ಹಕ್ಕುಪತ್ರ ದುರ್ಬಳಕೆ ಬೇಡ
ಸಾಗರ: ಬಗರ್‌ಹುಕುಂ ಹಕ್ಕುಪತ್ರ ಪಡೆದುಕೊಂಡವರು ಅದನ್ನು ದುರುಪಯೋಗಪಡಿಸಿಕೊಳ್ಳದೆ ಸದುಪಯೋಗಪಡಿಸಿಕೊಳ್ಳಬೇಕೆಂದು ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಕಾಗೋಡು ಅಣ್ಣಪ್ಪ ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಬಗರ್‌ಹುಕುಂ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿ, ಕೆಲವು ಅರ್ಜಿಗಳು ಕಾನುಖರಾಬು, ಅರಣ್ಯ, ಸೊಪ್ಪಿನಬೆಟ್ಟ ವ್ಯಾಪ್ತಿಗೆ ಬಂದಿರುವುದು ಹಾಗೂ ಸರ್ಕಾರದ ಹೊಸ ಕಾಯ್ದೆಯಂತೆ ನಗರದಿಂದ ಐದು ಕಿಮೀ ಸುತ್ತಮುತ್ತಲಿನ ಪ್ರದೇಶ ಪರಿಗಣಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಬಗರ್‌ಹುಕುಂ ಹಕ್ಕುಪತ್ರ ನೀಡಲು ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿದರು. ತಹಸೀಲ್ದಾರ್ ಜಿ.ಎಂ.ಬೋರ್ಕರ್ ಮಾತನಾಡಿದರು. ಬಗರ್‌ಹುಕುಂ ಸಮಿತಿ ಸದಸ್ಯರಾದ ಲಿಂಗರಾಜ್, ವೀಣಾ ಬೆಳೆಯೂರು, ಕಂದಾಯ ಇಲಾಖೆಯ ಕಲ್ಲಪ್ಪ ಮೆಣಸಿನಾಳ್, ಚಂದ್ರಶೇಖರ್ ಇದ್ದರು.
ಜಿಲ್ಲೆಯಲ್ಲಿ ಆರೋಗ್ಯ ತಪಾಸಣೆ 21 ರವರೆಗೆ
ಶಿವಮೊಗ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಅಂಗನವಾಡಿ ಕೇಂದ್ರಗಳ 6 ವರ್ಷದೊಳಗಿನ ಮಕ್ಕಳ, ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯ ತಪಾಸಣೆಯ ಕಾರ್ಯಕ್ರಮವನ್ನು ಜೂನ್ 17ರಿಂದ 21ರವರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಅಂಗನವಾಡಿ ಕೇಂದ್ರಗಳ 6 ವರ್ಷದ ಮಕ್ಕಳ ಆರೋಗ್ಯ ತಪಾಸಣೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ, ಅಂಗನವಾಡಿ ಕೇಂದ್ರಗಳಿಂದ ಹೊರಗುಳಿದ 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆಯನ್ನು ಜೂನ್ 19ರಂದು ನಗರಪ್ರದೇಶಗಳಲ್ಲಿ ಅಂಗನವಾಡಿ ಮಕ್ಕಳ, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯ ತಪಾಸಣೆಯನ್ನು ಜೂನ್ 21ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.