ಗ್ರಾಮ ಸಡಕ್ ಯೋಜನೆಯಡಿ 5 ರಸ್ತೆ ಅಭಿವೃದ್ಧಿ
ಕ.ಪ್ರ.ವಾರ್ತೆ ಟಿ ಶಿಕಾರಿಪುರ ಟಿ ಮಾ.2
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ತಾಲೂಕಿನಲ್ಲಿ 5 ಗ್ರಾಮೀಣ ರಸ್ತೆ ಕಾಮಗಾರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ ಸರಿಸಮಾನವಾಗಿ ಸತತ 5 ವರ್ಷದ ನಿರ್ವಹಣೆ ಹೊಂದಿರುವ ರಸ್ತೆ ಕಾಮಗಾರಿಯ ಸಂಪೂರ್ಣ ಗುಣಮಟ್ಟ ಕಾಪಾಡಿಕೊಂಡು ಗ್ರಾಮೀಣ ಜನತೆಗೆ ರಾಷ್ಟ್ರೀಯ ಹೆದ್ದಾರಿ ರೀತಿಯ ಸೇವೆಯನ್ನು ಕಲ್ಪಿಸುವಂತೆ ಸಂಸದ ರಾಘವೇಂದ್ರ ಭಾನುವಾರ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ತಾಲೂಕಿನ ಹೊಸದೂಪದಹಳ್ಳಿ ಗ್ರಾಮದಿಂದ ತರಲಘಟ್ಟ ಕ್ಯಾಂಪ್ವರೆಗೆ 11 ಕಿ.ಮೀ. ಉದ್ದದ ಅಂದಾಜು 5.52 ಕೋಟಿ ವೆಚ್ಚದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಲೋಕಸಭೆಯ ಚುನಾವಣೆಯ ನಂತರದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆ ಅಭಿವೃದ್ಧಿ ಪ್ರಥಮ ಕಾಮಗಾರಿಯಾಗಿದೆ. ರಾಜ್ಯದಿಂದ 19 ಬಿಜೆಪಿ ಹಾಗೂ 3 ಜೆಡಿಎಸ್ ಸಂಸದರು ಆಯ್ಕೆಗೊಂಡ ಹಿನ್ನೆಲೆಯಲ್ಲಿ ಕೇಂದ್ರದ ಕಾಂಗ್ರೆಸ್ ಸರ್ಕಾರ ಜಿಲ್ಲೆಯ 300- 400 ಕಿ.ಮೀ. ಗ್ರಾಮೀಣ ರಸ್ತೆಯ ಅಭಿವೃದ್ಧಿಗೆ ಸಲ್ಲಿಸಿದ ಪ್ರಸ್ತಾವನೆಗೆ ಉದ್ದೇಶಪೂರ್ವಕವಾಗಿ ಕಾಮಗಾರಿಗೆ ಅನುದಾನ ನೀಡದೆ ವಿಳಂಬ ಧೋರಣೆಯನ್ನು ಅನುಸರಿಸಿದ್ದು, ಇದರಿಂದಾಗಿ ರಾಜ್ಯದಲ್ಲಿ ಅಂದು ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯೂರಪ್ಪ ನವರ ಬಹು ದೊಡ್ಡ ಕನಸು ನನಸಾಗಲು ಅಸಾಧ್ಯ ಎಂದರು.
ರಾಷ್ಟ್ರೀಯ ಹೆದ್ದಾರಿಗೆ ಸರಿಸಮಾನವಾಗಿ ಸತತ 5 ವರ್ಷದ ನಿರ್ವಹಣೆಯನ್ನು ಹೊಂದಿ ಅತ್ಯುತ್ತಮವಾದ ರಸ್ತೆಯು ಗ್ರಾಮೀಣ ಜನತೆಯ ಆಶಾಕಿರಣವಾಗಿದೆ. ಇದೀಗ ಲೋಕಸಭೆಯ ವಿಸರ್ಜನೆಯ ಸಂದರ್ಭದಲ್ಲಿ ಕೇಂದ್ರ ಮಂಜೂರಾತಿ ನೀಡಿದೆ. ಇದರಿಂದಾಗಿ ಶಿಕಾರಿಪುರ ವಲಯದಲ್ಲಿ 26.23 ಕೋಟಿ ವೆಚ್ಚದ 45 ಕಿ.ಮೀ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರ ಸಂಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ದೊರೆಯಲಿದೆ ಎಂದ ಅವರು, ತಾಲೂಕಿನಲ್ಲಿ ದೂಪದಹಳ್ಳಿ, ತರಲಘಟ್ಟ ಕ್ಯಾಂಪ್ವರೆಗಿನ 11 ಕಿ.ಮೀ. ಹಾಗೂ ತಡಗುಣಿ, ಜಂಬೂರು, ಹೊಸಕೊಪ್ಪ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಅಧಿಕಾರಿಗಳು ಗುತ್ತಿಗೆದಾರರು ಎಲ್ಲಾ ರೀತಿ ಕಾಳಜಿ ವಹಿಸಿ ರಸ್ತೆಯ ಗುಣಮಟ್ಟ ಕಾಪಾಡಿಕೊಂಡು ಗುಂಡಿ ಬೀಳದ ರೀತಿಯಲ್ಲಿ ಕಾಮಗಾರಿಯನ್ನು ಜಾಗ್ರತೆಯಿಂದ ನಿರ್ವಹಿಸಬೇಕಾಗಿದೆ. ಗ್ರಾಮೀಣ ಜನತೆಯ ಹಲವು ದಶಕದ ಸುಂದರ ರಸ್ತೆ ನಿರ್ಮಾಣದ ಕನಸು ಇದರಿಂದಾಗಿ ಸಾಕಾರಗೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ರಾಘವೇಂದ್ರ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಈ ಸಂದರ್ಭ ತಾ.ಪಂ. ಅಧ್ಯಕ್ಷೆ ಲೀಲಾವತಿ, ಜಿ.ಪಂ. ಸದಸ್ಯೆ ಶಾಂತಮ್ಮ, ಮುದ್ದನಹಳ್ಳಿ ಗ್ರಾ.ಪಂ. ಅಧ್ಯಕ್ಷ ಗಂಗಪ್ಪ, ತರಲಘಟ್ಟ ಗ್ರಾ.ಪಂ. ಅಧ್ಯಕ್ಷೆ ಚಂದ್ರಿಬಾಯಿ, ಶಿಶು ಅಭಿವೃದ್ಧಿ ಅಧಿಕಾರಿ ಲಿಂಗಾನಾಯ್ಕ್, ಮುಖಂಡ ಹಾಲಪ್ಪ, ನಾಗರಾಜಪ್ಪ,ಪ್ರಭಾಕರ್, ಸವಿತಾ ಮಲ್ಲಿಕಾರ್ಜುನ್, ಗೌರಮ್ಮ, ಬಿ.ಆರ್. ಮಲ್ಲಿಕಾರ್ಜುನಪ್ಪ, ಎಇಇ ಬಸವರಾಜ್ ಮತ್ತಿತರರು ಹಾಜರಿದ್ದರು.