ವೈದ್ಯರಿಲ್ಲದ ತ್ಯಾಗರ್ತಿ ಆರೋಗ್ಯ ಕೇಂದ್ರಕ್ಕೆ ಮತ್ತೊಂದು ಶವಾಗಾರ
ವಿಧಾಸಭಾಧ್ಯಕ್ಷ ಕಾಗೋಡು ತಿಮ್ಮಪ್ಪರ ಕ್ಷೇತ್ರದಲ್ಲಿ ನಿರ್ಲಕ್ಷ್ಯಕ್ಕೀಡಾದ ಹಳೇ ಕಟ್ಟಡ
ತ್ಯಾಗರ್ತಿ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕಾತಿ ಇಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಆಸ್ಪತ್ರೆ ಕಟ್ಟಡ ಸೋರುತ್ತಿದೆ. ಆದರೆ, ಈ ಆಸ್ಪತ್ರೆಗೆ ಮತ್ತೊಂದು ಶವಾಗಾರ ಕಟ್ಟಲು ಅಡಿಪಾಯ ಹಾಕಲಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಗರ ತಾಲೂಕಿನ ತ್ಯಾಗರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಒಂದು ಶವಾಗಾರ ಕಟ್ಟಡವಿದೆ. ಇದುವರೆಗೂ ಈ ಕಟ್ಟಡದಲ್ಲಿ ಕಳೆದ 5-6 ವರ್ಷಗಳಿಂದ ಯಾವುದೇ ಪೋಸ್ಟ್‌ಮಾರ್ಟ್‌ಂ ನಡೆದಿರುವುದಿಲ್ಲ. ಆದರೂ ಈ ಆಸ್ಪತ್ರೆ ಆವರಣದಲ್ಲಿ ರು. 1.46 ಲಕ್ಷ ವೆಚ್ಚದಲ್ಲಿ ತಾಲೂಕು ಪಂಚಾಯಿತಿ ಅನುದಾನದಿಂದ
ಇನ್ನೊಂದು ಶವಾಗಾರ ಕಟ್ಟಡಕ್ಕೆ ಅಡಿಪಾಯ ಹಾಕಲಾಗಿದೆ.
ದುಂದು ವೆಚ್ಚ ಸರಿಯೇ: ಈ ಆಸ್ಪತ್ರೆ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಸಾರ್ವಜನಿಕರು ವಾಸವಾಗಿದ್ದಾರೆ. ಹಾಗೂ ಪ್ರೌಢಶಾಲೆಯೂ ಇದ್ದು, ಇದಕ್ಕೆ ಹತ್ತಿರವಾಗಿ ಶವಾಗಾರ ನಿರ್ಮಿಸಲಾಗುತ್ತಿದೆ. ಕೆಲವು ಜನಪ್ರತಿನಿಧಿಗಳ ಹಾಗೂ ಗುತ್ತಿಗೆದಾರರ ಹಿತಾಸಕ್ತಿಗೋಸ್ಕರ ಸಾರ್ವಜನಿಕರ ತೆರಿಗೆ ಹಣ ಈ ರೀತಿ ದುಂದು ವೆಚ್ಚವಾಗುತ್ತಿರುವುದು ಸರಿಯೇ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಕಳೆದವಾರ ಕಾಗೋಡು ತಿಮ್ಮಪ್ಪನವರು ಈ ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆ ಒಳಗಡೆ ಸಿಮೆಂಟ್ ಹಾಗೂ ಕಬ್ಬಿಣದ ದಾಸ್ತಾನು ಇಟ್ಟಿರುವುದನ್ನು ಕಂಡು ತೆರವುಗೊಳಿಸಲು ಅಧಿಕಾರಿಗಳಿಗೆ ಹೇಳಿದ್ದರು. ಛಾವಣಿ ದುರಸ್ತಿಗೆ ಕಬ್ಬಿಣ ಹಾಗೂ ಸಿಮೆಂಟ್ ಶೀಟ್‌ಗಳನ್ನು ಹಾಕಿ ಸೋರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದರು. ಈಗ ಅದೇ ಸಾಮಗ್ರಿಗಳನ್ನು ಬಳಸಿ ಆಸ್ಪತ್ರೆ ಆವರಣದಲ್ಲಿ ಮತ್ತೊಂದು ಶವಾಗಾರ ರೂಂ ಕಟ್ಟುತ್ತಿದ್ದಾರೆ. ಆಡಳಿತ ನಡೆಸುವವರು ಸಾರ್ವಜನಿಕರಿಗೆ ಅತೀ ಅವಶ್ಯಕತೆ ಇರುವ ಕಾಮಗಾರಿ ನಡೆಸುವುದನ್ನು ಬಿಟ್ಟು ಯಾರದ್ದೋ ಹಿತಾಸಕ್ತಿಗೋಸ್ಕರ ಶವಾಗಾರ ನಿರ್ಮಿಸುತ್ತಿದ್ದಾರೆ ಎಂಬುದು ಸ್ಥಳೀಯರ ಅಸಮಾಧಾನದ ಮಾತು.
ಈ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಗೋಡು ತಿಮ್ಮಪ್ಪನವರು, ಮತ್ತೊಂದು ಶವಾಗಾರದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.
ವೈದ್ಯಾಧಿಕಾರಿ ಪ್ರತಿಕ್ರಿಯೆ: ತಾಲೂಕು ವೈದ್ಯಾಧಿಕಾರಿ ಡಾ.ಅಚ್ಯುತ್ ಈ ಕುರಿತು ಪ್ರತಿಕ್ರಿಯೆ ನೀಡಿ, ಹಳೇ ಶವಾಗಾರ ಆಸ್ಪತ್ರೆಯಿಂದ ಸ್ವಲ್ಪ ದೂರದಲ್ಲಿದ್ದು ಆ ಶವಾಗಾರ ಕೊಠಡಿಯನ್ನು ನಿರುಪಯುಕ್ತ ವಸ್ತುಗಳನ್ನು ಹಾಕುವ ಕೊಠಡಿ ಮಾಡಿಕೊಂಡು ಆಸ್ಪತ್ರೆಯ ಹತ್ತಿರ ಇನ್ನೊಂದು ಶವಾಗಾರ ಕಟ್ಟಲು ಜಾಗ ತೋರಿಸಲಾಗಿದೆ ಎಂದು ತಿಳಿಸಿದರು.
ನಿವಾಸಿಗಳಾದ ಆಲೆಮನೆ ರಂಗಪ್ಪ, ಈಶ್ವರ್, ಮಹಮದೀ, ಅಬ್ದುಲ್‌ರಜಾಕ್ ಮಾತನಾಡಿ ಹಳೇ ಶವಾಗಾರ ಉಪಯೋಗಿಸದೇ ಇದ್ದರೂ ಇನ್ನೊಂದು ಶವಾಗಾರದ ಅವಶ್ಯಕತೆ ಕಂಡುಬರುವುದಿಲ್ಲ. ಮೊದಲು ಆಸ್ಪತ್ರೆಗೆ ವೈದ್ಯರನ್ನು ನೇಮಕಗೊಳಿಸಿ ಅನಾರೋಗ್ಯದಿಂದ ಬಳಲುತ್ತಿರುವ ಸಾರ್ವಜನಿಕರಿಗೆ ಸೂಕ್ತ ಚಿಕಿತ್ಸೆಗೆ ಸೌಲಭ್ಯ ಕಲ್ಪಿಸಲಿ, ಆಸ್ಪತ್ರೆಯ ಕಟ್ಟಡವನ್ನೂ ದುರಸ್ತಿಗೊಳಿಸಬೇಕೆಂದು ಹೇಳಿದರು.