ಹೆಸರಿಗೆ ಹೋಬಳಿ; ತಪ್ಪದ ಗೋಳು
ಕ.ಪ್ರ.ವಾರ್ತೆ ಆಯನೂರು ಮಾ. 2
ಆಯನೂರು ಹೋಬಳಿ ಕೇಂದ್ರವಾಗಿ ಸರ್ಕಾರ ಘೋಷಣೆ ಮಾಡಿ ತಿಂಗಳುಗಳೆ ಕಳೆದರೂ ಇನ್ನು ಅದಕ್ಕೆ ಸಂಬಂಧಪಟ್ಟ ಕಚೇರಿಗಳು ಇಲ್ಲವಾಗಿದ್ದು, ಈಗಲೂ ಸರ್ಕಾರಿ ಕೆಲಸಗಳಿಗೆ ಹಾರನಹಳ್ಳಿ ಕೇಂದ್ರಕ್ಕೆ ಅಲೆದಾಟ ಮಾಡಬೇಕಾಗಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಆಯನೂರು ಹೋಬಳಿ ಅಭಿವೃದ್ಧಿ ವೇದಿಕೆ ನೇತೃತ್ವದಲ್ಲಿ ಗ್ರಾಮಸ್ಥರು ತಹಸೀಲ್ದಾರರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೆ, ತಕ್ಷಣವೇ ಹೋಬಳಿಗೆ ಸಂಬಂಧಪಟ್ಟ ಕಚೇರಿ ಪ್ರಾರಂಭಿಸುವಂತೆ ತಹಸೀಲ್ದಾರರಿಗೆ ಮನವಿ ಪತ್ರ ನೀಡಿದರು.
ಅಸಮಾಧಾನ: ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮವನ್ನು ಹೋಬಳಿ ಕೇಂದ್ರವಾಗಿ ಸರ್ಕಾರ ಗುರುತಿಸಿ ಆದೇಶ ಹೊರಡಿಸಿತ್ತು. ಇದು ಗ್ರಾಮಸ್ಥರಿಗೆ ಖುಷಿ ತಂದ ವಿಚಾರ. ಜನರ ಹಾಗೂ ರೈತರ ಹಿತದೃಷ್ಟಿಯಿಂದ ಹೊಸದಾಗಿ ಆಯನೂರು ಹೋಬಳಿ ಕೇಂದ್ರವಾಗಿ ಘೋಷಣೆಯಾದಾಗ ಜನರು ಪಟಾಕಿ ಸಿಡಿಸಿ ಸಂತೋಷ ವ್ಯಕ್ತಪಡಿಸಿದ್ದರು ಆದರೆ, ಆದೇಶ ಕೇವಲ ಆದೇಶವಾಗಿಯೇ ಉಳಿದಿರುವುದು ಬೇಸರದ ಸಂಗತಿ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಗ್ರಾಮಗಳು ಕೇಂದ್ರದ ವ್ಯಾಪ್ತಿಗೆ ಬರುತ್ತಿದ್ದು, ಆದಷ್ಟು ಶೀಘ್ರವೇ ಹೋಬಳಿ ಕೇಂದ್ರ ಪ್ರಾರಂಭಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಇಲ್ಲವಾದರೆ ಬೀದಿಗಿಳಿದು ಹೋರಾಡಬೇಕಾಗುತ್ತದೆ ಎಂದು ತಹಸೀಲ್ದಾರರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಶಿವಶಂಕರ ನಾಯರ್, ಭಾಗ್ಯ ನರಸಿಂಹ, ಪ್ರಮುಖರಾದ ಕುಪೇಂದ್ರ, ಜಯರಾಂ ನಾಯ್ಕ, ತಿಮ್ಮಾಚಾರ್, ಭೀಮಣ್ಣ, ಪ್ರಭಾಕರ, ಪರಶುರಾಂ, ನಾಗೇಂದ್ರ, ಅನಂತ ಪದ್ಮನಾಭ ಕಿಣಿ ಇನ್ನೂ ಅನೇಕರಿದ್ದರು.
ಇಂದು ಹೋರಾಟ
ಹೋಬಳಿ ಕಚೇರಿ ಸ್ಥಾಪಿಸಲು ಮೀನಮೇಷ ಎಣಿಸುತ್ತಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ತಾಲೂಕು ಆಡಳಿತದ ಗಮನ ಸೆಳೆದಿದ್ದಾಗಿದೆ. ಇದೀಗ ಹೋರಾಟ ನಡೆಸುವುದು ಅನಿವಾರ್ಯ ಎಂದು ಗ್ರಾಮದ ಪ್ರಮುಖರಾದ ಕುಪೇಂದ್ರ ತಿಳಿಸಿದ್ದಾರೆ.
ಸೋಮವಾರ ಆಯನೂರಿನಲ್ಲಿ ಹೋರಾಟ ನಡೆಸಲು ನಿಶ್ಚಯಿಸಲಾಗಿದೆ. ಹೋರಾಟ ಮೂಲಕ ಎರಡನೇ ಹಂತದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸಲಾಗುತ್ತದೆ. ಇದಕ್ಕೂ ಬಗ್ಗದೆ ಇದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದವರು ಎಚ್ಚರಿಸಿದ್ದಾರೆ.