ಒಳಾಂಗಣ ಕ್ರೀಡಾಂಗಣಕ್ಕೆ ನೆರವು: ಭರವಸೆ
ಚನ್ನಗಿರಿ: ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲು ಜಾಗವನ್ನು ಗುರ್ತಿಸಿ ಸೂಚಿಸಿದರೆ ಅದರ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಶಾಸಕ ವಡ್ನಾಳ್ ರಾಜಣ್ಣ ಹೇಳಿದರು. ಇಲ್ಲಿನ ಚೆನ್ನಮ್ಮಾಜಿ ರಂಗಮಂದಿರದಲ್ಲಿ ಚೆನ್ನಮ್ಮಾಜಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಏರ್ಪ ಡಿಸಿದ್ದ ಹೊನಲು ಬೆಳಕಿನ ಷಟಲ್ ಬ್ಯಾಡ್ಮಿಂಟನ್ ಟೂರ್ನಿಮೆಂಟ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪಟ್ಟಣದ ಹಿರಿಯ ಕುಸ್ತಿ ಪಟು ಧರ್ಮಣ್ಣ ಇವರನ್ನು ತಾಲೂಕು ಜೆಡಿಎಸ್ ಅಧ್ಯಕ್ಷ ಹೊದಿಗೆರೆ ರಮೇಶ್ ಸನ್ಮಾನಿಸಿದರು, ಕುಸ್ತಿ ಪಟುವಿನ ಪರಿಚಯವನ್ನು ಜಿ.ಚಿನ್ನಸ್ವಾಮಿ ಮಾಡಿಕೊಟ್ಟರು. ಅಧ್ಯಕ್ಷತೆ ಅಸೇಸಿಯೇಷನ್ ಅಧ್ಯಕ್ಷ ಯು.ಕೆ.ಪ್ರಹ್ಲಾದ್ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ತುಮ್ಕೋಸ್ನ ಅಧ್ಯಕ್ಷ ಶಿವಕುಮಾರ್, ನಿರ್ದೇಶಕ ಆರ್.ಎಂ.ರವಿ, ಪ.ಪಂ.ಸದಸ್ಯ ಎಂ.ಯೋಗೀಶ್ ಇದ್ದರು. ವೆಂಕಟ ರಂಗಯ್ಯ ಸ್ವಾಗತಿಸಿದರು.
ವಿದ್ಯಾವರೇಣ್ಯಸ್ವಾಮಿ ರಥೋತ್ಸವ 8 ರಿಂದ
ದಾವಣಗೆರೆ: ತಾಲೂಕಿನ ಹೊಸಹಳ್ಳಿ-ಹದಡಿ ಮಾರ್ಗದ ಚಂದ್ರಗಿರಿ ಮಠದಲ್ಲಿ ವಿದ್ಯಾವರೇಣ್ಯರ ರಥೋತ್ಸವ ಕಾರ್ಯಕ್ರಮ ಮಾ. 8ರಿಂದ 14ರ ವರೆಗೆ ನಡೆಯಲಿದೆ. ರಥೋತ್ಸವ ಅಂಗವಾಗಿ ಶಿವಭಜನೆ ಸಪ್ತಾಹ, ಪ್ರವಚನ, ಕೀರ್ತನೆ, ಗಣ್ಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ಮಾ. 14ರಂದು ಬೆಳಗ್ಗೆ ವಿದ್ಯಾವರೇಣ್ಯರ ಪುಣ್ಯಾರಾಧನೆ ನಡೆಯಲಿದೆ. ಅದೇ ಮಧ್ಯಾಹ್ನ 12.25ಕ್ಕೆ ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದೆ. ಐರಣಿ ಹೊಳೆಮಠದ ಬಸವರಾಜ ದೇಶೀಕೇಂದ್ರ ಸ್ವಾಮೀಜಿ, ಇಂಚಲಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ, ಯಡಹಳ್ಳಿ ಮಠದ ಬಸವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವರು. ಇದೇ ವೇಳೆ ಬೆಂಗಳೂರಿನ ಶಂಕರಾಚಾರ್ಯರ ತುಲಾಭಾರ ಸೇವೆ ನಡೆಯಲಿದೆ. ಮಾಹಿತಿಗೆ ದೂ.08192-218401, ಮೊ. 9972974909, 99022 32184 ಸಂಪರ್ಕಿಸಲು ಮಠದ ಸದ್ಗುರು ಪರಮಹಂಸ ಮುರಳೀಧರ ಸ್ವಾಮೀಜಿ ಕೋರಿದ್ದಾರೆ.
ಗುದ್ದಲಿ ಪೂಜೆ
ದಾವಣಗೆರೆ ಪಾಲಿಕೆಯ 23ನೇ ವಾರ್ಡ್ನ ಆವರಗೆರೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮ 3ರಂದು ನಡೆಯಲಿದೆ. ಅಂದು ಸಂಜೆ 4.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಗುದ್ದಲಿಪೂಜೆ ನೆರವೇರಿಸಲಿದ್ದು, ಶಾಸಕ ಎಸ್ಸೆಸ್ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸುವರು.
ಇಂದು ಪತ್ರಿಕೆ ಬಿಡುಗಡೆ
'ಕನ್ನಡ ಭಾರತಿ' ದಿನಪತ್ರಿಕೆ ಬಿಡುಗಡೆ ಸಮಾರಂಭ 3 ರಂದು ದಾವಣಗೆರೆಯ ಡಾ.ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ನಡೆಯಲಿದೆ. ಸಂಜೆ 6 ಗಂಟೆಗೆ ಸಚಿವ ಡಾ. ಶಾಮನೂರು ಶಿವಶಂಕರಪ್ಪ ಪತ್ರಿಕೆ ಬಿಡುಗಡೆ ಮಾಡಲಿದ್ದು, ಸಂಸದ ಜಿ.ಎಂ. ಸಿದ್ದೇಶ್ವರ್ ಇ- ಪೇಪರ್ ಬಿಡುಗಡೆ ಮಾಡುವರು. ಡಾ. ಶ್ರೀಕಂಠ ಕೂಡಿಗೆ, ವಿವಿಧ ಮಠಾಧೀಶರು ಪಾಲ್ಗೊಳ್ಳುವರು.