ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ತಾಲೂಕು ಸಾಹಿತ್ಯ ಸಮ್ಮೇಳನ 29ರಿಂದ

Rashmi Kasaragodu
Updated On : 26 Jun 2014, 11:20 am

ಶಿವಮೊಗ್ಗ: ಶಿವಮೊಗ್ಗ ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ಜೂ. 29ರಂದು ಹೊಸಹಳ್ಳಿಯ ಗಮಕ ಭವನದಲ್ಲಿ ನಡೆಯಲಿದ್ದು, ಅನುವಾದ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಡಿ.ಎನ್. ಶ್ರೀನಾಥ್ ಸಮ್ಮೇಳನಾಧ್ಯಕ್ಷರಾಗಿದ್ದಾರೆ.
ವೈಚಾರಿಕ ಗೋಷ್ಠಿಗಳು, ಗಮಕ, ಅಭಿವೃದ್ಧಿಪರ ಚಿಂತನೆಗಳು, ಸಂಗೀತ, ಸೃಜನಶೀಲ ಸಾಹಿತ್ಯ ಹಾಗೂ ಉದಯೋನ್ಮುಖ ಯುವ ಸಾಹಿತ್ಯಾಸಕ್ತರನ್ನು ಗಮನದಲ್ಲಿಟ್ಟುಕೊಂಡು ಈ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಶಿವಮೊಗ್ಗ ತಾಲೂಕು ಘಟಕದ ಅಧ್ಯಕ್ಷೆ ಶೀಲಾ ಸುರೇಶ್ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ಸಿದ್ಧತೆ ಬಗ್ಗೆ ವಿವರಿಸಿದರು.
ಅಂದು ಬೆಳಿಗ್ಗೆ 10.30ಕ್ಕೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಸಮ್ಮೇಳನವನ್ನು ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಪುಸ್ತಕ ಪ್ರದರ್ಶನ ಉದ್ಘಾಟಿಸುವರು.
ಬೆಳಿಗ್ಗೆ 12.15ಕ್ಕೆ ನಡೆಯುವ ಮೊದಲ ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಸಾಧನೆ ಬಗ್ಗೆ ಚರ್ಚೆ ನಡೆಯಲಿದ್ದು, ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 2ರಿಂದ 3ರವರೆಗೆ ಗಮಕ ಸಂಕ್ರಮ - ಗಮಕ ನಡೆದು ಬಂದ ದಾರಿ ಎಂಬ ವಿಷಯದ ಕುರಿತು ಎರಡನೇ ಗೋಷ್ಠಿ ನಡೆಯಲಿದೆ. ಗಮಕ ಸಂಪದ ಸಂಪಾದಕ ರಾಜಾರಾಮಮೂರ್ತಿ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 3.15ರಿಂದ ಕಾವ್ಯ ಕಲರವ ಕವಿಗೋಷ್ಠಿ ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರೊ. ಸತ್ಯನಾರಾಯಣ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನಂತರ ಛಂದೋಬದ್ಧ ಕಾವ್ಯರಚನೆ ಕುರಿತು ಚರ್ಚೆ ನಡೆಯಲಿದೆ. ಸಂಜೆ 4.30ರಿಂದ 5.30ರವರೆಗೆ ಕೃಷಿ - ಈ ಹೊತ್ತಿನ ಸವಾಲುಗಳು ಎಂಬ ವಿಷಯದ ಕುರಿತು ನಡೆಯಲಿರುವ ಗೋಷ್ಠಿಯಲ್ಲಿ ಕೃಷಿ ಸಂಸ್ಕೃತಿ ಚಿಂತಕ ಮಂಜುನಾಥ ದತ್ತ ವಿಶೇಷ ಉಪನ್ಯಾಸ ನೀಡುವರು.
ಸಂಜೆ 5.30ಕ್ಕೆ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಸಮಾರೋಪ ಭಾಷಣ ಮಾಡುವರು. ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಶಾರದಾ ಪೂರ್ಯಾನಾಯ್ಕ, ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಗೌರವಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಆರ್. ರತ್ನಯ್ಯ, ಶಿವಮೂರ್ತಿ, ಮಧುಸೂದನ ಐತಾಳ್, ಸಂಪತ್‌ಕುಮಾರ್, ಜಯಣ್ಣ, ಅಂಬಿಕಾ ಮತ್ತಿತರರಿದ್ದರು.



ಅನುವಾದ ಸಾಧಕ


ತಮ್ಮ 18ನೇ ವಯಸ್ಸಿನಿಂದಲೇ ಅನುವಾದ ಕ್ಷೇತ್ರಕ್ಕೆ ಕಾಲಿಟ್ಟ ಡಿ.ಎನ್. ಶ್ರೀನಾಥ್ ಅವರು ಹಿಂದಿ ಸಾಹಿತ್ಯ ಕ್ಷೇತ್ರದ ಮೇರು ಕೃತಿಗಳನ್ನು ಸಮರ್ಥವಾಗಿ ಅನುವಾದಿಸಿ ಕನ್ನಡ ನಾಡಿಗೆ ನೀಡಿದ್ದಾರೆ. ಅಲ್ಲದೇ, ಕನ್ನಡ ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದಾರೆ. ಈ ಕೃತಿಗಳ ಸಂಖ್ಯೆಯೇ 65. ಕನ್ನಡದ ಐದು ನಾಟಕಗಳು ಈಗ ಪ್ರಕಟಣೆ ಹಂತದಲ್ಲಿವೆ. ಇವರು ಅನುವಾದಿಸಿದ -ಮಾಯಾಮೃಗ ಔರ್ ಅನ್ಯ ಕಹಾನಿಯಾ- ಮಂಗಳೂರು ವಿವಿಗೆ ಪಠ್ಯವಾಗಿತ್ತು. ಡಿ.ಎನ್. ಶ್ರೀನಾಥ್ ಅವರು, ಅಹಿಂದಾ ಭಾಷಾ ಲೇಖಕರ ಪ್ರಶಸ್ತಿ, ಗೊರೂರು ಪ್ರಶಸ್ತಿ, ಭೂಪಾಲದಲ್ಲಿ ಲೇಟ್ ಹಜಾರಿಲಾಲ್ ಜೈನ್ ಸ್ಮೃತಿ ಸಮ್ಮಾನ್, ಭಾರತ ಸರ್ಕಾರದ ಅನುವಾದ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅನುವಾದ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ, ಕಮಲಾ ಗೋಯಂಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. 2012ರಲ್ಲಿ ಶಿವಮೊಗ್ಗದಲ್ಲಿ ಜರುಗಿದ ಅಖಿಲ ಕರ್ನಾಟಕ ಪ್ರಥಮ ಹಿಂದಿ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement