ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಗೆ ಕಾಂಗ್ರೆಸ್ ಖಂಡನೆ
ಸಾಗರ: ರೈಲು ಪ್ರಯಾಣ ದರ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಸಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ತೀ. ನ. ಶ್ರೀನಿವಾಸ್ ಮಾತನಾಡಿ, ಒಳ್ಳೆಯ ದಿನಗಳು ಬರಲಿವೆ ಎನ್ನುತ್ತ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಈಗ ರೈಲ್ವೆ ದರ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಸಿ ಬಡವರ ಬದುಕಿನ ಮೇಲೆ ಬರೆ ಎಳೆದಿದೆ ಎಂದರು.
ನಗರಸಭೆ ಅಧ್ಯಕ್ಷೆ ಎನ್. ಲಲಿತಮ್ಮ ಮಾತನಾಡಿ, ಆಡಳಿತದ ಚುಕ್ಕಾಣಿ ಹಿಡಿದ ಒಂದೆ ತಿಂಗಳಿನಲ್ಲಿ ಆರ್ಥಿಕ ಸ್ಥಿತಿ ತೀವ್ರ ಕುಸಿತ ಕಂಡಿರುವುದು ಬಿಜೆಪಿ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಕ್ಬೂಲ್ ಅಹ್ಮದ್, ತಾಪಂ ಅಧ್ಯಕ್ಷ ಹರೀಶ್ ಗಂಟೆ, ಸದಸ್ಯ ಪ್ರಕಾಶ ಲ್ಯಾವಿಗೆರೆ, ನಗರಸಭೆ ಸದಸ್ಯರಾದ ರವಿ ಜಂಬಗಾರು, ಸುಂದರಸಿಂಗ್, ಎನ್.ಶ್ರೀನಾಥ್, ಗಣಾಧೀಶ್, ಯುವ ಘಟಕದ ಭೀಮನೇರಿ ಆನಂದ್, ಮಹಾಬಲ ಕೌತಿ, ಪ್ರಮುಖರಾದ ಹಮೀದ್, ಕರುಣಾಕರ, ಮಹ್ಮದ್ ಜಿಕ್ರಿಯಾ, ಮೈಕಲ್ ಡಿಸೋಜ, ಸಿದ್ದಪ್ಪ ಟಿ., ನಾಗರಾಜ ಗುಡ್ಡೆಮನೆ, ಸುಧಾಕರ ಇದ್ದರು.
ಹಕ್ಕುಪತ್ರ ನೀಡಲು ಬಿಜೆಪಿ ಪ್ರಯತ್ನಿಸಲಿ
ಸಾಗರ: ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಅರಣ್ಯಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ಜತೆಗೆ ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವವರಿಗೆ ಹಕ್ಕುಪತ್ರ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಿ.ಎಸ್.ಯಡಿಯೂರಪ್ಪ ನುಡಿದಂತೆ ನಡೆದುಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ತೀ.ನ.ಶ್ರೀನಿವಾಸ್ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು, ಅರಣ್ಯಹಕ್ಕು ಭೂಮಿ ಸಾಗುವಳಿಗೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ 1ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ಬಾಕಿಯಿದೆ. ಶಿಕಾರಿಪುರ ಕ್ಷೇತ್ರದಲ್ಲಿಯೆ ಸುಮಾರು 20 ಸಾವಿರ ಅರ್ಜಿಗಳು ಬಾಕಿಯಿದ್ದು ಅವರೆಲ್ಲ ಒಕ್ಕಲೆಬ್ಬಿಸುವ ಭೀತಿ ಎದುರಿಸುತ್ತಿದ್ದಾರೆ ಎಂದರು.
ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿಗಾಗಿ ಶಿವಮೊಗ್ಗ ಜಿಲ್ಲೆಗೆ 280 ಕೋಟಿ ರೂ. ಅನುದಾನ ಘೋಷಣೆಯಾಗಿತ್ತು. ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಹಣ ಬಿಡುಗಡೆಯಾಗಿರಲಿಲ್ಲ. ಯಡಿಯೂರಪ್ಪನವರು ಕೇಂದ್ರದ ಮೇಲೆ ಒತ್ತಡ ಹೇರಿ ಜಿಲ್ಲೆಗೆ ಬರಬೇಕಾಗಿರುವ 280 ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಯತ್ನ ನಡೆಸಬೇಕು ಎಂದು ಒತ್ತಾಯಿಸಿದರು. ನಗರಸಭೆ ಸದಸ್ಯರಾದ ಸುಂದರಸಿಂಗ್, ಎನ್.ಶ್ರೀನಾಥ್, ಗಣಾಧೀಶ್ ಇದ್ದರು.
ರೈಲು ಪ್ರಯಾಣ ದರ ಏರಿಕೆ ಬೇಡ: ಎಚ್ಎಂಸಿ
ಶಿವಮೊಗ್ಗ: ಕೇಂದ್ರ ಸರ್ಕಾರ ಜನಸಾಮಾನ್ಯರು ಓಡಾಡುವ ರೈಲ್ವೆ ಪ್ರಯಾಣ ದರವನ್ನು ಹೆಚ್ಚಳ ಮಾಡಿರುವುದು ಖಂಡನೀಯ. ಸರ್ಕಾರ ತನ್ನ ಈ ನಿಲವನ್ನು ತಕ್ಷಣ ಬದಲಿಸಿಬೇಕು. ಎ.ಸಿ. ಹಾಗೂ ಉನ್ನತ ದರ್ಜೆಯ ರೈಲು ಪ್ರಯಾಣ ದರ ಬೇಕಾದರೆ ಏರಿಕೆ ಮಾಡಿ. ಬಡವರ ದರ್ಜೆಯ ಪ್ರಯಾಣ ದರ ಏರಿಕೆ ಮಾಡಬೇಡಿ ಎಂದು ರೇಲ್ವೆ ಸಚಿವ ಸದಾನಂದಗೌಡರನ್ನು ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಕೋರಿದ್ದಾರೆ. ಬೆಂಗಳೂರು- ತಾಳಗುಪ್ಪ ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಿ ಹಾಗೂ ಶಿವಮೊಗ್ಗ- ಬೆಂಗಳೂರು ಮಾರ್ಗಕ್ಕೆ ಹೆಚ್ಚುವರಿ ರೈಲನ್ನು ನೀಡುವಂತೆ ರೇಲ್ವೆ ಸಚಿವರ ಮೇಲೆ ಒತ್ತಡ ಹೇರುವಂತೆ ಸಂಸದ ಯಡಿಯೂರಪ್ಪರನ್ನು ವಿನಂತಿಸಿದ್ದಾರೆ.