ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಸ 'ಶಿಕಾರಿ'ಗಿಲ್ಲ ಕಿರಿಕಿರಿ

Rashmi Kasaragodu
Updated On : 27 Jun 2014, 11:22 am

ಶಿಕಾರಿಪುರ: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಿತ್ಯ ಕಸದ ಸಮಸ್ಯೆ ಬಿಗಡಾಯಿಸುತ್ತಿದ್ದು, ಪರಿಹಾರ ಕಲ್ಪಿಸುವಲ್ಲಿ ಸರ್ಕಾರದ ಕ್ರಮದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವ ಈ ಸಂದರ್ಭದಲ್ಲಿ ಶಿಕಾರಿಪುರ ಪುರಸಭೆ ನಿತ್ಯ ಸಂಗ್ರಹವಾಗುತ್ತಿರುವ ಹಲವಾರು ಟನ್ ಕಸವನ್ನು ವೈಜ್ಞಾನಿಕ ವಿಲೇವಾರಿಗೆ ಕೆಲ ವರ್ಷದಿಂದ ಕ್ರಮ ಕೈಗೊಂಡು ಸಂಪೂರ್ಣ ಸ್ವಚ್ಚತೆ ಜತೆಗೆ ಕಸದ ವಿಲೇವಾರಿಯನ್ನು ಸಮಸ್ಯೆಯಾಗಿಸದೆ ತನ್ನ ಕರ್ತವ್ಯದ ಬಗ್ಗೆ ಅಪಸ್ವರ ಕೇಳದಂತೆ ಉತ್ಸಾಹಿ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ.
ಆದರೆ ಕಸ ಸಂಗ್ರಹಣಾ ಘಟಕದಲ್ಲಿ ಶೇಖರಣೆಯಾಗಿರುವ ಹಳೆಯ ತ್ಯಾಜ್ಯ ವಿಲೇವಾರಿ ಇನ್ನೂ ಆಗಿಲ್ಲ. ಇದನ್ನು 6 ತಿಂಗಳಲ್ಲಿ ವೈಜ್ಞಾನಿಕವಾಗಿ ಪೂರ್ಣ ವಿಲೇವಾರಿಗೊಳಿಸುವ ವಿಶ್ವಾಸವನ್ನು ಮುಖ್ಯಾಧಿಕಾರಿ ಮನೋಹರ್ ವ್ಯಕ್ತಪಡಿಸಿದರೂ ಅವೈಜ್ಞಾನಿಕವಾಗಿರುವ ಒಳಚರಂಡಿ ಸಂರ್ಪಕದ ಸಮಸ್ಯೆ ಬಗ್ಗೆ ಕುಟ್ರಹಳ್ಳಿ ಗ್ರಾಮದ ಬಳಿಯಿರುವ ಸರ್ಕಾರಿ ಜಾಗದಲ್ಲಿ ವಿಲೇವಾರಿ ಘಟಕ ಸ್ಥಾಪನೆಗೆ ಜಿಲ್ಲಾಧಿಕಾರಿಸ್ಥಳ ಪರಿಶೀಲಿಸಿದ್ದು ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಉಸ್ತುವಾರಿ: ಕಸದ ಸಮಸ್ಯೆ ಎಲ್ಲೆಡೆ ಬಿಗಡಾಯಿಸುತ್ತಿದ್ದು, ಭವಿಷ್ಯದಲ್ಲಿ ಬಹು ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ ಎಂಬ ಎಚ್ಚರಿಕೆಯ ಅಂಶವನ್ನು ಗಮನಿಸಿ ಶಿಕಾರಿಪುರ ಪುರಸಭೆ ಮುಖ್ಯಾಧಿಕಾರಿ ಮನೋಹರ್ ನೇತೃತ್ವದ ಅಧಿಕಾರಿಗಳ ತಂಡ ಕೆಲ ವರ್ಷದಿಂದ ಪಟ್ಟಣದಲ್ಲಿ ನಿತ್ಯ ಸಂಗ್ರಹವಾಗುತ್ತಿರುವ ಮನೆಯ ಕಸವನ್ನು 11 ತಳ್ಳುಗಾಡಿ ಹಾಗೂ 2 ಆಟೋ ಟಿಪ್ಪರ್ ಮೂಲಕ ಸಂಗ್ರಹಿಸಿ ಪಟ್ಟಣದ ಕೃಷ್ಣರಾಜೇಂದ್ರ ಪಾರ್ಕ್, ಚನ್ನಕೇಶವ ನಗರ, ನೀರು ಸಂಸ್ಕರಣ ಘಟಕ ಹಾಗೂ ಆಶ್ರಯ ಬಡಾವಣೆಯಲ್ಲಿ ಪ್ರತ್ಯೇಕಿಸಿ ಸ್ಥಳದಲ್ಲಿಯೇ ಗೊಬ್ಬರ ತಯಾರಿಸಿ ಬಳಸಲಾಗುತ್ತಿದೆ.
ಪ್ರತಿ ಸಮುದಾಯ ಭವನದಲ್ಲಿ ರು. 300 ಮುಂಗಡ ಪಡೆದು ಕಬ್ಬಿಣದ ಕಂಟೈನರ್ ಮೂಲಕ ಕಸ ಸಂಗ್ರಹಿಸಲಾಗುತ್ತಿದ್ದು ಕಸದ ಸೂಕ್ತ ವಿಲೇವಾರಿಗಾಗಿ ತಲಾ ರು. 25 ಲಕ್ಷ ವೆಚ್ಚದ ಜೆಸಿಬಿ ಹಾಗೂ ಚರಂಡಿ ಸ್ವಚ್ಚತೆಗೆ ಯಂತ್ರ ಶೀಘ್ರ ಆಗಮಿಸಲಿದೆ.
ನಿತ್ಯ ಬೆಳಿಗ್ಗೆ ಪೌರ ಕಾರ್ಮಿಕರ ಜತೆಗೆ ಖುದ್ದು ಮುಖ್ಯಾಧಿಕಾರಿ ಹಾಗೂ ಆರೋಗ್ಯ ನಿರೀಕ್ಷಕ ಹಿರೇಮಠ್ ಹಾಗೂ ನವಾಜ್ ಮೇಲುಸ್ತುವಾರಿ ನಡೆಸಿ ಸ್ಚಚ್ಚತೆಗೆ ನೀಡಿದ ಹೆಚ್ಚಿನ ಗಮನದಿಂದಾಗಿ ಕಳೆದ 3 ವರ್ಷದಿಂದ ಡೆಂಗ್ಯೂ, ಚಿಕೂನ್ಗುನ್ಯಾ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗದ ಪ್ರಕರಣ ವರದಿಯಾಗಿಲ್ಲ.
ಕಳೆದ ಹಲವು ವರ್ಷದಿಂದ ರಸ್ತೆ ಹಾಗೂ ಚರಂಡಿ ಸ್ವಚ್ಚತೆಯ ಮೂಲಕ ಸಂಗ್ರಹವಾಗಿರುವ ಕಸ ಪಟ್ಟಣದ ಹೊರವಲಯ ಹುಚ್ಚೂರಾಯಸ್ವಾಮಿ ಕೆರೆಯ ಬಳಿಯ 13 ಎಕರೆ ವಿಶಾಲ ಜಾಗದಲ್ಲಿ ಬಿಸಾಡಲಾಗುತ್ತಿದೆ.
ಇದರಿಂದ ಸಮೀಪದ ಬೇಗೂರು, ಬಗನಕಟ್ಟೆ ಮತ್ತಿತರ ಗ್ರಾಮಸ್ಥರು ಪರಿಸರ ಮಾಲಿನ್ಯದ ಜತೆಗೆ ನಾಯಿಗಳ ಹಾವಳಿಯಿಂದಾಗಿ ಸತ್ತ ಪ್ರಾಣಿಯ ದೇಹ ರಸ್ತೆ ಸೇರುತ್ತಿರುವ ಬಗೆಗಿನ ದೂರಿಗೆ ಈಗಾಗಲೇ ವಾರ್ಷಿಕ ರು. 5 ಲಕ್ಷ ವೆಚ್ಚದಲ್ಲಿ ಪರಿಸರ ಸ್ನೇಹಿ ಸೂಕ್ಷ್ಣಾಣು ಜೀವಿ ಸಾವಯುವ ರಾಸಾಯನಿಕ ಆನ್ಬ್ಕ್ಟ್ ಉಪಯೋಗಿಸಿ ನೆಲದಡಿಯಲ್ಲಿಯೇ ಗೊಬ್ಬರ ತಯಾರಿಕೆಗೆ ಗುತ್ತಿಗೆ ನೀಡಲಾಗಿದೆ ಎಂದು ಮುಖ್ಯಾಧಿಕಾರಿ ಮನೋಹರ್ ತಿಳಿಸಿದ್ದಾರೆ.
ಕಸ ಸಂಗ್ರಹಣ ಘಟಕ:  ಇದರೊಂದಿಗೆ 13 ನೇ ಹಣಕಾಸಿನ ಯೋಜನೆಯಡಿಯಲ್ಲಿ ರು. 27 ಲಕ್ಷ ವೆಚ್ಚದಲ್ಲಿ ಹೈಡೆನ್ಸಿಟಿ ಪಾಲಿ ಎಥನಾಲ್ ಯೋಜನೆ ಮೂಲಕ ಕೊಳೆಯದ ಕಸದ ವಿಲೇವಾರಿಗೆ ಟೆಂಡರ್ ನೀಡಲಾಗಿದೆ ಎಂದೂ ಹೇಳಿದ್ದಾರೆ.
ಹೊರವಲಯದ ಕಸ ಸಂಗ್ರಹಣ ಘಟಕ ಈಗಾಗಲೇ ಸಂಪೂರ್ಣ ಕಾಂಪೌಂಡ್, ನೀರು, ವಿದ್ಯುತ್, ಕಾವಲುಗಾರ ಕೊಠಡಿಯಿಂದ ಸುಸಜ್ಜಿತವಾಗಿ ಇದೀಗ ನೂತನವಾಗಿ ರು. 5 ಲಕ್ಷ ವೆಚ್ಚದಲ್ಲಿ ಬಯೋ ಮೆಥನೈಜೇಶನ್ ಗ್ಯಾಸ್ ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದ್ದು ಹೋಟೆಲ್,ಮದುವೆ ಮನೆ ಮತ್ತಿತರ ಆಹಾರ ತ್ಯಾಜ್ಯ ಉತ್ಪನ್ನಗಳನ್ನು ಗ್ಯಾಸ್ ಆಗಿ ಪರಿವರ್ತಿಸಿ ಉಪಯೋಗಿಸುವ ಯೋಜನೆ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಲಾಗಿದೆ ಎಂದು ವಿವರಿಸಿದರು.
ಮಲಹೊರುವ ಪದ್ಧತಿ ನಿಷೇಧದಿಂದ ಕನಿಷ್ಠ ದರದಲ್ಲಿ ಯಂತ್ರದ ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ ಎಂದು ಆರೋಗ್ಯ ನಿರೀಕ್ಷಕರ ಎಂ.ವಿ. ಹಿರೇಮಠ ಹೇಳಿದ್ದಾರೆ.
ನಿತ್ಯ ಮನೆ ಸಂಗ್ರಹದ ಕಸವನ್ನು ಬೇರ್ಪಡಿಸಿ 4 ವಿಕೇಂದ್ರೀಕರಣ ಘಟಕದಲ್ಲಿ ಕಳೆದ 3 ವರ್ಷದಿಂದ ಗೊಬ್ಬರ ಖರೀದಿಸದೆ ತರಕಾರಿ ಬೆಳೆಯಲಾಗುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement