ಗಾಜನೂರು ತುಂಗಾ ಜಲಾಶಯ ಭರ್ತಿ
ಶಿವಮೊಗ್ಗ: ಕಳಸ, ಶೃಂಗೇರಿ ಸುತ್ತಮುತ್ತ ವ್ಯಾಪಕ ಮಳೆಯಾಗುತ್ತಿರುವುದರಿಂದ ತಡವಾಗಿಯಾದರೂ ಗಾಜನೂರು ಬಳಿಯ ತುಂಗಾ ಡ್ಯಾಂ ಭರ್ತಿಯಾಗಿದ್ದು, ಶುಕ್ರವಾರ 3 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದೆ. ಗುರುವಾರ ತಡರಾತ್ರಿ 4 ಕ್ರಸ್ಟ್ ಗೇಟ್ ತೆರೆದು ನೀರು ಬಿಡುಗಡೆ ಮಾಡಲಾಗಿದ್ದು, ಒಳಹರಿವು ಹೆಚ್ಚಾಗಿದ್ದರಿಂದ ಬೆಳಿಗ್ಗೆ ಇರುವ 22 ಕ್ರಸ್ಟ್ ಗೇಟ್ಗಳಲ್ಲಿ 18 ಗೇಟ್ ಗಳನ್ನು ತೆರೆಯಲಾಗಿತ್ತು. ಮಧ್ಯಾಹ್ನದ ವೇಳೆಗೆ ಹೊರಹರಿವನ್ನು ನಿಯಂತ್ರಿಸಲು 10 ಗೇಟ್ ಗಳನ್ನು ಮುಚ್ಚಲಾಗಿತ್ತು. ಜಿಲ್ಲೆಯಾದ್ಯಂತ ಮುಂಗಾರು ನಿಧಾನವಾಗಿ ವೇಗಗತಿ ಪಡೆಯುತ್ತಿದೆ. ಲಿಂಗನಮಕ್ಕಿ ಜಲಾಶಯದ ಒಳಹರಿವು 11 ಸಾವಿರ ಕ್ಯುಸೆಕ್ ತಲುಪಿತ್ತು. ಭದ್ರಾ ಜಲಾಶಯದ ಒಳಹರಿವು 6,500 ಕ್ಯೂಸೆಕ್ ಇದ್ದು, ಜಲಾಶಯದ ಮಟ್ಟ ಆಶಾದಾಯಕವಾಗಿಲ್ಲ.