ಮೂಢನಂಬಿಕೆ ಬೆನ್ನತ್ತಿರುವ ಅಕ್ಷರಸ್ಥರು: ಡಾ. ಶ್ರೀಕಂಠ ಕೂಡಿಗೆ
ಸಾಗರ: ಇತ್ತೀಚಿನ ವರ್ಷಗಳಲ್ಲಿ ಅನಕ್ಷರಸ್ಥರು ಜಾತಿವಾದಿಗಳಾಗುತ್ತಿದ್ದು, ಅಕ್ಷರಸ್ಥರು ಕೋಮುವಾದಿಗಳಾಗಿ ಮೂಢನಂಬಿಕೆಯನ್ನು ಬೆನ್ನತ್ತಿಕೊಂಡು ಹೋಗುತ್ತಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಶ್ರೀಕಂಠ ಕೂಡಿಗೆ ಹೇಳಿದರು.
ತಾಲೂಕಿನ ಮುರುಘಾ ಮಠದಲ್ಲಿ ಏರ್ಪಡಿಸಿದ್ದ 452ನೇ ಶಿವಾನುಭವಗೋಷ್ಠಿ ಉದ್ಘಾಟಿಸಿ ಮಾತನಾಡಿ, ನಂಬಿಕೆ ಮತ್ತು ಅಪನಂಬಿಕೆಗಳ ನಡುವೆ ತೊಯ್ದಾಡುತ್ತಿರುವ ಜೀವನವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಶಕ್ತಿ ನಮ್ಮಲ್ಲಿಯೇ ಇದ್ದು, ಅದನ್ನು ಅರ್ಥೈಸಿಕೊಳ್ಳಬೇಕಿದೆ ಎಂದರು. ನಮ್ಮ ಪುರಾತನ ಸಂಸ್ಕಾರ ಹಾಗೂ ಸಂಸ್ಕೃತಿ ಅಷ್ಟು ಸುಲಭವಾಗಿ ಅಳಿದು ಹೋಗಲು ಸಾಧ್ಯವಿಲ್ಲ. ನಮ್ಮ ಪ್ರಾಚೀನ ಸಂಸ್ಕಾರ ಹಾಗೂ ಸಂಸ್ಕೃತಿಗೆ ಅಷ್ಟೊಂದು ಮಹತ್ವ ಹಾಗೂ ಸತ್ವವಿದೆ. ಕೆಲವು ಸನ್ನಿವೇಶಗಳಲ್ಲಿ ಅವುಗಳು ನೇಪಥ್ಯಕ್ಕೆ ಸರಿದಂತೆ ಕಂಡರೂ, ಪುನಶ್ಚೇತನ ಕಂಡುಕೊಂಡ ಅನೇಕ ಘಟನೆಗಳು ನಮ್ಮ ಮುಂದಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು ಆಶೀರ್ವಚನ ನೀಡಿ, ಮನುಷ್ಯ ಮನುಷ್ಯರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕು. ಸೂಕ್ತ ಕಾಲದಲ್ಲಿ ಮನಸ್ಸಿಗೆ ಸಂಸ್ಕಾರ ಸಿಕ್ಕರೆ ಮನುಷ್ಯನಲ್ಲಿ ಐಕ್ಯವಾಗಿರುವ ದೋಷಗಳು ನಿವಾರಣೆಯಾಗಿ ಆತನಿಂದ ಸಮಾಜಕ್ಕೆ ಹೆಚ್ಚು ಕೊಡುಗೆ ಸಿಗುತ್ತದೆ. ಆಧ್ಯಾತ್ಮಿಕ ಚಿಂತನೆ ಮನಸ್ಸನ್ನು ಪ್ರಸನ್ನಗೊಳಿಸುತ್ತದೆ ಎಂದು ಹೇಳಿದರು.
ಸಿ.ಬಿ. ಶಾಂತವೀರಪ್ಪ, ಕೆ.ಟಿ. ಮಂಜಪ್ಪ, ಯೋವುಕೇಶ್ ಆರಾಧ್ಯ, ರಂಗನಾಥ್ ಹಾಜರಿದ್ದರು.