ಆರೋಗ್ಯ ಕಾರ್ಡ್ ಬಡವರ ಸಂಜೀವಿನಿ
ಸೊರಬ: ಮಣಿಪಾಲ ಆರೋಗ್ಯ ಕಾರ್ಡ್ ಬಡವರ ಸಂಜೀವಿನಿಯಾದ್ದರಿಂದ ಕಾರ್ಡ್ ಪಡೆದು ಆರೋಗ್ಯ ಕಾಪಾಡಿಕೊಳ್ಳುವಂತೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಜನರಲ್ ಮ್ಯಾನೇಜರ್ ಮೋಹನ ಶೇಟ್ ಹೇಳಿದರು. ಪಟ್ಟಣದ ವಿಪ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಶಾಖೆಯಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಆರೋಗ್ಯ ಕಾರ್ಡ್ ಸಾಮಾಜಿಕ ಕಳಕಳಿಯ ಯೋಜನೆಯಾಗಿದೆ. ರಾಜ್ಯದ 9 ಆಸ್ಪತ್ರೆಗಳಲ್ಲಿ ಇದರ ಸೌಲಭ್ಯ ಪಡೆಯಬಹುದು ಎಂದರು. ಆರೋಗ್ಯ ಸೌಲಭ್ಯಕ್ಕಾಗಿ ರೂ. 250 ಹಾಗೂ ಕೌಟುಂಬಿಕ ಆರೋಗ್ಯ ಸೌಲಭ್ಯಗಳಿಗಾಗಿ ರೂ. 500ರ ವಾರ್ಷಿಕ ಪಾವತಿಯೊಂದಿಗೆ ಮಣಿಪಾಲ ಆರೋಗ್ಯ ಕಾರ್ಡ್ ಪಡೆಯಬಹುದು. ಹೆತ್ತವರನ್ನೂ ಈ ಸೌಲಭ್ಯಗಳಡಿ ತರಬೇಕೆಂದರೆ ರೂ. 100 ಹೆಚ್ಚುವರಿ ಪಾವತಿಸಿ, ಅವರನ್ನು ಈ ಯೋಜನೆಯ ವ್ಯಾಪ್ತಿಯಡಿ ತರಬಹುದು. ಜೂ.25 ರಿಂದ ಜುಲೈ 26ರೊಳಗೆ ನೊಂದಣಿ ಮಾಡಿಸಿಕೊಳ್ಳಬಹುದು. ಸೊರಬ ವಿಪ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಕಾರ್ಡ್ ಪಡೆಯಬಹುದು ಎಂದರು.