ಹೊರಗೆ ರೈತರ ಹೋರಾಟ ಒಳಗೆ ಸೈಟು ಮಾರಾಟ
ಶಿವಮೊಗ್ಗ: ವಿಮಾನ ನಿಲ್ದಾಣಕ್ಕಾಗಿ ಭೂಮಿಕೊಟ್ಟು ಸಂತ್ರಸ್ತರಾಗಿರುವ ರೈತರ ಕೂಗನ್ನು ಕೊನೆಗೂ ಜಿಲ್ಲಾಡಳಿತ ಕೇಳಿಸಿಕೊಳ್ಳಲೇ ಇಲ್ಲ. ರೈತರಿಗೆ ಮೀಸಲಿಟ್ಟ ಜಾಗವನ್ನು ಸಾರ್ವಜನಿಕರಿಗೆ ಹರಾಜು ಹಾಕುವ ಪ್ರಕ್ರಿಯೆ ತಡೆಯೊಡ್ಡುವ ಎಲ್ಲಾ ಅವಕಾಶ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರಿಗೆ ಇದ್ದರೂ, ಡಿಸಿಯವರು ರೈತರ ಪರ ಕರುಣೆ ತೋರಲೇ ಇಲ್ಲ.
ಹೀಗಾಗಿ, ರೈತರ ಹೋರಾಟದ ನಡುವೆಯೇ ಕರ್ನಾಟಕ ಗೃಹ ಮಂಡಳಿ ರೈತರ ನಿವೇಶನಕ್ಕಾಗಿ ಮೀಸಲಿಟ್ಟ ಜಾಗವನ್ನು ಹರಾಜು ಹಾಕಿ ಕೈತೊಳೆದುಕೊಂಡಿತು.
ಆಗಿದ್ದಿಷ್ಟು, ಏಳು ವರ್ಷದ ಹಿಂದೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆಂದು ಸೋಗಾನೆ ಸರ್ವೆ ನಂ.120ರಲ್ಲಿದ್ದ 301 ಕುಟುಂಬವನ್ನು ತೆರವುಗೊಳಿಸಲಾಯಿತು. ಸಂತ್ರಸ್ತ ರೈತರ ಭೂಮಿಯ ಅಳತೆಗೆ ತಕ್ಕಂತೆ ಪರಿಹಾರ ಘೋಷಿಸಲಾಯಿತು. ಇದೇ ಸಂದರ್ಭದಲ್ಲಿ ಸರ್ಕಾರ ರೈತರೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಂತ್ರಸ್ತ ರೈತ ಕುಟುಂಬಕ್ಕೆ ಉಚಿತ ನಿವೇಶನ ಕೊಡುವುದಾಗಿ ಹೇಳಿತ್ತು. ಇದು ಯಡಿಯೂರಪ್ಪನವರ ಫಾರ್ಮುಲವಾಗಿತ್ತು.
ನಂತರ ರೈತರಿಗೆ ನಿವೇಶನ ನೀಡಲು ಸರ್ಕಾರ ರು. 2.05 ಕೋಟಿ ಬಿಡುಗಡೆ ಮಾಡಿ, 34 ಎಕರೆ ಜಾಗ ವಶಪಡಿಸಿಕೊಂಡಿತು. ಕೇವಲ 30 ರೈತರಿಗಷ್ಟೇ ನಿವೇಶನ ಹಂಚಿದ ಜಿಲ್ಲಾಡಳಿತ ಉಳಿದ ನಿವೇಶನಗಳನ್ನು ಕರ್ನಾಟಕ ಗೃಹ ಮಂಡಳಿ ಮೂಲಕ ಹರಾಜು ನಡೆಸಲು ಮುಂದಾಯಿತು. ರೈತರು ಕೋರ್ಟ್ ಮೆಟ್ಟಿಲೇರಿದರೂ ಪ್ರಯೋಜನಕ್ಕೆ ಬಾರದಾಯಿತು. ರೈತರು ನೇರವಾಗಿ ಡಿಸಿಯವರನ್ನೇ ಕಂಡು ಹರಾಜು ನಿಲ್ಲಿಸುವಂತೆ ಒತ್ತಾಯಿಸಿದರು. ಡಿಸಿಯರು ಪರಿಶೀಲಿಸುವ ಭರವಸೆ ನೀಡಿದ್ದರು. ಅಂತಿಮವಾಗಿ ಜೂ.27ರಂದು ಕರ್ನಾಟಕ ಗೃಹ ಮಂಡಳಿ ಹರಾಜು ಪ್ರಕ್ರಿಯೆ ನಡೆಸಿಯೇ ತೀರಿತು.
ಶುಕ್ರವಾರ ಇಲ್ಲಿನ ಗೃಹ ಮಂಡಳಿ ಕಚೇರಿ ಹೊರಭಾಗದಲ್ಲಿ ರೈತರು ಧರಣಿ ನಡೆಸಿ ಸೈಟು ಹರಾಜು ನಡೆಸದಂತೆ ಘೋಷಣೆ ಕೂಗುತ್ತಿದ್ದರೆ, ಕಚೇರಿ ಒಳಭಾಗದಲ್ಲಿ ಬಿಗಿ ಪೊಲೀಸ್ಭ್‌ದ್ರತೆ ನಡುವೆ ಅಧಿಕಾರಿಗಳು 270 ನಿವೇಶನಗಳನ್ನು ಹರಾಜು ನಡೆಸಿಯೇ ತೀರಿದರು.
ಅಂತಿಮವಾಗಿ ರೈತರ ಹೋರಾಟ ಲೆಕ್ಕಕ್ಕಿಲ್ಲದಂತಾಯಿತು, ಡಿಸಿಯವರಿಗೆ ಮನವಿ ಕೊಟ್ಟಿದ್ದೂ ಪ್ರಯೋಜನಕ್ಕೆ ಬಾರದಾಯಿತು. ಡಿಸಿಯವರ ಅಣತಿಯಂತೆ ರೈತರ ಪಾಲಿನ ನಿವೇಶನಗಳು ಸಾರ್ವಜನಿಕವಾಗಿ ಹರಾಜು ಆಗೇ ಬಿಟ್ಟಿತು.