ರೈತರ ಪಾಲಿನ ನಿವೇಶನ ಹರಾಜಿಗಿಟ್ಟ ಕೆಎಚ್ಬಿ!
ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಜಾಗ ನೀಡಿದ ರೈತನಿಗೆ ನೀಡಬೇಕಾದ ನಿವೇಶನಗಳನ್ನು ಕೆಎಚ್ಬಿ ಸಾರ್ವಜನಿಕರಿಗೆ ಹರಾಜು ಮಾಡಲು ಹೊರಟಿದ್ದು, ಈ ಬೆಳವಣಿಗೆಗೆ ರೈತ ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಜೂ.27ರಂದು ಹರಾಜು ಪ್ರಕ್ರಿಯೆ ಕಾರ್ಯ ನಡೆಯಲಿದ್ದು, ಇದಕ್ಕೆ ತಡೆನೀಡುವಂತೆ ಈ ಭಾಗದ ರೈತರು ಜಿಲ್ಲಾಡಳಿತದ ಮೇಲೆ ಒತ್ತಡ ತಂದಿದ್ದಾರೆ. ಏಳು ವರ್ಷದ ಹಿಂದೆ ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿ ವಿಮಾನ ನಿಲ್ದಾಣಕ್ಕೆ ಗುರುತುಪಡಿಸಿದ ಜಾಗದ 120ನೇ ಸರ್ವೆ ನಂಬರ್ನಲ್ಲಿದ್ದ 302 ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು. ವಿಮಾನ ನಿಲ್ದಾಣ ಯೋಜನೆಯಿಂದ ಸಂತ್ರಸ್ತರಾದ ಕುಟುಂಬಗಳಿಗೆ 60-40 ನಿವೇಶನ ಹಾಗೂ ಭೂಮಿ ಬಾಬ್ತು ಪರಿಹಾರಧನ ನೀಡುವ ಒಡಂಬಡಿಕೆ ಸರ್ಕಾರ ರೈತರೊಂದಿಗೆ ಮಾಡಿಕೊಂಡಿತ್ತು. ಬಿ.ಎಸ್.ಯಡಿಯೂರಪ್ಪ ಅವರೇ ಈ ಒಡಂಬಡಿಕೆಯ ಸೂತ್ರಧಾರರಾಗಿದ್ದರು.
ನಂತರ ನಡೆದ ಬೆಳವಣಿಗೆಯಲ್ಲಿ ಸರ್ಕಾರ ಮಾತಿನಂತೆ ನಿವೇಶನ ಹಂಚಲು 2.5 ಕೋಟಿ ವೆಚ್ಚಮಾಡಿತು. 34 ಎಕರೆಯನ್ನೂ ನಿವೇಶನ ನೀಡಲು ಗುರುತಿಸಿತು. ಆದರೆ, ಕೆಲವು ರೈತರಿಗೆ ನಿವೇಶನಗಳನ್ನು ನೀಡಿದ್ದು, 200ಕ್ಕೂ ಹೆಚ್ಚು ರೈತರಿಗೆ ನಿವೇಶನ ನೀಡಲೇ ಇಲ್ಲ. ಒಡಂಬಡಿಕೆಯಂತೆ ಸರ್ಕಾರ ನಡೆದುಕೊಂಡಿಲ್ಲ. ಎಲ್ಲಾ ಸಂತ್ರಸ್ತರಿಗೂ ನಿವೇಶನ ನೀಡಲಾಗಿಲ್ಲ ಎಂಬುದು ಈ ಭಾಗದ ರೈತರ ವಾದವಾಗಿದೆ.
ಈ ಮಧ್ಯೆ ಜಿಲ್ಲಾಡಳಿತ ಅಲ್ಲಿ ಉಳಿಕೆಯಾದ ನಿವೇಶನಗಳನ್ನು ಹರಾಜು ನಡೆಸುವಂತೆ ಕರ್ನಾಟಕ ಗೃಹ ಮಂಡಳಿಗೆ ಸೂಚಿಸಿತು. ಜಿಲ್ಲಾಡಳಿತದ ಆದೇಶದಂತೆ ಗೃಹ ಮಂಡಳಿ ನಿವೇಶನಗಳ ಹರಾಜಿಗೆ ಮುಂದಾಯಿತು. ಈ ವಿಷಯ ತಿಳಿಯುತ್ತಿದ್ದಂತೆ ರೈತರು ನ್ಯಾಯಾಲಯದ ಮೆಟ್ಟಿಲೇರಿ ಹರಾಜು ಪ್ರಕ್ರಿಯೆ ನಡೆಸದಂತೆ ತಡೆಯಾಜ್ಞೆ ತಂದರು. ಆದರೂ, ಈಗ ಮತ್ತೊಮ್ಮೆ ಹರಾಜು ಪ್ರಕ್ರಿಯೆಗೆ ತಯಾರಿ ನಡೆದಿದ್ದು, ಜೂ.27ರಂದು ಹರಾಜು ನಡೆಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರೈತ ಮುಖಂಡರು ಬುಧವಾರ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಹರಾಜು ಪ್ರಕ್ರಿಯೆಗೆ ತಡೆ ಹಿಡಿಯುವಂತೆ ಹಾಗೂ ಸಂತ್ರಸ್ತ ರೈತರಿಗೆ ನಿವೇಶನ ಹಂಚಿಕೆ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಸರ್ಕಾರ ಒಡಂಬಡಿಕೆ ಮಾಡಿಕೊಂಡಿದ್ದರೆ ಅದರಂತೆ ನಿವೇಶನ ಹಂಚುವುದು ನಮ್ಮ ಕರ್ತವ್ಯ. ಆದರೆ, ಸರ್ಕಾರದ ಆದೇಶಗಳು, ಒಡಂಬಡಿಕೆಯ ಬಗ್ಗೆ ಪುನರಾವಲೋಕನ ಮಾಡಿ ಸೂಕ್ತ ಕ್ರಮಕೈಗೊಳ್ಳುವುದಾಗಿ ರೈತರಿಗೆ ಭರವಸೆ ನೀಡಿದರು.
ಸರ್ಕಾರ ರೈತರೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತೆ ಸಂತ್ರಸ್ತ ರೈತರಿಗೆ ನಿವೇಶನ ನೀಡಬೇಕು. ಆದರೆ, ಜಿಲ್ಲಾಡಳಿತ ಯಾರೆಲ್ಲಾ ವಸತಿ ಕಳೆದುಕೊಂಡಿದ್ದಾರೋ ಅವರಿಗೆ ಮಾತ್ರ ನಿವೇಶನಗಳನ್ನು ನೀಡಿ ಉಳಿದವರಿಗೆ ನೀಡಿಲ್ಲ. ಈ ಮೂಲಕ ಸಂತ್ರಸ್ತ ಪದಕ್ಕೆ ಪ್ರತ್ಯೇಕ ವ್ಯಾಖ್ಯಾನ ಹುಡುಕಿದೆ. ಇದು ಸರಿಯಲ್ಲ ಎಂದು ರೈತರ ನಿಯೋಗದಲ್ಲಿದ್ದ ಮಾಜಿ ಶಾಸಕ ಕರಿಯಣ್ಣ ಪ್ರತಿಪಾದಿಸಿದರು.
ಈ ಬಗ್ಗೆ ಕೂಲಂಕಷವಾಗಿ ಗಮನಿಸಿ ಕ್ರಮಕೈಗೊಳ್ಳಲಾಗುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಸಿ ತಿಳಿಸಿದರು.
ರೈತರಾದ ಕೃಷ್ಣಪ್ಪ ಮಾತನಾಡಿ, ವಿಮಾನ ನಿಲ್ದಾಣ ಕಾಮಗಾರಿಗೆ ಸೋಗಾನೆ ಗ್ರಾಮದಲ್ಲಿ 302 ಕುಟುಂಬಗಳನ್ನು ಬೇರೆ ಕಡೆ ಸ್ಥಳಾಂತರಿಸಿದರು. ಈ ಜಾಗದಲ್ಲಿ ರೈತರು ಬತ್ತ, ಜೋಳ ಬೆಳೆದು ಜೀವನ ಸಾಗಿಸುತ್ತಿದ್ದರು. ಆದರೆ, ಇಂದು ವಿಮಾನ ನಿಲ್ದಾಣವೂ ಪೂರ್ಣಗೊಳ್ಳಲಿಲ್ಲ, ರೈತರಿಗೆ ಭೂಮಿಯೂ ಇಲ್ಲದಂತಾಯಿತು. ಇಲ್ಲಿನ ರೈತರು ಶಿವಮೊಗ್ಗದಲ್ಲಿ ಕೂಲಿನಾಲಿ ಮಾಡಿ ಜೀವನ ನಡೆಸುತ್ತಿದ್ದಾರೆ ಎಂದರು.
ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ನಿವೇಶನಕೊಡಲೆಂದೇ 34 ಎಕರೆ ಜಮೀನು ಸ್ವಾಧೀನಕ್ಕೆ ಪಡೆಯಲಾಯಿತು. ಆದರೆ, ಇಂದು ಎಲ್ಲಾ 302 ಸಂತ್ರಸ್ತ ಕುಟುಂಬಗಳಿಗೆ ನಿವೇಶನ ಕೊಡದೇ ಹರಾಜು ಹಾಕಲು ಹೊರಟಿರುವುದು ಸರಿಯಲ್ಲ ಎಂದರು.