ಇಂದಿನಿಂದ ಶಿವಮೊಗ್ಗ ಮಾರಿಕಾಂಬಾ ಜಾತ್ರೆ
ಕ.ಪ್ರ.ವಾರ್ತೆ ಶಿವಮೊಗ್ಗ ಮಾ.3
ಎರಡು ವರ್ಷಗಳಿಗೊಮ್ಮೆ ವೈಭವಯುತವಾಗಿ ನಡೆಯುವ ನಗರದ ಶಕ್ತಿದೇವತೆ ಶ್ರೀಮಾರಿಕಾಂಬೆ ಜಾತ್ರೆಗೆ ಸಿದ್ಧತೆ ನಡೆಸಿದೆ. ಮಂಗಳವಾರದಿಂದ 4 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಎಲ್ಲಾ ಜನಾಂಗದವರೂ ಭಾಗವಹಿಸುವುದು ವಿಶೇಷ.
ಸುಮಾರು 500 ವರ್ಷಗಳ ಇತಿಹಾಸವಿರುವ ಈ ಜಾತ್ರೆಯು ಸಾಗರ ಮಾರಿಜಾತ್ರೆಯ ನಂತರ ಕೆಲವೇ ದಿನಗಳಲ್ಲಿ ನಡೆಯುವುದು. ಶಿವಮೊಗ್ಗ ಜಾತ್ರೆಯ ನಂತರ ಸಿರ್ಸಿ ಮಾರಿಕಾಂಬ ಜಾತ್ರೆ ನಡೆಯುವುದು ಸಂಪ್ರದಾಯ.
ಮಾರಿಕಾಂಬೆಯನ್ನು ಮಂಗಳವಾರ ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿ ಕೂರಿಸಲಾಗುವುದು. ಇದು ಮಾರಿಕಾಂಬೆ ತವರುಮನೆ. ಇಲ್ಲಿಗೆ ಬ್ರಾಹ್ಮಣ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಜೈನ ಧರ್ಮದವರೂ ಆಗಮಿಸಿ ಪೂಜೆ ಸಲ್ಲಿಸುವರು. ನಂತರ ವಿಜೃಂಭಣೆಯ ಮೆರವಣಿಗೆಯೊಂದಿಗೆ ಮಾರಿ ಗದ್ದುಗೆಗೆ ತರಲಾಗುವುದು.
ಗಾಂಧಿ ಬಜಾರಿನ ಮುಖ್ಯ ರಸ್ತೆಯಲ್ಲಿ ಇದಕ್ಕಾಗಿ ಬೃಹತ್ ಮಂಟಪ ನಿರ್ಮಿಸಲಾಗಿದೆ. ಭಾರಿ ಸಂಖ್ಯೆಯಲ್ಲಿ ದೇವಿಯ ದರ್ಶನಕ್ಕೆ ಜನರು ಆಗಮಿಸುವ ನಿರೀಕ್ಷೆ ಇದ್ದು, ಇದಕ್ಕಾಗಿ ಪೊಲೀಸ್ ಇಲಾಖೆ ಸಹಕಾರ ನೀಡಿದೆ. ಮಾರಿ ಗದ್ದುಗೆ ಸುತ್ತಮುತ್ತ ಜಾತ್ರೆಯ ಸಂಭ್ರಮವೇ ಮನೆ ಮಾಡಿದೆ.
ಇಡೀ ಕೋಟೆ ಪ್ರದೇಶವು ಅಂಗಡಿಗಳಿಂದ ತುಂಬಿ ಹೋಗಿದೆ. ಬೇರೆ ಊರುಗಳ ಬಂಧುಗಳು ಶಿವಮೊಗ್ಗದ ಸ್ನೇಹಿತರ ಮನೆಗೆ ಆಗಮಿಸುತ್ತಿದ್ದು, ನಗರದ ವಾಣಿಜ್ಯ ಪ್ರದೇಶವು ಕಿಕ್ಕಿರಿದಿದೆ.
ಕಾರ್ಯಕ್ರಮಗಳು: ಮಾ.4ರಂದು ಬೆಳಗ್ಗೆ 5 ಗಂಟೆಗೆ ಸಮಿತಿ ವತಿಯಿಂದ ಮಂಗಳವಾದ್ಯದೊಂದಿಗೆ ಬಿ.ಬಿ. ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಅಹ್ವಾನಿಸಲಾಗುತ್ತದೆ. ಆ ಸಮಾಜದ ಮುತೈದೆಯರು ಮಂಗಳದ್ರವ್ಯಾದಿಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದೊಂದಿಗೆ ಗಾಂಧಿಬಜಾರಿನ ತವರು ಮನೆಯಲ್ಲಿರುವ ಶ್ರೀಮಾರಿಕಾಂಬೆಗೆ ಉಡಿತುಂಬಿ, ಪೂಜೆ ಸಲ್ಲಿಸುತ್ತಾರೆ. ತದನಂತರ ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆ ಆರಂಭಿಸುತ್ತಾರೆ.
ಮಂಗಳವಾರ ರಾತ್ರಿ 10 ಗಂಟೆ ನಂತರ ಅಮ್ಮನವರ ಉತ್ಸವವು ಮಾರಿ ಗದ್ದುಗೆ ಕಡೆಗೆ ಸಾಗುತ್ತದೆ.
ಬುಧವಾರದಿಂದ ಇಲ್ಲಿಯೇ ಪೂಜಾ ಕಾರ್ಯಗಳು ನಡೆಯುತ್ತವೆ. ಜಾತ್ರೆಯ ಕೊನೆಯ ದಿನವಾದ ಮಾ.7ರ ಶನಿವಾರ ರಾತ್ರಿ 9 ಗಂಟೆಗೆ ಶ್ರೀಮಾರಿಕಾಂಬೆಯ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ, ಮೆರವಣಿಗೆ ಮೂಲಕ ವನಕ್ಕೆ ಕಳಿಸುವ ಕಾರ್ಯಕ್ರಮ ನಡೆಯುವುದು.
ಸಿದ್ಧತೆ: ಮಾರಿಕಾಂಬ ಜಾತ್ರಾ ಸಮಿತಿಯು ಜಾತ್ರೆ ಯಶಸ್ಸಿಗೆ ವ್ಯಾಪಕ ಸಿದ್ಧತೆ ನಡೆಸಿದೆ. ಗಾಂಧಿ ಬಜಾರ್ ಹಾಗೂ ಮಾರಿ ಗದ್ದುಗೆಯಲ್ಲಿ ಹಲವು ವ್ಯವಸ್ಥೆಗಳನ್ನು ಮಾಡಿದೆ. ವಿವಿಧ ಜನಾಂಗದವರಿದೆ ಪೂಜಾ ವ್ಯವಸ್ಥೆ ಕಲ್ಪಿಸಿದೆ. ಜಾತ್ರೆ ಪ್ರಯುಕ್ತ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸಹ ನಡೆಯಲಿವೆ. ಪ್ರತಿದಿನ ಪ್ರಸಾದ ವಿನಿಯೋಗವಿರುತ್ತದೆ.
5 ದಿನಗಳ ಕಾಲ ಶಿವಮೊಗ್ಗ ನಗರವು ಜಾತ್ರೆಯ ಖುಷಿಯಲ್ಲಿ ಸಂಭ್ರಮಿಸಲಿದೆ. ಮತ್ತೊಂದು ಮಾರಿ ಜಾತ್ರೆ ಬರುವುದು ಇನ್ನೆರಡು ವರ್ಷಗಳ ನಂತರವೇ. ಹಾಗಾಗಿ, ನಗರದ ಜನತೆಯೂ ಸಹ ಜಾತ್ರೆ ಆರಂಭವಾಗುವುದಕ್ಕೆ ಕಾತರದಿಂದ ಕಾಯುತ್ತಿದ್ದಾರೆ.
ತೀರ್ಥಹಳ್ಳಿಯಲ್ಲಿಯೂ ಜಾತ್ರೋತ್ಸವ
ಕ.ಪ್ರ.ವಾರ್ತೆ ತೀರ್ಥಹಳ್ಳಿ ಮಾ.3
ಇಂದಿನಿಂದ ತೀರ್ಥಹಳ್ಳಿಯಲ್ಲಿ ಮಾರಿಕಾಂಬಾ ಜಾತ್ರೆ ವೈಭವದಿಂದ ನಡೆಯಲಿದೆ. ಪ್ರತಿ 2 ವರ್ಷಕ್ಕೊಮ್ಮೆ ತೀರ್ಥಹಳ್ಳಿಯ ಮಾರಿಕಾಂಬ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಬಾಲದ ಜಾತ್ರೆ ಮಾ.4 ರಿಂದ ಪ್ರಾರಂಭಗೊಂಡು ಮಾ.12 ರವರೆಗೆ 7 ದಿನಗಳ ಕಾಲ ವೈಭವದಿಂದ ನೆರವೇರಲಿದೆ.ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನೆರವೇರಲಿವೆ. ಪ್ರತಿ ನಿತ್ಯ ಹೆಸರಾಂತ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 4ರಂದು ಜಾತ್ರೆ ಸಾರುವುದು, ಧಾರ್ಮಿಕ ಕಾರ್ಯಕ್ರಮಗಳ ನಂತರ ಸಂಜೆ 6 ಗಂಟೆಯಿಂದ ಖ್ಯಾತ ಮಂಗಳವಾದ್ಯ ಕಲಾವಿದರಿಂದ ನಾದ ವೈವಿಧ್ಯ ನಡೆಯಲಿದೆ.
5 ರಂದು ಬೆಳಗ್ಗೆ ಪಾರಾಯಣ, ಮಧ್ಯಾಹ್ನ ಜಾತ್ರಾ ವಿಶೇಷ ಪೂಜೆ, ಸಂಜೆ 6 ಗಂಟೆಯಿಂದ ಸ್ಥಳೀಯ ಕಲಾವಿದರಿಂದ ನೃತ್ಯ ವೈಭವ. ಸುಮುಖ ಮತ್ತು ರಾಜರಾಜೇಶ್ವರಿ ನೃತ್ಯ ಶಾಲಾ ವಿದ್ಯಾರ್ಥಿಗಳು ತಮ್ಮ ನೃತ್ಯ ಕೌಶಲ್ಯ ತೋರಿಸುವರು. 6ರಂದು ಧಾರ್ಮಿಕ ಕಾರ್ಯಕ್ರಮಗಳು, ನಂತರ ಸಂಜೆ ವಾಯ್ಸ್ ಆಫ್ ತೀರ್ಥಹಳ್ಳಿ ಬಳಗದ ಬಾಲ ಪ್ರತಿಭೆಗಳಿಂದ ಸಂಗೀತ ಕಾರ್ಯಕ್ರಮವಿದೆ.