ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಲಾಂಚ್‌ನಲ್ಲಿ ದಾಟಲು ಗಣ್ಯರೊಂದಿಗೆ ಪೈಪೋಟಿ

Vishwanath S
Updated On : 2 Mar 2014, 11:55 am

ಹಸಿರುಮಕ್ಕಿ: ಲಾಂಚ್‌ನಲ್ಲಿ ಪ್ರಯಾಣ ಮಾಡಲು ಸಚಿವ-ವಿಧಾನಸಭಾಧ್ಯಕ್ಷರು ಹಾಗೂ ಸಾರ್ವಜನಿಕರ ನಡುವೆ ಪೈಪೋಟಿ ಏರ್ಪಟ್ಟು, ಮಾತಿನ ಚಕಮಕಿಗೆ ಕಾರಣವಾದ ಪ್ರಸಂಗ ಶರಾವತಿ ಹಿನ್ನೀರು ವ್ಯಾಪ್ತಿ ಕೆ.ಬಿ.ಸರ್ಕಲ್ ಲಾಂಚ್ ರ್ಯಾಂಪ್  ಬಳಿ ನಡೆಯಿತು.
 ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯು ಶನಿವಾರ ಇಲ್ಲಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇಲ್ಲಿ ಕಾರ್ಯಕ್ರಮ ನಂತರ ಅಂಬಾರಗೊಡ್ಲು- ಕಳಸವಳ್ಳಿಯಲ್ಲಿ ನಡೆಯುವ ಇನ್ನೊಂದು ಕಾರ್ಯಕ್ರಮಕ್ಕೆ ಲಾಂಚ್‌ನ ಮೂಲಕವೇ(ಪ್ರತ್ಯೇಕ ಮಾರ್ಗವಿಲ್ಲ) ಸಚಿವ ಬಾಬುರಾವ್ ಚಿಂಚನಸೂರು, ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಂಸದ ಬಿ.ವೈ.ರಾಘವೇಂದ್ರ ಮತ್ತಿತರರು ತೆರಳಬೇಕಾಗಿತ್ತು.
ಮಹಿಳೆಯರ ಆಕ್ರೋಶ: ಇದೇ ಸಂದರ್ಭದಲ್ಲಿ ಸಾಗರ ಕಡೆಗೆ ಖಾಸಗಿ ಬಸ್ ಇದೇ ಲಾಂಚ್ ಬಳಸಿ ಹೊರಡಲು ಅನುವಾಗಿತ್ತು. ಗಣ್ಯರು ಹಾಗೂ ಅವರ ವಾಹನಗಳ ಪ್ರವೇಶದಿಂದ ಬಸ್ ಪ್ರಯಾಣಿಕರಿಗೆ ಬಸ್ ಸಹಿತ ಲಾಂಚ್‌ನಲ್ಲಿ ಅವಕಾಶ ಸಿಗಲಿಲ್ಲ. ಇದರಿಂದ ಅಸಮಾಧಾನಗೊಂಡ ಬಸ್‌ನಲ್ಲಿದ್ದ ಮಹಿಳೆಯರುಕೆರಳಿದರು.   
 ನಮಗೇ ಮೊದಲು ಅವಕಾಶಕೊಡಬೇಕೆಂದು ಪಟ್ಟು ಹಿಡಿದರು. ಗಣ್ಯರೆಂದು ನಮ್ಮನ್ನು ಗಂಟೆಗಟ್ಟಲೆ ಕಾಯಿಸುವುದು ಸರಿಯಲ್ಲ ಎಂದು ಇಲಾಖೆ ಸಿಬ್ಬಂದಿ  ಮತ್ತು ಪೊಲೀಸರ ಮೇಲೆ ಮುಗಿಬಿದ್ದರು.
ಕಾಗೋಡು ಮನವಿ ವಿಫಲ: ಪರಿಸ್ಥಿತಿ ಬಿಗಡಾಯಿಸುವುದನ್ನು ಅರಿತ ಕಾಗೋಡು ತಿಮ್ಮಪ್ಪ ಹಾಗೂ ಸಚಿವ ಚಿಂಚನಸೂರ್ ಕಾರಿನಿಂದ ಕೆಳಗಿಳಿದರು. ಕೆರಳಿದ ಪ್ರಯಾಣಿಕರು ಇವರ ವಿರುದ್ಧವೇ ಏರಿದ ದನಿಯಲ್ಲಿ ಆಕ್ರೋಶಗೊಂಡರು. ನಾವು ಬೇರೆ ಊರಿಗೆ ಹೋಗಬೇಕು ಎಂದು ಒಬ್ಬ ಪ್ರಯಾಣಿಕರು ಹೇಳಿದರೆ ಮತ್ತೊಬ್ಬರು ಆಸ್ಪತ್ರೆಗೆ ತುರ್ತಾಗಿ ಹೋಗಬೇಕೆಂದರು. ಆದರೆ, ಕಾಗೋಡು ತಿಮ್ಮಪ್ಪನವರು ಇವರನ್ನು ಎಷ್ಟೇ ಸಮಾಧಾನಪಡಿಸಲು ಪ್ರಯತ್ನಿಸಿದರೂ ಶಾಂತರಾಗಲಿಲ್ಲ.    ಅಂತಿಮವಾಗಿ ನಾವು ಹೋಗಲೇಬೇಕು ಎಂದು ಗಣ್ಯರು ಹಾಗೂ ಪ್ರಯಾಣಿಕರು ಪಟ್ಟು ಹಿಡಿದರು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಕಾಗೋಡು ತಿಮ್ಮಪ್ಪನವರು ನಾವು ಹೋಗಲೇ ಬೇಕು ಎಂದು ದೊಡ್ಡ  ದನಿಯಲ್ಲಿ ಮಾತನಾಡಿ ಲಾಂಚ್ ಏರಿಯೇ ಬಿಟ್ಟರು.
 ಇವರ ವರ್ತನೆಯಿಂದ ಕೆರಳಿದ ಬಸ್ ಪ್ರಯಾಣಿಕರು ಶಪಿಸುತ್ತಲೇ ಮುಕ್ಕಾಲು ತಾಸು ಕಳೆದು ನಂತರ ಸುತ್ತಿನಲ್ಲಿ ಲಾಂಚ್ ಏರಿ ಹೊರಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement