ಸಕ್ರೆಬೈಲ್ನಲ್ಲಿ ನಡೆಯಿತೇ ಆನೆಯ ಲಾಕಪ್ಡೆತ್?
ಶಿವಮೊಗ್ಗ: ಒಂದರ್ಥದಲ್ಲಿ ಹೇಳಬೇಕೆಂದರೆ ಇದು ಆನೆಯ ಲಾಕಪ್ಡೆತ್! ಸುಮಾರು 45 ವರ್ಷ ಹರೆಯದ ದಷ್ಟಪುಷ್ಟವಾಗಿದ್ದ ಕಾಡಾನೆ ಅರಣ್ಯ ಇಲಾಖೆ ಅಧಿಕಾರಿಗಳ ಮುತುವರ್ಜಿ ಇಲ್ಲದೇ ಇಹಲೋಕ ತ್ಯಜಿಸಿದೆ.
ರಾಜ್ಯದ ಪ್ರಮುಖ ಆನೆಗಳ ಪೈಕಿ ಅಭಿಮನ್ಯು ಪ್ರಮುಖ ಸ್ಥಾನ ಪಡೆಯುತ್ತದೆ. ಅಂತಹುದೇ ಗಂಭೀರ, ದಷ್ಟಪುಷ್ಟ ಚಹರೆ ಹೊಂದಿದ್ದ ಈ ಕಾಡಾನೆಯನ್ನು ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರಿಯೇ ಕಳೆದುಕೊಂಡಿದೆ.
ಉತ್ತರ ಕನ್ನಡ ಜಿಲ್ಲೆ ಜೋಯಿಡಾ ಬಳಿ ಇಬ್ಬರು ವ್ಯಕ್ತಿಗಳು ಆನೆ ದಾಳಿಯಿಂದ ಸಾವಿಗೀಡಾದರೆಂದು ಆನೆ ಹಿಡಿಯುವ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಸಿಕ್ಕಿದ್ದು 45 ವರ್ಷದ ಗಂಡು ಆನೆ. ಅದನ್ನು ಪಳಗಿಸುವ ಉದ್ದೇಶದಿಂದ ಸಕ್ರೆಬೈಲ್ ಆನೆ ಬಿಡಾರಕ್ಕೆ ತರಲಾಯಿತು.
ಅಲ್ಲಿ ನಿರ್ಮಿಸಲಾದ ಕ್ರಾಲ್ (ಪಳಗಿಸುವ ಸೆಲ್) ಒಳಗೆ ಕಾಡಾನೆಯನ್ನು ಹಾಕಿ ಪಳಗಿಸಲಾಗುತ್ತಿತ್ತು. ಈ ಮಧ್ಯೆ ಆನೆಯ ಕಿವಿ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಕಾರ್ಯಾಚರಣೆಗೆ ಬಳಸಲಾದ ಬಿಡಾರದ ಆನೆಗಳ ತಿವಿತದಿಂದ ಕಾಡಾನೆ ಗಾಯಗೊಂಡಿತ್ತು, ಸಾಕಷ್ಟು ರಕ್ತಸ್ರಾವವಾಗಿತ್ತು. ಆದರೆ, ಗಾಯಾಳುಗೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಮಾತನ್ನು ಹಿರಿಯ ಅಧಿಕಾರಿಗಳು ಅರೆಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ.
ಏಕೆಂದರೆ, ಸಕ್ರೆಬೈಲು ಆನೆ ಬಿಡಾರದಲ್ಲಿ 33 ಕಡೆ ಗಂಭೀರಗೊಂಡಿದ್ದ ವೃದ್ಧ ಕಾವೇರಿ ಆನೆಗೆ ಚಿಕಿತ್ಸೆ ಕೊಡಿಸಿ ಬಹುಕಾಲ ಉಳಿಸಿಕೊಂಡ ಉದಾಹರಣೆ ಇದೆ. ಹೀಗಿರುವಾಗ ಸಣ್ಣದೊಂದು ಗಾಯಕ್ಕೆ ಸರಿಯಾದ ಉಪಚಾರ ನೀಡುವಲ್ಲಿ ಉದಾಸೀನ ಮಾಡಲಾಯಿತೇ ಎಂಬುದು ಈಗಿರುವ ಪ್ರಶ್ನೆ.
ಕಾಯಂ ವೈದ್ಯರಿಲ್ಲ: ಹಾಲಿ 21 ಆನೆಗಳಿರುವ ಸಕ್ರೆಬೈಲು ಆನೆ ಬಿಡಾರದಲ್ಲಿ ವೈದ್ಯರಾಗಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಡಾ. ಸುಂಕದ್ ಅವರು ಡಿಸೆಂಬರ್ನಲ್ಲಿ ವರ್ಗಾವಣೆಯಾದ ಬಳಿಕ ಖಾಯಂ ಸೇವೆಗೆ ಇಲ್ಲಿಗೆ ವೈದ್ಯರಿಲ್ಲ. ಸುಮಾರು 6-7 ತಿಂಗಳಿಂದ ಹೆಚ್ಚುವರಿ ನಿಯೋಜನೆ ಮೇರೆಗೆ ಒಬ್ಬ ವೈದ್ಯರನ್ನು ಇಲ್ಲಿಗೆ ಬಳಸಿಕೊಳ್ಳಲಾಗುತ್ತಿದೆ. ಅಗತ್ಯವಿದ್ದಾಗಲಷ್ಟೇ ವೈದ್ಯರು ಇಲ್ಲಿಗೆ ಬಂದು ಹೋಗುತ್ತಾರೆ. ಆನೆಯ ಬಗ್ಗೆ ವೈಯಕ್ತಿಕ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ. ಈ ಬೆಳವಣಿಗೆ ಕೂಡ ಆನೆಯ ಸಾವಿಗೆ ಒಂದು ಕಾರಣವಿರಬಹುದೆಂದು ವಿಶ್ಲೇಷಿಸಲಾಗುತ್ತಿದೆ.
ಸಲಹೆ ಕೇಳಲಿಲ್ಲವೇ...
ಆನೆ ಬಿಡಾರಕ್ಕೆ ಬಂದ ಕಾಡಾನೆಯನ್ನು ಪಳಗಿಸುವ ಬದಲು ಬಂಡೀಪುರ ಕಾಡಿಗೆ ಬಿಡುವುದೇ ಸೂಕ್ತ ಎಂದು ಸ್ಥಳೀಯ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಸೂಚ್ಯವಾಗಿ ತಿಳಿಸಿದ್ದರು ಎಂಬ ಮಾಹಿತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ. ವಿಶೇಷವಾಗಿ ಈ ಆನೆಯನ್ನು ಪಳಗಿಸುವುದು ಬೇಡ ಎಂಬುದು ಸ್ಥಳೀಯವಾಗಿ ಅಭಿಪ್ರಾಯ ಕೇಳಿಬಂದಿತ್ತು.
ಹಾಗೊಂದು ವೇಳೆ ಸಲಹೆ ಸ್ವೀಕರಿಸಿದ್ದರೆ ಈ ಆನೆ ಬದುಕುತ್ತಿತ್ತು, ಈ ಸಾವು ನ್ಯಾಯವಲ್ಲ ಎಂದೇ ಸ್ಥಳೀಯ ಸಿಬ್ಬಂದಿ ಹೇಳುತ್ತಾರೆ.
ಇಷ್ಟೆಲ್ಲ ಬೆಳವಣಿಗೆ ಮಧ್ಯೆ ಸ್ಥಳೀಯ ಸಕ್ರೆಬೈಲಿನ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಪ್ರಸಂಗ ಸಹ ಸೋಮವಾರ ಮುಂಜಾನೆ ನಡೆದಿದೆ. ಆನೆಯ ಬಗ್ಗೆ ಸರಿಯಾಗಿ ಕಾಳಜಿ ವಹಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಆನೆಯ ಬಗ್ಗೆ ಇನ್ನೂ ಅಚ್ಚರಿ ಸಂಗತಿ ಎಂದರೆ, ಇಬ್ಬರು ವ್ಯಕ್ತಿಗಳನ್ನು ಇದೇ ಆನೆ ಸಾಯಿಸಿತೆಂಬುದಕ್ಕೆ ಯಾವುದೇ ಪುರಾವೆ ಅರಣ್ಯ ಇಲಾಖೆ ಬಳಿ ಇಲ್ಲ. ನೋಡಿದವರೂ ಇಲ್ಲ.
- ಶ್ರೀಕಾಂತ ಭಟ್