ಬಾಗಲಕೋಟೆಯಿಂದ ಸ್ಪರ್ಧೆ: ಬಿದರಿ
ಕ.ಪ್ರ.ವಾರ್ತೆ ್ಣ ಶಿವಮೊಗ್ಗ ್ಣ ಮಾ. 4
ಬಾಗಲಕೋಟೆ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಜನಶಕ್ತಿ ಪಕ್ಷದ ಸಂಸ್ಥಾಪಕ, ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಆರಂಭಗೊಂಡ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವದಲ್ಲಿ ಜನಸ್ಪಂದನ ವೇದಿಕೆ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ತಂಪುಪಾನಿಯ ವಿತರಣಾ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ ತಯಾರಿ ನಡೆಯುತ್ತಿದೆ ಎಂದು ಹೇಳಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಕಣದಲ್ಲಿರುತ್ತಾರೆ ಎಂದರು.
ಜನವರಿ 23 ಸುಭಾಷ್ ಚಂದ್ರಬೋಸ್ ಜಯಂತಿಯಂದು ಜನಶಕ್ತಿ ಪಕ್ಷ ಸ್ಥಾಪನೆ ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಪಕ್ಷಸಂಘಟನೆ ಕಾರ್ಯ ಪ್ರಗತಿಯಲ್ಲಿದೆ. 25 ಲಕ್ಷ ಕಾರ್ಯಕರ್ತರ ನೋಂದಣಿ ಮಾಡಿಸಿಕೊಳ್ಳುವ ಜತೆಗೆ 1ಲಕ್ಷ ಸಕ್ರಿಯ ಕಾರ್ಯಕರ್ತರ ಪಡೆ ಸಿದ್ಧಪಡಿಸುವ ಗುರಿಯೊಂದಿಗೆ ಕಾರ್ಯೋನ್ಮುಖರಾಗಿರುವುದಾಗಿ ಹೇಳಿದರು.
ಕಳಂಕಿತರಿಗೆ ನಮ್ಮ ಪಕ್ಷದಲ್ಲಿ ಅವಕಾಶವಿಲ್ಲ ಎಂದ ಅವರು, ಭ್ರಷ್ಟಾಚಾರರಹಿತವಾಗಿ ಪಕ್ಷವನ್ನು ಕಟ್ಟಲಾಗುತ್ತಿದೆ. ಇದಕ್ಕೆ ನಾಡಿನ ಜನರ ಸಹಕಾರ ಅವಶ್ಯಕ ಎಂದರು.
ಬೇರೆ ಪಕ್ಷಗಳಿಗಿಂತ ನಮ್ಮ ಪಕ್ಷ ಭಿನ್ನವಾಗಿದ್ದು, ಯಾರನ್ನೋ ಗೆಲ್ಲಿಸಲು ಪಕ್ಷ ಕಟ್ಟಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ ಅವರು, ಬಾಗಲಕೋಟೆ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆಗೆ ತಯಾರಿ ನಡೆಸುತ್ತಿರುವುದಾಗಿ ತಿಳಿಸಿದರು.