ಡಾ.ಅಂಬೇಡ್ಕರ್, ಪ್ರೊ.ಕೃಷ್ಣಪ್ಪ ವಿಚಾರಧಾರೆ ಜನರ ತಲುಪಲಿ
ಶಿವಮೊಗ್ಗ: ಅಂಬೇಡ್ಕರ್, ಪ್ರೊ. ಬಿ. ಕೃಷ್ಣಪ್ಪ ವಿಚಾರಧಾರೆಗಳು ಎಲ್ಲರನ್ನೂ ತಲುಪಬೇಕು. ಈ ದಿಸೆಯಲ್ಲಿ ಅಂಬೇಡ್ಕರ್, ಪ್ರೊ. ಬಿ.ಕೃಷ್ಣಪ್ಪ ಅವರ ಜೀವನ ಪರಿಚಯಿಸುವ ಕೃತಿಗಳು, ದೇವನೂರು ಮಹದೇವ ಅವರ ಎದೆಗೆ ಬಿದ್ದ ಅಕ್ಷರ ಕೃತಿಗಳನ್ನು ನಾಗರಿಕರಿಗೆ ತಲುಪಿಸುವ ಕೆಲಸ ಮಾಡಲಾಗುವುದೆಂದು ಗ್ರಂಥಾಲಯ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಮಹಾನಗರ ಪಾಲಿಕೆಯು ನಗರದ ಹೊರವಲಯದಲ್ಲಿರುವ ಆಲ್ಕೊಳ ವೃತ್ತಕ್ಕೆ ಪ್ರೊ. ಬಿ. ಕೃಷ್ಣಪ್ಪ ವೃತ್ತ ಎಂದು ನಾಮಕರಣ ಮಾಡಿದ್ದು, ಸೋಮವಾರ ನಾಮಫಲಕ ಅನಾವರಣಗೊಳಿಸಿದ ಅವರು, ಅಂಬೇಡ್ಕರ್-ಕೃಷ್ಣಪ್ಪ ಅವರ ಹೋರಾಟದ ಜೀವನ ವಿಚಾರಧಾರೆಗಳನ್ನು ಇವತ್ತಿನ ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಕೃತಿಗಳನ್ನು ಜನರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ದಲಿತ ಸಂಘರ್ಷ ಸಮಿತಿಯು ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಅಹೋರಾತ್ರಿ ಧರಣಿ ನಡೆಸಿದ್ದು, ಈ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಸೋಮವಾರ ವೃತ್ತಕ್ಕೆ ನಾಮಕರಣ ಮಾಡಲಾಗಿದೆ ಎಂದರು.
ಮೀಸಲಾತಿ ವಿರುದ್ಧ 1960ರಿಂದಲೂ ಕೆಲ ಸಂಘಟನೆಗಳು ಹೋರಾಟ ನಡೆಸಿಕೊಂಡು ಬಂದವು. 10 ವರ್ಷ, 25 ವರ್ಷದ ನಂತರ ಮೀಸಲಾತಿ ಕೊಡುವುದು ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ದಲಿತರನ್ನು ಎದುರುಹಾಕಿಕೊಂಡರೆ ದೇಶ ಆಳಲು ಸಾಧ್ಯವಿಲ್ಲ ಎಂಬುದು ಅರಿವಾದ ನಂತರ ಮೀಸಲಾತಿ ಪರವಾಗಿ ಮಾತನಾಡುತ್ತಿದ್ದಾರೆ. ಈ ಮೂಲಕ ದಲಿತರ ಓಲೈಕೆಗೆ ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್, ಕಾಂಗ್ರೆಸ್ ಸರ್ಕಾರ ದಲಿತರ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ. ಹರಿರದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ನೀಡಿದೆ ಎಂದರು.
ಪಾಲಿಕೆ ಮೇಯರ್ ಖುರ್ಷಿದಾ ಬಾನು, ಉಪಮೇಯರ್ ರೇಖಾ ಚಂದ್ರಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎನ್. ಮಹೇಶ್, ದಸಂಸ ರಾಜ್ಯ ಸಂಘಟನಾ ಸಂಚಾಲಕ, ಜಿಲ್ಲಾ ಸಂಚಾಲಕ ಹಾಲೇಶಪ್ಪ ಇತರರಿದ್ದರು.