ಹಸಿರುಮಕ್ಕಿ ಸೇತುವೆ ನಿರ್ಮಾಣ: ಭರವಸೆ
ಶಿವಮೊಗ್ಗ: ಹೊಸನಗರ ತಾಲೂಕು ಮತ್ತು ಸಾಗರ ತಾಲೂಕನ್ನು ಸಮೀಪಗೊಳಿಸುವ ಹಸಿರುಮಕ್ಕಿಯಲ್ಲಿ ಶರಾವತಿ ಹಿನ್ನೀರಿನ ಮೇಲೆ ಸೇತುವೆ ನಿರ್ಮಿಸುವುದಾಗಿ ಸರ್ಕಾರ ಭರವಸೆ ನೀಡಿದೆ.
ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ವಾಸವಾಗಿರುವ ಮುಳುಗಡೆ ಸಂತ್ರಸ್ತರಿಗೆ ಹಾಗೂ ಬೆಳೆಯುತ್ತಿರುವ ಸಾಗರ ಪಟ್ಟಣಕ್ಕೆ ಸಂಪರ್ಕ ರಸ್ತೆ ಕಲ್ಪಿಸುವ ಉದ್ದೇಶದಿಂದ ಹಸಿರುಮಕ್ಕಿ ಕೆ.ಬಿ. ಸರ್ಕಲ್ ಸಾಗರ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಎಲ್ಲಾ ಪ್ರಯತ್ನ ಮಾಡುವುದಾಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ಶನಿವಾರ ಕೆ.ಬಿ. ಸರ್ಕಲ್ ಕಡಲು ಸೇವೆಗೆ ಹೆಚ್ಚುವರಿಯಾಗಿ ಒಂದು ಎಲ್.ಸಿ.ಟಿ. ನೌಕೆ ಮತ್ತು ಎಲ್.ಸಿ.ಟಿ. ಲ್ಯಾಂಡಿಂಗ್ ರ್ಯಾಂಪ್ ನಿರ್ಮಾಣ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಈ ಭರವಸೆ ನೀಡಿದರು.
ಶೀಘ್ರವೇ ರ್ಯಾಂಪ್ ನಿರ್ಮಾಣ: ಸೇತುವೆ ನಿರ್ಮಾಣದಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಹೀಗಾಗಿ ಯೋಜನೆ ಕುರಿತಂತೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಹಣ ಬಿಡುಗಡೆಗೆ ಶ್ರಮಿಸುವುದಾಗಿ ಹೇಳಿದ ಚಿಂಚನಸೂರ್, ಹೊಸ ಲಾಂಚ್ ಆರಂಭ ಮತ್ತು ಅದಕ್ಕೆ ಸಂಬಂಧಪಟ್ಟಂತೆ ರ್ಯಾಂಪ್ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಮುಗಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ವಿಧಾನಪರಿಷತ್ ಸಭಾಧ್ಯಕ್ಷ ಡಿ.ಎಚ್. ಶಂಕರಮೂರ್ತಿಯವರು, ಮುಳುಗಡೆ ಸಂತಸ್ತರ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಅವರ ಜೀವನ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಿವೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು. Ú ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಮಾತನಾಡಿ, ಬಗರ್‌ಹುಕುಂ ಸೇರಿದಂತೆ ಈ ಭಾಗದ ಜನರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶುಭಾ ಕೃಷ್ಣಮೂರ್ತಿ, ಕಲಗೋಡು ರತ್ನಾಕರ, ಜ್ಯೋತಿ ಚಂದ್ರಮೌಳಿ, ಸಾಗರ ಉಪವಿಭಾಗಾಧಿಕಾರಿ ಉದಯಕುಮಾರ್ ಶೆಟ್ಟಿ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎರಗಿ ಉಮೇಶ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.