ಸೌಲಭ್ಯ ಅಭಿವೃದ್ಧಿ ಯೋಜನೆಯಡಿ ಸಾಗರ ಆಸ್ಪತ್ರೆ ಆಯ್ಕೆ: ಡಾ. ಪ್ರಭುದೇವ್
ಸಾಗರ: ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ, ಬೆಳಗಾವಿಯ ಗೋಕಾಕ್, ಬಿಜಾಪುರ ಜಿಲ್ಲಾಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಆರೋಗ್ಯ ವಿಧಾನ ಅಭಿವೃದ್ಧಿ ಹಾಗೂ ಪುನರ್‌ಪರಿಶೀಲನಾ ವಿಭಾಗದ ಜಂಟಿ ನಿರ್ದೇಶಕ ಡಾ. ಪ್ರಭುದೇವ್ ಹೇಳಿದರು.
ಇಲ್ಲಿನ ಉಪವಿಭಾಗೀಯ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಈ ಯೋಜನೆ ಅನುಷ್ಠಾನಕ್ಕೆ ತರಬೇಕಾದರೆ ಸ್ಥಳೀಯವಾಗಿರುವ ವೈದ್ಯ ಸಿಬ್ಬಂದಿ ಭೇಟಿ ಸಂದರ್ಭದಲ್ಲಿ ಮುಕ್ತ ಮನಸ್ಸಿನಿಂದ ಸಮ್ಮತಿ ಸೂಚಿಸಬೇಕಾಗುತ್ತದೆ. ಪರಿಶೀಲನೆ ವೇಳೆ ತಯಾರಿಸಲಾದ ವರದಿಯನ್ನು ಆರೋಗ್ಯ ಇಲಾಖೆಯ ಗುಣಮಟ್ಟ ನಿಯಂತ್ರಣ ವಿಭಾಗಕ್ಕೆ ಸಲ್ಲಿಸಲಾಗುವುದು.ನಂತರ ದೆಹಲಿಯಿಂದ ಮತ್ತೊಂದು ತಂಡ ಆಗಮಿಸಿ ಅಂತಿಮ ಪರಿಶೀಲನೆ ನಡೆಸಲಿದೆ.
ಸಮಿತಿಯ ಸಮಗ್ರ ವರದಿ ಪರಿಶೀಲನೆ ನಂತರ ಎನ್.ಆರ್.ಎಚ್.ಎಂ. ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಆರೋಗ್ಯ ಮಾನ್ಯತೆ ಯೋಜನೆಗೆ ಅವಕಾಶ ಕಲ್ಪಿಸಲಿದೆ ಎಂದು ಮಾಹಿತಿ ನೀಡಿದರು.
ಸಾಗರ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯ, ಉತ್ತಮ ಕಟ್ಟಡ ಹಾಗೂ ವೈದ್ಯಕೀಯ ಪರಿಕರ ಇರುವುದರಿಂದ ಈ ಆಸ್ಪತ್ರೆಯನ್ನು ಪರಿಗಣಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇಲ್ಲಿನ ವೈದ್ಯ ಸಿಬ್ಬಂದಿಗೆ ನುರಿತ ತಂತ್ರಜ್ಞರಿಂದ ಒಂದು ಸುತ್ತಿನ ತರಬೇತಿ ಸಹ ನೀಡಲಾಗುತ್ತದೆ. ಯೋಜನೆ ಜಾರಿಗೆ ಬಂದರೆ ರೋಗಿಗಳಿಗೆ ಗುಣಮಟ್ಟದ ಹಾಗೂ ತ್ವರಿತಗತಿಯ ಸೇವೆ ಲಭ್ಯವಾಗಲಿದೆ. ವೈದ್ಯ ಸಿಬ್ಬಂದಿ ನಿರ್ವಹಿಸುವ ಕಾರ್ಯ, ಸಮಯ ಪರಿಪಾಲನೆ ಕುರಿತು ದಾಖಲಾತಿಗಳು ನಡೆಯುತ್ತದೆ ಎಂದು ತಿಳಿಸಿದರು.
ವಿಶ್ವಬ್ಯಾಂಕಿನಿಂದ ಎನ್‌ಆರ್‌ಎಚ್‌ಎಂಗೆ ಹಣಕಾಸಿನ ನೆರವು ಸಿಗಲಿದೆ. ಆಸ್ಪತ್ರೆಯ ಕಟ್ಟಡ ಅಭಿವೃದ್ಧಿ ಯಂತ್ರೋಪಕರಣ ಖರೀದಿಗೆ ಆರ್ಥಿಕ ಸಹಕಾರ ದೊರೆಯುತ್ತದೆ. ಸೀಮಿತ ಸಮಯದೊಳಗೆ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಈ ಯೋಜನೆ ಅತ್ಯಂತ ಅಗತ್ಯ. ಇದರ ಜೊತೆಗೆ ರಕ್ತನಿಧಿ ಕೇಂದ್ರ ಸ್ಥಾಪನೆ ಬಗ್ಗೆ ಸಹ ಗಮನ ಹರಿಸಲಾಗುವುದು. ವೈದ್ಯಸಿಬ್ಬಂದಿಗಳ ಕೊರತೆ ಇದ್ದರೆ ಅದನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ನಮ್ಮ ತಂಡ ಶಿಫಾರಸು ಮಾಡುತ್ತದೆ ಎಂದು ವಿವರಿಸಿದರು.
ಶಿವಮೊಗ್ಗ ಆರೋಗ್ಯ ವಿಧಾನ ಅಭಿವೃದ್ಧಿ ಹಾಗೂ ಪುನರ್ ಪರಿಶೀಲನಾ ವಿಭಾಗದ ಕೆ.ಎಸ್. ಡಾ.ಮಧು ಮಾತನಾಡಿ, ತುಮರಿ ಭಾಗದ ಜನರ ಬಹುಕಾಲದ ಬೇಡಿಕೆಯಾಗಿರುವ 108 ವಾಹನ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಂಡಿದೆ. ಜಿಲ್ಲೆಗೆ ಎರಡು 108 ಅಂಬ್ಯುಲೆನ್ಸ್ ಮಂಜೂರಾಗಿದ್ದು, 1 ವಾಹನವನ್ನು ಹಿನ್ನೀರಿನ ಭಾಗದ ಜನರ ಆರೋಗ್ಯ ಸೇವೆಗೆ ಕಲ್ಪಿಸುವ ಚಿಂತನೆ ನಡೆದಿದೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ರಾಜ್ಯ ವಿಭಾಗದ ಗುಣಮಟ್ಟ ಪರಿಶೀಲನಾ ಘಟಕದ ಕೋ ಆರ್ಡಿನೇಟರ್ ಡಾ.ಬೀನಮ್ಮ ಕುರೈನ್, ಡಾ.ವೆಂಕಟೇಶ್, ಸಾಗರ ತಾ. ಆರೋಗ್ಯಾಧಿಕಾರಿ ಡಾ.ಕೆ.ಪಿ.ಅಚ್ಚುತ್, ಸಿವಿಲ್
ಸರ್ಜನ್ ಡಾ.ಬಿ.ಜಿ.ಸಂಗಮ್ ಇನ್ನಿತರರು ಹಾಜರಿದ್ದರು.