ಜೀವರಕ್ಷಕ ಔಷಧಿ ಕೊರತೆಗೆ ಆರೋಗ್ಯಾಧಿಕಾರಿಗಳೇ ಹೊಣೆ
ಸಾಗರ: ಆಸ್ಪತ್ರೆಗಳಲ್ಲಿ ಜೀವರಕ್ಷಕ ಸಿಗದೆ ರೋಗಿ ಸಾವನ್ನಪ್ಪಿದರೆ ಅದರ ಹೊಣೆಯನ್ನು ತಾಲೂಕು ಆರೋಗ್ಯಾಧಿಕಾರಿಗಳೇ ಹೊರಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಬಿ. ರಾಮಮೂರ್ತಿ ಎಚ್ಚರಿಕೆ ನೀಡಿದರು.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆಯಲಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಉಪವಿಭಾಗೀಯ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತ ಹಾಗೂ ಹಾವು ಕಡಿತ ಪ್ರತಿರೋಧದ ಚುಚ್ಚುಮದ್ದನ್ನು ಕಡ್ಡಾಯವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ಚುಚ್ಚುಮದ್ದು ಸಂಗ್ರಹ: ಅಗತ್ಯವಿಲ್ಲದ ಔಷಧಿ ಖರೀದಿಸುವುದನ್ನು ಕಡಮೆ ಮಾಡಿ ತುರ್ತು ಸಂದರ್ಭದಲ್ಲಿ ಬೇಕಾಗುವ ರೇಬಿಸ್, ಹಾವು ಕಡಿತದಂತಹ ಚಿಕಿತ್ಸೆಗೆ ಬೇಕಾದ ಚುಚ್ಚುಮದ್ದು ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಿ ಎಂದು ಸೂಚನೆ ನೀಡಿದರು.
ಸಾಗರ, ಹೊಸನಗರ ಹಾಗೂ ಸೊರಬ ತಾಲೂಕುಗಳಿಗೆ ವೈದ್ಯರು ಬರಲು ಹಿಂದೇಟು ಹಾಕುತ್ತಿದ್ದಾರೆ ಇದಕ್ಕೆ ಕಾರಣ ಏನು ಎನ್ನುವುದರ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳು ವರದಿ ತಯಾರಿಸಿ ತಮಗೆ ಕೊಡುವಂತೆ ಆದೇಶಿಸಿದ ಅವರು, 2015ರ ಮಾರ್ಚ್ ಒಳಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಇರಬೇಕು ಎಂದು ತಾಕೀತು ಮಾಡಿದರು.
ಜೀವ ವೈವಿಧ್ಯತಾ ಸಮಿತಿ: ಮಲೆನಾಡು ಪ್ರದೇಶವಾದ ಸಾಗರ ತಾಲೂಕಿನಲ್ಲಿ ಈತನಕ ಜೀವ ವೈವಿಧ್ಯತಾ ಸಮಿತಿ ರಚನೆ ಮಾಡದಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಕಾರ್ಯದರ್ಶಿಗಳು ತಕ್ಷಣ ಅರಣ್ಯ ಇಲಾಖೆ ಹಾಗೂ ತಾಪಂ ವತಿಯಿಂದ ಸಮಿತಿ ರಚನೆಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಕೆಲವು ಭಾಗಗಳಲ್ಲಿ ಅರಣ್ಯ ರಕ್ಷಕರು ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ದೂರುಗಳಿದೆ.
ಮರಕಳವು, ಅರಣ್ಯ ಲೂಟಿಯಂತಹ ಪ್ರಕರಣಗಳಲ್ಲಿ ಮೌನವಾಗಿದ್ದು, ಜನರು ತಪ್ಪು ಮಾಡದೆ ಇದ್ದರೂ ಅವರ ಮೇಲೆ ದೌರ್ಜನ್ಯ ನಡೆಸುವ ಅರಣ್ಯ ರಕ್ಷಕರನ್ನು ಹತೋಟಿಯಲ್ಲಿಡಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಎಚ್ಚರಿಸಿದರು.
ಸಬ್ ರಿಜಿಸ್ಟ್ರಾರ್ ಕಚೇರಿ ಬಗ್ಗೆ ಗರಂ: ತಾಲೂಕಿನ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಉಪವಿಭಾಗಾಧಿಕಾರಿಗಳು ವಿಶೇಷ ಗಮನ ಇಡಬೇಕು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಬೋಗಸ್ ಖಾತೆ ಮಾಡಲಾಗುತ್ತಿದೆ ಎಂಬ ದೂರು ಇದೆ. ಯಾರದ್ದೋ ಹೆಸರಿನಲ್ಲಿರುವ ಖಾತೆಯನ್ನು ಹಣ ಪಡೆದು ಯಾರದ್ದೋ ಹೆಸರಿಗೆ ಮಾಡಿಕೊಡವ ಸಂಸ್ಕೃತಿಯನ್ನು ಮಟ್ಟ ಹಾಕಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ, ತಹಸೀಲ್ದಾರ್ ಜಿ.ಎಂ. ಬೋರ್ಕರ್, ಡಿ.ವೈ.ಎಸ್.ಪಿ. ಸುರೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
108 ವಾಹನಕ್ಕೆ ಒತ್ತಾಯ
ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ, ತುಮರಿ ಭಾಗದಲ್ಲಿ ಗ್ರಾಮಸ್ಥರು 108 ವಾಹನ ಸೇವೆ ಕಲ್ಪಿಸುವುದು ಹಾಗೂ ಆಸ್ಪತ್ರೆಗಳಿಗೆ ಖಾಯಂ ವೈದ್ಯರ ನೇಮಕಕ್ಕೆ ಸಂಬಂಧಿಸಿದಂತೆ ಆಡಳಿತವನ್ನು ಒತ್ತಾಯ ಮಾಡುತ್ತಾ ಬಂದಿದ್ದಾರೆ ಎಂದು ಉಸ್ತುವಾರಿ ಕಾರ್ಯದರ್ಶಿಯವರ ಗಮನಕ್ಕೆ ತಂದರು. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಭರವಸೆ ನೀಡಿದರು. ಈ ಶೈಕ್ಷಣಿಕ ಸಾಲಿನಲ್ಲಿ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ತರುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಹಿಂದೆ ಇದ್ದಾರೆ ಎನ್ನುವುದನ್ನು ಪತ್ತೆ ಹಚ್ಚಿ ಅವರಿಗೆ ವಿಶೇಷ ತರಬೇತಿ ನೀಡಿ, ತರಬೇತಿ ನೀಡುವ ಶಿಕ್ಷಕರಿಗೆ ವಿಷಯ ಕುರಿತು ಕಾರ್ಯಾಗಾರ ಏರ್ಪಡಿಸುವಂತೆ ಸೂಚಿಸಿದರು. ಪಿಯುಸಿ ಫಲಿತಾಂಶವನ್ನೂ ಉತ್ತಮಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಆದೇಶಿಸಿದರು.