ಕಸ ವಿಲೇವಾರಿ ಸಮಸ್ಯೆ ಅಷ್ಟೊಂದಿಲ್ಲ...
ಶಿರಾಳಕೊಪ್ಪ: ಕಳೆದ ನಾಲ್ಕೈದು ವರ್ಷದಿಂದ ಕಸ ವಿಲೇವಾರಿ ಸಮಸ್ಯೆ ಸಾಕಷ್ಟು ಬಗೆಹರಿದಿದೆ. ಶೂನ್ಯ ಕಸ ನಿರ್ವಹಣೆಯ ಕಲ್ಪನೆಯನ್ನು ಅನುಷ್ಠಾನಗೊಳಿಸಲು ಪಟ್ಟಣ ಪಂಚಾಯ್ತಿ ಯತ್ನಿಸುತ್ತಿದೆ. ತ್ಯಾಜ್ಯ ವಿಲೇವಾರಿ ಘಟಕವಿದೆ.
ಆದರೆ...
ಪಟ್ಟಣದಲ್ಲಿ ಕಾಲುವೆ ನಿರ್ಮಾಣ ಮಾಡುವಾಗ ಗುತ್ತಿಗೆದಾರರು ಕಾಮಗಾರಿ ಲೋಪದಿಂದ ಸಾಕಷ್ಟು ಕಡೆ ನೀರು ನಿಲ್ಲುತ್ತಿದೆ. ಪಟ್ಟಣದ ಹೃದಯ ಭಾಗದಲ್ಲಿಯೇ ಈ ಸಮಸ್ಯೆ ಇದೆ. ಇಲ್ಲಿ ನೀರು ಸರಾಗವಾಗಿ ಹೋಗುವಂತಾದರೆ ಪಟ್ಟಣದಲ್ಲಿ ಕಸ ನಿರ್ವಹಣೆ ಇನ್ನಷ್ಟು ಸರಾಗವಾಗುತ್ತದೆ.
ಪಪಂನಿಂದ ಕಸ ವಿಲೇವಾರಿ ಆಗುತ್ತಿದ್ದರೂ ಪಟ್ಟಣದ ಬಸ್ ನಿಲ್ದಾಣ ಮತ್ತು ಸುತ್ತಲಿರುವ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿರುವವರು ಕಸವನ್ನು ಹೊರಗೆ ಬೀಸಾಕುವ ಅಭ್ಯಾಸ ಇನ್ನೂ ಇಟ್ಟುಕೊಂಡಿದ್ದಾರೆ.
ಆದರೆ ಪಟ್ಟಣಕ್ಕೆ ಬಂದವರಿಗೆ ಮೊದಲು ದರ್ಶನವಾಗುವುದು ಮುಖ್ಯ ರಸ್ತೆ. ಇಲ್ಲಿ ಯಾವುದೇ ಕಾಲುವೆಗಳನ್ನು ಮಾಡದ್ದರಿಂದ ಕೊಚ್ಚೆ ಹಾಗೆ ಕಾಣುತ್ತದೆ. ರಸ್ತೆ ಅಗಲೀಕರಣ ಸ್ಥಗಿತವಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಕೆ-ಶಿಪ್ ಯೋಜನೆಯಡಿ ರಸ್ತೆ ಅಗಲೀಕರಣ ಮಾಡಿದ ಮೇಲೆ ಕಾಲುವೆ ನಿರ್ಮಿಸುವ ಉದ್ದೇಶವಿರುವುದರಿಂದ ಅಲ್ಲಿಯವರೆಗೂ ಈ ಸಮಸ್ಯೆ ಬಗೆಹರಿಯದು.
ಪರವಾಗಿಲ್ಲ: ಕಳೆದ 4-5 ವರ್ಷಗಳ ಹಿಂದೆ ಪಟ್ಟಣ ಹೊರವಲಯದ ಎಲ್ಲ ಮುಖ್ಯರಸ್ತೆಯಲ್ಲಿ ಕಸ ಹಾಕಲಾಗುತ್ತಿದ್ದ ಕಾರಣ ಸುತ್ತಮುತ್ತಲ ಗ್ರಾಮಸ್ಥರಿಂದ ತುಂಬಾ ಟೀಕೆಗಳು ಹೆಚ್ಚಾದಂತೆ ಎಚ್ಚೆತ್ತ ಪಪಂ ಮೂರು ಕಿಮೀ ದೂರದ ಘನ ತ್ಯಾಜ್ಯ ವಿಲೇವಾರಿ ಘಟಕದ ಜಾಗದಲ್ಲಿ ಹಾಕುತ್ತಿರುವುದರಿಂದ ಆ ಸಮಸ್ಯೆ ದೂರವಾಗಿದೆ.
ಶಿರಾಳಕೊಪ್ಪದಂತಹ ಚಿಕ್ಕ ಪಟ್ಟಣದಲ್ಲಿ ಪ್ರತಿದಿನ 5 ಟನ್ ಕಸ ಸಂಗ್ರಹವಾಗುತ್ತಿದ್ದರೂ ವಿಲೇವಾರಿ ಮಾಡುತ್ತಿರುವುದರಿಂದ ಪಟ್ಟಣದಲ್ಲಿ ಕಸದ ರಾಶಿ ಕಡಿಮೆ ಆಗಿದೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತಾವು ಕಂಡ ಮಾದರಿ ತಾಲೂಕಿನ ಕನಸನ್ನು ನನಸಾಗಿಸುವ ಹಿನ್ನೆಲೆಯಲ್ಲಿ ಬಳ್ಳಿಗಾವಿಯ ಬಳಿ 7 ಎಕರೆ ಜಾಗ ಮಂಜೂರು ಮಾಡಿಸಿಕೊಟ್ಟು ಘನ ತ್ಯಾಜ್ಯ ವಿಲೇವಾರಿಗೆ ಸಹಕರಿಸಿದ ಕಾರಣ ಇಂದು ಪಪಂನಲ್ಲಿ ಯಾರೇ ಅಧಿಕಾರಕ್ಕೆ ಬರಲಿ ಹಾಗೆಯೇ ಯಾರೇ ಮುಖ್ಯಾಧಿಕಾರು ಬರಲಿ ಕಸ ವಿಷಯದಲ್ಲಿ ನಿರಾಳವಾಗಿ ಕಾರ್ಯನಿರ್ವಹಿಸುವಂತಾಗಿದೆ.
ಕಸ ಸಂಗ್ರಹ ಹೇಗೆ: ಪಟ್ಟಣದಲ್ಲಿ ಕಸ ನಿರ್ವಹಣೆಗೆ ಎರಡು ಗುಂಪುಗಳಾಗಿ ಕೆಲಸಗಾರರು ಕಾರ್ಯ ನಿರ್ವಹಿಸುತಿದ್ದು, 25 ಪೌರ ಕಾರ್ಮಿಕರು ಸ್ವಚ್ಚತೆಯಲ್ಲಿ 15 ಪೌರಕಾರ್ಮಿಕರು ಕಸ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಪ್ರತಿದಿನ ಕಸ ಸಂಗ್ರಹಿಸಲು ಒಂದು ಟ್ರ್ಯಾಕ್ಟರ್, 2 ಆಟೋ ಟಿಪ್ಪರ್, 1 ಟ್ರೈಸಿಕಲ್, ಪುಟ್ಟಗಾಡಿಗಳ ಮುಖಾಂತರ ಮನೆಮನೆಗೆ ತೆರಳಿ ಪಟ್ಟಣದಲ್ಲಿ ಸಂಗ್ರಹಿಸುವ ಕಸವನ್ನು ಹಸಿ ಹಾಗೂ ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡಲಾಗುತ್ತಿದೆ.
ಶೂನ್ಯ ಕಸ ಕಲ್ಪನೆ: ಪಟ್ಟಣದಲ್ಲಿ ಶೂನ್ಯಕಸ ಕಲ್ಪನೆಯೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಯಿತು. ಆದರೆ ಅನುಷ್ಠಾನಕ್ಕೆ ಸಹಕಾರದ ಕೊರತೆ ಉಂಟಾಗಿದೆ. ಶೂನ್ಯ ಕಸ ನಿರ್ವಹಣೆ ಬಗ್ಗೆ ಮಾಹಿತಿ ಕೊಡಲು ವೆಲ್ಲೂರಿನಿಂದ ತ್ಯಾಜ್ಯ ನಿರ್ವಹಣಾ ತಜ್ಞ ಶ್ರೀನಿವಾಸನ್ ಅವರನ್ನು ಕರೆಸಿ ತರಬೇತಿ ಕಾರ್ಯಾಗಾರ ನಡೆಸಿದ್ದರೂ ನಿರೀಕ್ಷಿತ ಪ್ರಮಾಣದ ಗುರಿ ಸಾಧಿಸಲು ಆಗದಿರುವದಕ್ಕೆ ಬೇಸರವಿದೆ ಎಂದಿದ್ದಾರೆ.
ಪಪಂ ಅಧ್ಯಕ್ಷೆ ಜಮೀಲಾ ಖಾತೂನ್, ಮೊದಲಿನಕ್ಕಿಂತ ಈಗ ಸಾಕಷ್ಟು ಕಸ ವಿಲೇವಾರಿ ಕಾರ್ಯ ಉತ್ತಮವಾಗಿದೆ. ಜನರು ಕಾಲುವೆಗಳಲ್ಲಿ ಕಸಹಾಕುವುದನ್ನು ನಿಲ್ಲಿಸಬೇಕು ಜನರ ಸಹಕಾರ ವಿದ್ದಲ್ಲಿ ಇನ್ನೂ ಉತ್ತಮವಾಗಿ ಕಾರ್ಯ ಮಾಡಲು ಸಾಧ್ಯ ಎಂದರು.
ಉಪಾಧ್ಯಕ್ಷೆ ನೂರ್ಜಹಾನ್, ಇಂದು ಕಸಕಂಡರೆ ತಕ್ಷಣ ತೆಗೆಯುವ ಕೆಲಸ ನಡೆಯುತ್ತಿದೆ. ಆದರೆ ಮೀನು ಮಟನ್ ಮಾಂಸದ ಅಂಗಡಿಯ ತ್ಯಾಜ್ಯದಿಂದ ಸಂತೆ ಮಾರ್ಕೆಟ್ ಹಿಂಭಾಗದಲ್ಲಿ ಸಮಸ್ಯೆ ಉಂಟಾಗುತ್ತದೆ. ಇಂತಹ ಸಮಸ್ಯೆ ದೂರಮಾಡಲು ಜನಪ್ರತಿನಿಧಿಗಳ ಸಹಕಾರ ಬೇಕು ಎಂದಿದ್ದಾರೆ.
ಪಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಅವರು ಯಡಿಯೂರಪ್ಪ ಅವರ ನೆರವು ಕಾರಣ ಎಂದು ಹೇಳಿದ್ದರೆ.
ಪಪಂ ಸದಸ್ಯ ಜಾಫರ್, ಸ್ಲಮ್ ಪ್ರದೇಶದಲ್ಲಿ ಇಂದು ಕಸವಿಲೇವಾರಿ ಉತ್ತಮವಾಗಿದೆ ಎಂದಿದ್ದಾರೆ.
ಕಸ ಪ್ರತ್ಯೇಕಿಸುವ ಕಾರ್ಯ:
ಘನ ತ್ಯಾಜ್ಯ ಘಟಕದಲ್ಲಿ ಕಸವನ್ನು ಪ್ರತ್ಯೇಕಿಸುವ ಕಾರ್ಯ ನಡೆಯುತ್ತಿದೆ. ಅಲ್ಲಿ ಕೊಳೆಯುವ ಕಸ ಮತ್ತು ಪುನರ್ ಬಳಕೆ ಕಸವನ್ನು ಬೇರ್ಪಡಿಸಿ, ಕೊಳೆಯದಂತಹ ಕಸದ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತದೆ. ಪ್ಲಾಸ್ಟಿಕ್ ಹಾಗೂ ಇತರ ಘನ ವಸ್ತುಗಳನ್ನು ಬೇರ್ಪಡಿಸಿ ಹಸಿ ಕಸವನ್ನು ಕಾಪೋಂಸ್ಟ್ ಗೊಬ್ಬರ ಮಾಡಲಾಗುತ್ತಿದೆ.
ಈ ಬಗ್ಗೆ ಪಪಂ ಮುಖ್ಯಾಧಿಕಾರಿ ರಾಜ್ಕುಮಾರ್ ಅವರನ್ನು ಸಂಪರ್ಕಿಸಿದಾಗ ಕಸ ಹರಡದಂತೆ ಮತ್ತು ಕಸವನ್ನು ಯಾವರೀತಿ ಸಂಗ್ರಹಿಸ ಬೇಕು ಎಂಬ ಬಗ್ಗೆ ಪಪಂ ನಿಂದ ಹಾಗೂ ಜನಪ್ರತಿನಿಧಿಗಳು ಸಾಕಷ್ಟು ಮಾಹಿತಿಕೊಡುವ ಮುಖಾಂತರ ಶೇ.50ರಷ್ಟು ಕಸವನ್ನು ಮನೆಗಳಲ್ಲಿಯೇ ವಿಂಗಡನೆ ಮಾಡಲಾಗುತ್ತಿದೆ. ಆದರೆ ನಮಗೆ ಶೇ.40ರಿಂದ 50ರಷ್ಟು ಮಾತ್ರ ತೃಪ್ತಿ ಇದ್ದು, ಸಾಕಷ್ಟು ಸಾಧಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.