಕೆ ಮಾತ್ರ. ಆದರೂ ಹಲವೆಡೆ ಮರಳು ಸಂಗ್ರಹಿಸಲಾಗಿದೆ. ಆದ್ದರಿಂದ ಮರಳು ಪ್ರಕರಣವನ್ನು ಸಿಬಿಐ ಅಥವಾ ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಮರಳು ಸಾಗಣೆ ವಾಹನಕ್ಕೆ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಿದ್ದರೂ ಜಿಪಿಎಸ್ ಇಲ್ಲದ ವಾಹನಗಳಲ್ಲಿ ಮರಳು ಸಾಗಿಸಲಾಗುತ್ತಿದೆ. ಆದರೂ ಸಾರ್ವಜನಿಕರಿಗೆ ಮರಳು ಸಿಗುತ್ತಿಲ್ಲ. ಜಿಲ್ಲಾಡಳಿತದ ಕ್ರಮಗಳನ್ನು ಜನರು ಅನುಮಾನದಿಂದ ನೋಡುವಂತಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ನಗರಸಭೆ ಮಾಜಿ ಅದ್ಯಕ್ಷ ಎಂ. ಶಂಕರ್, ಮುಖಂಡ ಡಿ.ಎಸ್. ಅರುಣ್, ಸುಬ್ಬಣ್ಣ, ಬಿ.ಆರ್. ಮಧುಸೂದನ್ ಮತ್ತಿತರರು ಇದ್ದರು.