ರಸ್ತೆ ಹೋಗಿ ಬತ್ತದ ಗದ್ದೆಯಾಯ್ತು ಡುಂ.. ಡುಂ...
ಹೊಸನಗರ: ಅಸರ್ಮಕ ಕಾಮಗಾರಿಯಿಂದಾಗ ಸಂಪೂರ್ಣ ಕೆಸರು ಗದ್ದೆಯಾಗಿ ಮಾರ್ಪಟ್ಟಿರುವ ತಾಲೂಕಿನ ನಗರ-ಕಾನುಗೋಡು ರಸ್ತೆ ದುರವಸ್ಥೆ ಮುಂದುವರಿದಿದ್ದು ಗ್ರಾಮಸ್ಥರ ಪ್ರತಿಭಟನೆ ಮುಂದುವರೆದಿದೆ.
ರಸ್ತೆಯಲ್ಲಿ ಓಡಾಟ ಸುಗಮಗೊಳಿಸಲು ಅಧಿಕಾರಿಗಳ ಹರಸಾಹಸ ಮುಂದುವರಿಸಿದ್ದಾರೆ.
ಕಳೆದ 10 ದಿನಗಳಿಂದ ನಗರ-ಕಾನುಗೋಡು ರಸ್ತೆಯಲ್ಲಿ ಓಡಾಟ ಕಷ್ಟಸಾಧ್ಯವಾಗಿದ್ದು ಶಾಲಾಮಕ್ಕಳು, ಗ್ರಾಮ ಸ್ಥರ ಪಾಡು ಹೇಳತೀರದಾಗಿದೆ. 8 ಕಿಮೀ ರಸ್ತೆಗೆ ಹೊಸದಾಗಿ ಡಾಂಬರೀಕರಣ ಆಗಿದ್ದು ರಸ್ತೆ ಇಕ್ಕೆಲಗಳಿಗೆ ಗ್ರಾವೆಲ್ ಹಾಕಿ, ರೋಡ್ ರೋಲರ್ ಹೊಡೆದು ಸಮತಟ್ಟು ಮಾಡಬೇಕಿತ್ತು. ಆದ್ಯಾವದನ್ನು ಮಾಡದೆ ಬೇಕಾಬಿಟ್ಟಿ ಹೇರಳ ಮಣ್ಣು ಚೆಲ್ಲಿರುವುದೆ ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣ. ಮಳೆ ಬರುತ್ತಿದ್ದಂತೆ ಕೆಸರಿನ ರಾಡಿಯಾಗಿದ್ದು ಹೊರಗೆ ಕಾಲಿಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಅಕ್ಕಪಕ್ಕದ ಮನೆಗಳಿಗೂ ಕೆಸರು ಮುತ್ತಿಕೊಂಡಿದ್ದು, ಗ್ರಾಮಸ್ಥರು ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಕೆಸರಿನ ಮೇಲೆ ಮಲಗಿದರು: ಸುಗಮ ಸಂಚಾರಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹೆಚ್ಚಿನ ಗಮನಹರಿಸದ ಕಾರಣ ಕುಪಿತಗೊಂಡ ಸ್ಥಳೀಯರು ಲೋಕೋಪಯೋಗಿ ಅಧಿಕಾರಿಗಳ ವಾಹನ ತಡೆದು ಪ್ರತಿಭಟಿಸಿದರು. ಪ್ರಮುಖರಾದ ಕರುಣಾಕರಶೆಟ್ಟಿ ಮತ್ತು ಗೋಪಾಲಶೆಟ್ಟಿ ಕೆಸರಿನ ರಸ್ತೆ ಮೇಲೆ ತೆವಳಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಸ್ಸು ಮಾರ್ಗ ಬದಲು: ಈ ನಡುವೆ ನಗರ-ಕಾನುಗೋಡು ರಸ್ತೆ ಅವ್ಯವಸ್ಥೆಯಿಂದಾಗಿ ಬಸ್ಸುಗಳು ಕಾಡಿಗ್ಗೇರಿ ಮಾರ್ಗವಾಗಿ ನಗರ ತಲುಪುತ್ತಿದ್ದು, ಕರಿಮನೆ, ಕಂದ್ಲಕೊಪ್ಪ, ಮುಂಡಳ್ಳಿ ಗ್ರಾಮದ ದಿನನಿತ್ಯ ಓಡಾಡುವ ಶಾಲಾಮಕ್ಕಳು, ಪ್ರಯಾಣಿಕರು ಸಂಪರ್ಕಕ್ಕಾಗಿ ಒದ್ದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ಮಾರ್ಗ ಬದಲಿಸದಂತೆ ಆಭಾಗದ ಗ್ರಾಮಸ್ತರು ಒತ್ತಾಯಿಸಿದ್ದಾರೆ. ಗುತ್ತಿಗೆದಾರರು ಮಾಡಿದ ತಪ್ಪಿನಿಂದಾಗಿ ಈ ಭಾಗದಲ್ಲಿ ಜನಜೀವನವೇ ಅತಂತ್ರವಾಗಿದ್ದು 8 ಕಿ.ಮೀ ವ್ಯಾಪ್ತಿಯ ರಸ್ತೆಯನ್ನು ಕೆಸರಿನಿಂದ ಮುಕ್ತಿಗೊಳಿಸುವುದು ಹೇಗೆ ಎಂಬ ಚಿಂತೆ ಅಧಿಕಾರಿಗಳನ್ನು ಬಾಧಿಸುತ್ತಿದೆ. ಮತ್ತೊಂದೆಡೆ ಜನರ ಆಕ್ರೋಶ ಕೂಡ ಕೇಳಿ ಬರುತ್ತಿದೆ. ಈ ನಡುವೆ ಸುಗಮ ಸಂಚಾರ ಕಲ್ಪಿಸುವ ಸಲುವಾಗಿ ಅಧಿಕಾರಿಗಳು ಹೆಣಗಾಡುತ್ತಿದ್ದು, ಸಹಜಸ್ಥಿತಿಗೆ ಬರಲು ಇನ್ನು ಮೂರ್ನಾಲ್ಕು ದಿನ ಬೇಕು ಎನ್ನಲಾಗುತ್ತಿದೆ.