ಭಾಷಾ ತಾರತಮ್ಯ ಇಲ್ಲದ ಶಿಕ್ಷಣ ಅವಶ್ಯ
ತೀರ್ಥಹಳ್ಳಿ(ಕೆ. ಗಂಗಾಧರ್ ವೇದಿಕೆ,ಗೋಪಾಲಗೌಡ ರಂಗಮಂದಿರ): ನಮ್ಮಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಅದ್ಧೂರಿಯಾಗಿ ವಿಜೃಂಭಿಸುತ್ತಿದ್ದು, ಅವು ವ್ಯಾಪಾರಿ ಕೇಂದ್ರಗಳಾಗಿವೆ. ಇದು ಖಂಡಿತ ಭ್ರಷ್ಠಾಚಾರದ ಪರಮಾವಧಿ. ಇಂಗ್ಲಿಷ್ ಶಾಲೆಗಳ ಎದುರು ಕನ್ನಡ ಮಾಧ್ಯಮದ ಶಾಲೆಗಳು ಮಂಕಾಗಿದ್ದು ವಿದ್ಯಾರ್ಥಿಗಳು ಕೀಳರಿಮೆಯಿಂದ ನರಳುತ್ತಿದ್ದಾರೆ. ಈ ತಾರತಮ್ಯ ಹೋಗಲಾಡಿಸುವ ಸಮಾನ ಶಿಕ್ಷಣ ಪದ್ಧತಿಯ ಅವಶ್ಯಕತೆಯಿದೆ ಎಂದು ಸಾಹಿತಿ ಬಿಳುಮನೆ ರಾಮದಾಸ್ ಅಭಿಪ್ರಾಯಪಟ್ಟರು.
ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಧ್ಯಕ್ಷ ಭಾಷಣ ಮಾಡಿದ ಅವರು, ಇಂದು ಇಂಗ್ಲಿಷ್ ಮಾಧ್ಯಮದ ಶಾಲೆಗಳು ಕನ್ನಡ ಶಾಲೆಗಳಾಗಬೇಕು.
ಈ ಬಗ್ಗೆ ಪೋಷಕರು ಚಿಂತಿಸಬೇಕು. ಸರ್ಕಾರದ ಹೊಣೆಯೂ ಇದೆ. ಕನ್ನಡ ಚಳವಳಿಗಾರರು ಬಿರುಸಿನ ಚಳವಳಿ ಮಾಡಬೇಕು. ಈಗೀಗ ಹಳ್ಳಿಗಳಲ್ಲೂ ಇಂಗ್ಲಿಷ್ ಮಾಧ್ಯಮ ಶಾಲೆಗಳು ತಲೆಯೆತ್ತುತ್ತಿರುವುದು ದುರದೃಷ್ಟಕರ ಎಂದರು.
ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯ ಕೂಡ ರಾಜ್ಯ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿ, ರಾಜ್ಯ ಹೈಕೋರ್ಟಿನ ತೀರ್ಪನ್ನು ಎತ್ತಿಹಿಡಿದಿದೆ. ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಶಿಕ್ಷಣ ಕೊಡಬೇಕು ಎಂಬುದು ಪೋಷಕರಿಗೆ ಬಿಟ್ಟಿದ್ದು ಎಂದಿದೆ. ಸರ್ಕಾರ ಮೇಲ್ಮನವಿ ಸಲ್ಲಿಸಿದ್ದರೂ, ಅದರಿಂದ ಅನುಕೂಲವೇನೂ ಆಗದು. ಸುಪ್ರಿಂಕೋರ್ಟ್ ತೀರ್ಮಾನ ಸಂವಿಧಾನ ಪೀಠದ ತೀರ್ಪು. ಸರ್ಕಾರ ಕಾನೂನಿನ ತಿದ್ದುಪಡಿ ತಂದು ಕನ್ನಡವನ್ನು ಉಳಿಸಬೇಕಾಗಿದೆ.
ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಉಳಿದರೆ ಅದು ಹಳ್ಳಿಯವರಿಂದ, ಶ್ರಮಿಕರಿಂದ ಮತ್ತು ಮನೆಯ ಗ್ರಹಿಣಿಯರಿಂದ ಮಾತ್ರ. ಇಲ್ಲವಾದಲ್ಲಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯಶಿವ ಎನ್ನುವ ಕರೆಗೆ ಬೆಲೆಯಿಲ್ಲವಾಗುತ್ತದೆ ಎಂದರು.
ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದಲೇ ಕುವೆಂಪು, ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗ, ಲಂಕೇಶ ಮೊದಲಾದವರಿಗೆ ಕನ್ನಡದಲ್ಲಿ ಉತ್ಕೃಷ್ಟ ಸಾಹಿತ್ಯ ರಚಿಸಲು ಸಾಧ್ಯಯಿತು.
ಇಂಗ್ಲಿಷ್ ಭಾಷೆಯ ಜ್ಞಾನವಿಲ್ಲದ ನಮ್ಮ ವಚನಕಾರರು ಕನ್ನಡ ಸಾಹಿತ್ಯಕ್ಕೆ ಅದ್ಭುತ ಕೊಡುಗೆಯಿತ್ತಿದ್ದಾರೆ. ಅವರಿಗೆ ವಿದ್ಯಾಭ್ಯಾಸವೂ ಇರಲಿಲ್ಲ. ಇಂಗ್ಲಿಷ್ ಅಂತರಾಷ್ಟ್ರೀಯ ಭಾಷೆ ಎನ್ನುವುದು ಭ್ರಮೆಯಷ್ಟೆ. ಅನೇಕ ದೇಶಗಳಲ್ಲಿ ಇಂಗ್ಲಿಷ್ ಭಾಷೆ ಇಲ್ಲ.
ಆ ದೇಶಗಳ ಜನ ತಮ್ಮ ಭಾಷೆಗಳಲ್ಲೇ ಉದ್ಧಾರ ಕಂಡಿದ್ದಾರೆ ಎಂದ ಅವರು ನಮ್ಮ ಈಗಿನ ಪ್ರಧಾನಿ ಮೋದಿಯವರೂ ಲೋಕಸಭೆಯಲ್ಲಿ ಪ್ರಪ್ರಥಮವಾಗಿ ಹಿಂದಿ ಭಾಷೆಯಲ್ಲೇ ಮಾತನಾಡಿದ್ದಾರೆ ಎಂದು ಹೇಳಿದರು. ಕನ್ನಡಿಗರಲ್ಲಿ ಭಾಷಾ ಪ್ರೇಮ ಇತರರಿಗಿಂದ ಕಡಿಮೆಯಾಗಿರುವುದೇ ನಮಗಿರುವ, ಕನ್ನಡಕ್ಕಿರುವ ತೊಂದರೆ ಎಂದರು.
ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಸಮ್ಮೇಳನ ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೋಣಂದೂರು ಲಿಂಗಪ್ಪ ಮಾತನಾಡಿ, ತೀರ್ಥಹಳ್ಳಿ ತಾಲೂಕು ರಾಜ್ಯಕ್ಕೆ 4 ಉಪಕುಲಪತಿಗಳನ್ನು ಕೊಟ್ಟಿದೆ. ಎರಡು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ, ಇದಕ್ಕಿಂತ ಹೆಚ್ಚುಗಾರಿಕೆ ಇನ್ನೇನುಬೇಕು ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿದರು. ದಕ್ಷಿಣಕನ್ನಡದ ಡಾ.ನಾ. ಮೊಗಸಾಲೆ ವೇದಿಕೆಯಲ್ಲಿದ್ದರು. ರಾಜಕಾರಣಿಗಳು ವಿಧಾನ ಸಭೆ, ಲೋಕಸಭೆಗಳಿಗೆ ಒಮ್ಮೆ ಮಾತ್ರ ಆಯ್ಕೆಯಾಗಿ, ಬೇರೆ ಬೇರೆ ಮುಖಗಳು ಬಂದಿದ್ದರೆ ಇಷ್ಟುಹೊತ್ತಿಗೆ ನಮ್ಮ ದೇಶ ರಾಮರಾಜ್ಯವಾಗಿಬಿಡುತ್ತಿತ್ತು ಎಂದು ಹೇಳಿದರು.
ತಾಪಂ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಹಾರೊಗೊಳಿಗೆ ಪದ್ಮನಾಭ್, ಶೃತಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.
ಅಧ್ಯಕ್ಷರು ಹೇಳಿದ್ದು....
ಚ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಕನ್ನಡ ಶಾಲೆಗಳಾಗಬೇಕು. ಈ ಬಗ್ಗೆ ಪ್ರತಿಯೊಬ್ಬ ಪೋಷಕರ ಚಿಂತನೆ ಅಗತ್ಯ
ಚ ಇಂಗ್ಲಿಷ್ ಶಾಲೆಗಳ ಎದುರು ಕನ್ನಡ ಮಾಧ್ಯಮದ ಶಾಲೆಗಳು ಮಂಕಾಗಿದ್ದು ವಿದ್ಯಾರ್ಥಿಗಳು ಕೀಳರಿಮೆಯಿಂದ ನರಳುತ್ತಿದ್ದಾರೆ
ಚ ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಉಳಿದರೆ ಅದು ಹಳ್ಳಿಯವರಿಂದ, ಶ್ರಮಿಕರಿಂದ ಮತ್ತು ಗೃಹಿಣಿಯರಿಂದ ಮಾತ್ರ
ಉದ್ಘಾಟಕರ ನುಡಿ....
ತೀರ್ಥಹಳ್ಳಿಯ ಮಣ್ಣಿನಲ್ಲಿ ಹಲವಾರು ಪ್ರತಿಭೆಗಳು ಅಪ್ರತಿಮ ಸಾಧನೆ ಮಾಡಿದ್ದಾರೆ. ಆಧುನಿಕ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆ ಅದ್ಭುತ. ಎಸ್.ವಿ.ಪರಮೇಶ್ವರ ಭಟ್ಟರು ವಚನ ಸಾಹಿತ್ಯಕ್ಕೆ ಮಹತ್ವ ತಂದುಕೊಟ್ಟಿದ್ದಾರೆ. ಎಂ.ಕೆ. ಇಂದಿರಾ, ಡಾ.ಯು.ಆರ್.ಅನಂತಮೂರ್ತಿ, ಡಾ.ಹಾ.ಮಾ.ನಾ. ಇವರೆಲ್ಲ ತೀರ್ಥಹಳ್ಳಿಯವರೇ ಎನ್ನುವುದು ಹೆಮ್ಮೆ ತರುತ್ತದೆ.
- ಅಂಬಳಿಕೆ ಹಿರಿಯಣ್ಣ