ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸೂಡಾ ಹಗರಣ ಸಿಬಿಐ ತನಿಖೆ 24ರಂದು ಸಿಎಂಗೆ ಮನವಿ

Rashmi Kasaragodu
Updated On : 19 Jun 2014, 11:38 am

ಶಿವಮೊಗ್ಗ:  ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಹಂಚಿಕೆ ಅವ್ಯವಹಾರದ ಪ್ರಕರಣದ ಆರೋಪಿಗಳ ಬಂಧನ- ಶಿಸ್ತು ಕ್ರಮಗಳ ವಿಚಾರದಲ್ಲಿ ತಾಂತ್ರಿಕ ಕಾರಣ ಒಡ್ಡಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಯತ್ನ ನಡೆದಿದೆ. ಈ ಪ್ರಕರಣದ ತನಿಖೆ ಜವಾಬ್ದಾರಿಯನ್ನು ಸಿಬಿಐಗೆ ಒಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರನ್ನು ಜೂ.24 ರಂದು ಭೇಟಿಯಾಗಿ ಒತ್ತಾಯಿಸಲು ವಿವಿಧ ಸಂಘಟನೆಗಳು ನಿರ್ಧರಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್, ಸೋಮವಾರದ ಸೂಡಾದ ವಿಶೇಷ ಸಭೆಯಲ್ಲಿ ತನಿಖೆಗೆ ರಚಿಸಿದ ಸಮಿತಿಯು ಅಸಿಂಧು ಎಂದು ತಿಳಿಸಿ, ಈ ಕೋಟ್ಯಂತರ ರು. ಅವ್ಯವಹಾರದ ಪ್ರಕರಣದ ತನಿಖಾ ವರದಿ ತಿರಸ್ಕರಿಸಲಾಗಿದೆ. ಇದರಿಂದ ಈ ಪ್ರಕರಣದ ಮುಖ್ಯ ಆರೋಪಿಗಳು ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿರಬಹುದು. ಆದರೆ ಇವರು ಮಾಡಿರುವ ಅವ್ಯವಹಾರಗಳ ಸಂಪೂರ್ಣ ದಾಖಲೆಗಳನ್ನು ನಾವು ಪಡೆದಿದ್ದು, ರಾಜ್ಯ ಸರ್ಕಾರ ಮಂಡ್ಯದ ಮೂಡಾದ ಪ್ರಕರಣವನ್ನು ಸಿಬಿಐಗೆ ವಹಿಸಿದಂತೆ ಈ ಪ್ರಕರಣವನ್ನು ವಹಿಸಲು ವಿವಿಧ ಸಂಘಟನೆಗಳು ಸೇರಿ ಒತ್ತಾಯಿಸುತ್ತೇವೆ ಎಂದರು.
ಒಂದೊಮ್ಮೆ ರಾಜ್ಯಸರ್ಕಾರ ಈ ವಿಚಾರದಲ್ಲಿ ಮೀನಮೇಷ ಎಣಿಸಿದರೆ ನಾವು ರಾಜ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ದಾಖಲಿಸಲು ನಿರ್ಧರಿಸಿರುತ್ತೇವೆ ಎಂದು ಹೇಳಿದರು.
ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ದಾಷ್ಟ್ಯದಿಂದ ಹಾಗೂ ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿ ವಿವೇಚನಾ ಕೋಟಾದಡಿಯಲ್ಲಿ ನಿವೇಶನಗಳನ್ನು ನೀಡಲಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಸಂಬಂಧಿಕರ ಹೆಸರಿನಲ್ಲಿಯೂ ನಿವೇಶನಗಳನ್ನು ಕಾನೂನು ಬಾಹಿರವಾಗಿ ನೀಡಲಾಗಿದೆ. ಹಾಗಾಗಿ, ಈ ಅವ್ಯವಹಾರದ ಪ್ರಕರಣದಲ್ಲಿ ಎಲ್ಲ ಪಕ್ಷದವರು ಒಂದಾಗಿ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸದೇ ಮೌನ ವಹಿಸಿದ್ದಾರೆ ಎಂದು ಟೀಕಿಸಿದರು.
ಆತುರದ ನಿರ್ಧಾರ:  ಕಾನೂನು ತಜ್ಞರ ಸಲಹೆ ಪಡೆಯದೇ ಈ ಹಗರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ರವೀದ್ರನಾಥ್  ಅಧ್ಯಕ್ಷತೆಯಲ್ಲಿ ತನಿಖಾ ತಂಡದವರನ್ನು ಜಿಲ್ಲಾಧಿಕಾರಿ ರಚನೆ ಮಾಡಿರುವುದು ಆತುರದ ನಿರ್ಧಾರವಾಗಿದೆ. ಜಿಲ್ಲೆಯ ಜನಪರ ಸಂಘಟನೆಗಳು ಈ ವಿಚಾರದಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ನಾವುಗಳು ವಾಜಪೇಯಿ ಬಡಾವಣೆಯ 1305 ನಿವೇಶನಗಳ ಅಕ್ರಮ ಹಂಚಿಕೆಯ ಪಟ್ಟಿಯನ್ನು, ಬೋಗಸ್ ವಿಳಾಸಗಳನ್ನು ಮುಂತಾದ ದಾಖಲೆಗಳನ್ನು ಪಡೆದಿದ್ದು, ಅವುಗಳನ್ನು ಏ.24 ರಂದು ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಿಗೆ ನೀಡಲಿದ್ದೇವೆ ಎಂದು ತಿಳಿಸಿದರು.
ಮಂಜುಳಾದೇವಿ, ಸುವರ್ಣ ನಾಗರಾಜ್, ಜನಮೇಜಿರಾವ್, ಮಂಜುಳಾ ಆನಂದ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement