ಉಪಚುನಾವಣೆ; ಬಿಜೆಪಿ ಗೆಲವು ನಿಶ್ಚಿತ
ಸಾಗರ: ಬಳ್ಳಾರಿ, ಚಿಕ್ಕೋಡಿ ಹಾಗೂ ಶಿಕಾರಿಪುರ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಈ ನಿಟ್ಟಿನಲ್ಲಿ ಈಗಾಗಲೆ ಪಕ್ಷವು ಕಾರ್ಯತಂತ್ರ ರೂಪಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಹಾಗೂ ಶಿಕಾರಿಪುರ ಈಗಾಗಲೆ ಬಿಜೆಪಿ ಕೈನಲ್ಲಿದೆ. ಚಿಕ್ಕೋಡಿಯನ್ನು ಸಹ ಗೆಲ್ಲುವ ನಿಟ್ಟಿನಲ್ಲಿ ಎಲ್ಲ ತಂತ್ರ ರೂಪಿಸಲಾಗಿದೆ ಎಂದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಹೆಚ್ಚುವರಿಯಾಗಿ 2 ಹಾಲಿಗೆ ಪ್ರೋತ್ಸಾಹಧನ ನೀಡಲು ಮುಂದಾಗಿರುವುದು ಅವೈಜ್ಞಾನಿಕ. ಎಲ್ಲ ವರ್ಗದವರು ಹೈನುಗಾರಿಕೆ ಮಾಡುತ್ತಿದ್ದಾರೆ. ಖರ್ಚು ಎಲ್ಲರಿಗೂ ಒಂದೆ ಬರುತ್ತದೆ ಎಂದರು.
ಕಾಂಗ್ರೆಸ್ ಸರ್ಕಾರದ ಆಡಳಿತ ತೃಪ್ತಿಕರವಾಗಿಲ್ಲ. ಜೂ. 23ರಿಂದ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗಲಿದೆ. ಬಿಜೆಪಿ ಅಧಿವೇಶನದ ಒಳಗೆ ಹಾಗೂ ಹೊರಗೆ ಕಾಂಗ್ರೆಸ್ ಆಡಳಿತ ವೈಫಲ್ಯದ ವಿರುದ್ಧ ಹೋರಾಟ ನಡೆಸಲಿದೆ. ರಾಜ್ಯದ ಅಡಕೆ ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅಫಿಡವಿಟ್ ಹಿಂದಕ್ಕೆ ಪಡೆಯುವುದು, ಜಿಲ್ಲೆಗೆ ವಿಮಾನ ಯಾನ ಹಾಗೂ ರೈಲ್ವೆ ಯೋಜನೆಗೆ ಸಂಬಂಧಪಟ್ಟಂತೆ ಹೆಚ್ಚು ಒತ್ತು ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.