500 ವಿದ್ಯಾರ್ಥಿನಿಯರಿಗೆ ಒಂದೇ ಶೌಚ!
ಶಿರಾಳಕೊಪ್ಪ: ಪಟ್ಟಣದ ಹೆಣ್ಣುಮಕ್ಕಳ ಜೂನಿಯರ್ ಕಾಲೇಜು ಹಾಗೂ ಪ್ರೌಢ ಶಾಲೆಯಲ್ಲಿ ಸೂಕ್ತ ಶೌಚಾಲಯ ಇಲ್ಲದೇ ನಿತ್ಯವೂ ವಿದ್ಯಾರ್ಥಿನಿಯರು ಪರದಾಡುವಂತಾಗಿದೆ.
ಶಿರಾಳಕೊಪ್ಪ ಭಾಗದಲ್ಲಿ ಹೆಣ್ಣುಮಕ್ಕಳಿಗಾಗಿ ಇರುವ ಏಕಮೇವ ಕಾಲೇಜು ಇದಾಗಿದೆ. ಹಾಗೂ ಪಟ್ಟಣದ ಮಧ್ಯ ಭಾಗದಲ್ಲಿರುವ ಈ ಕಟ್ಟಡದಲ್ಲಿ ಪ್ರೌಢ ಶಾಲೆ ಮತ್ತು ಪಿಯೂ ತರಗತಿಗಳು ಒಂದೇ ಬದಿಯಲ್ಲಿದ್ದು, ತರಗತಿಗಳು ಬೇರೆ ಬೇರೆ ಸಮಯದಲ್ಲಿ ನಡೆಯುತ್ತವೆ.
ಜೂನಿಯರ್ ಕಾಲೇಜಿನಲ್ಲಿ 250 ಹಾಗೂ ಪ್ರೌಢ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇರುವ ಈ ಶಾಲೆಯಲ್ಲಿ ಇರುವುದು ಕೇವಲ ಎರಡು ಶೌಚಾಲಯ ಮಾತ್ರ. ಇದರಲ್ಲಿ ಶಿಕ್ಷಕರಿಗಾಗಿ ಒಂದು ಮೀಸಲು. ಇರುವ ಮತ್ತೊಂದು ಶೌಚಾಲಯವನ್ನು 500 ವಿದ್ಯಾರ್ಥಿಗಳು ಉಪಯೋಗಿಸ ಬೇಕಾಗಿದೆ. ಅಲ್ಲದೇ ಈ ಶೌಚಾಲಯಕ್ಕೆ ಸರಿಯಾದ ಬಾಗಿಲು ಸಹ ಇಲ್ಲ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಕೆಲ ಶಿಕ್ಷಕರನ್ನು ಪ್ರಶ್ನಿಸಿದಾಗ ಇರುವ ಎರಡು ಶೌಚಾಲಯಗಳನ್ನು ವಿದ್ಯಾರ್ಥಿನಿಯರಿಗೆ ಬಿಟ್ಟುಕೊಡಲಾಗಿದೆ ಎನ್ನುತ್ತಾರೆ. ಹಾಗಾದರೆ ಶಿಕ್ಷಕರು ಎಲ್ಲಿ ಹೋಗುತ್ತಾರೆ ಎಂದು ಪ್ರಶ್ನಿಸಿದಾಗ ಹತ್ತಿರವಿರುವ ಬಸ್ ನಿಲ್ದಾಣದ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳುತ್ತಾರೆ. ತಕ್ಷಣ ಶಿಕ್ಷಣ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂಬುದು ವಿದ್ಯಾರ್ಥಿನಿಯರ ಅನಿಸಿಕೆ.
ಪ್ರಾಂಶುಪಾಲರು ಹೇಳೋದೇನು?
ಪ್ರಾಂಶುಪಾಲ ಫಕ್ಕೀರಪ್ಪನವರನ್ನು ಪತ್ರಿಕೆ ಪ್ರಶ್ನಿಸಿದಾಗ ಇರುವ ವ್ಯವಸ್ಥೆಯಲ್ಲಿ ಕಾಲೇಜು ಮತ್ತು ಶಾಲೆ ನಡೆಯುತ್ತಿದೆ. ಕಾಲೇಜಿಗೆ ಒಂದು ಎರಡು ಕೊಠಡಿ ಬೇಕಾದಾಗ ಪ್ರೌಢ ಶಾಲೆಯ ಕೊಠಡಿಗಳನ್ನು ಉಪಯೋಗಿಸಲಾಗುತ್ತಿದೆ. ಶೌಚಾಲಯಕ್ಕೆ ಜಾಗ ಕಿರಿದಾಗಿದೆ. ಹೆಣ್ಣುಮಕ್ಕಳಿಗೆ ಅಗತ್ಯ ಶೌಚಾಲಯ ಬೇಕಾಗಿದೆ. ಕಾಲೇಜಿಗೆ ಬೇರಾವ ಜಾಗವಿಲ್ಲದ ಕಾರಣ ಈ ಸಮಸ್ಯೆ ಉದ್ಭವಿಸಿದೆ ಎಂದಿದ್ದಾರೆ.