ಹಾಸ್ಟೆಲ್ ಊಟ ಬಾಯಲ್ಲಿ ಇಡುವಂತಿಲ್ವಲ್ರೀ...
ಕ.ಪ್ರ.ವಾರ್ತೆ ಶಿವಮೊಗ್ಗ ಮಾ.4
ನಗರದ ಕೋಟೆ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿ 150 ವಿದ್ಯಾರ್ಥಿನಿಯರು ಇರಬೇಕಾದ ಕಡೆ 350 ಮಂದಿ ಇದ್ದಾರೆ. ಬೆಳಗ್ಗೆ ಶೌಚೌಲಯದ ಮುಂದೆ 150 ಮಂದಿ ಕ್ಯೂ ನಿಂತಿರುತ್ತಾರೆ. ಊಟಕ್ಕೆ ಸರತಿ ನಿಲ್ಲಲಿ, ಸ್ನಾನಕ್ಕೆ ನಿಲ್ಲಲಿ. ಶೌಚಕ್ಕೆ ನಿಲ್ಲುವುದೆಂದರೆ ಏನ್ರಿ...
ನಗರದಲ್ಲಿ ಮಂಗಳವಾರ ಪರಿಶಿಷ್ಟ ಜಾತಿ-ವರ್ಗದವರ ಕುಂದುಕೊರತೆ ಆಲಿಸಿದ ನಂತರ ಮಧ್ಯಾಹ್ನ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಅಶ್ವತ್ಥನಾರಾಯಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ.
ಬೆಳಗ್ಗೆ ಈ ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿದ್ದ ಅವರು ಅಲ್ಲಿರುವ ಸಮಸ್ಯೆಯನ್ನು ಬಿಡಿಸಿಟ್ಟರು. ಇದು ಸಮಾಜ ಕಲ್ಯಾಣ ಇಲಾಖೆಯ ಸ್ವಂತ ಕಟ್ಟಡ ಎನ್ನುತ್ತೀರಿ. ಬಾಡಿಗೆ ಕಟ್ಟಡವಾಗಿದ್ದರೆ ಶೌಚಾಲಯ ಸಮಸ್ಯೆ ಇದೆ ಎನ್ನಬಹುದು. ಆದರೆ ಸ್ವಂತ ಕಟ್ಟಡದಲ್ಲಿ ಶೌಚಾಲಯ ಕಲ್ಪಿಸಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು.
ಕಳಪೆ ಆಹಾರ: ಒಂದೊಂದು ಕೋಣೆಯಲ್ಲಿ 15-20 ವಿದ್ಯಾರ್ಥಿನಿಯರಿದ್ದಾರೆ. ಅವರಿಗೆ ಮಲಗುವುದಕ್ಕೆ ಸಾಧ್ಯವೇ ಇಲ್ಲ. ನಾಲ್ಕೈದು ಹುಡುಗಿಯರು ಹಾಸ್ಟೆಲ್‌ನಲ್ಲಿ ಇರಲಿಲ್ಲ. ಅವರು ರಜೆ ಚೀಟಿ ಕೊಟ್ಟಿದ್ದಾರೆ ಬರುವುದಿಲ್ಲ ಎಂದು ಎಲ್ಲಿಯಾದರೂ ಸಹಿ ಮಾಡಿದ್ದಾರಾ ಎಂದು ಕೇಳಿದರೆ ಯಾರಿಗೂ ಗೊತ್ತಿಲ್ಲ. ಹೆಣ್ಣುಮಕ್ಕಳ ಜವಾಬ್ದಾರಿ ಹೊರುವುದು ಹೀಗೆಯೇ ಎಂದು ಕೇಳಿದರು. ಇಲ್ಲಿ ಸಿದ್ಧಪಡಿಸುವ ಊಟವನ್ನು ಬಾಯಲ್ಲಿ ಇಡುವುದಕ್ಕೆ ಆಗುವುದಿಲ್ಲ. ಇಷ್ಟು ಕಳಪೆ ಆಹಾರ ನೀಡುತ್ತೀರಾ ಎಂದರು.
ಸಮಿತಿ ರಚನೆ: ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಅವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿರುವ ಎಲ್ಲಾ ಹಾಸ್ಟೆಲ್‌ಗಳ ಸ್ಥಿತಿ ಪರಿಶೀಲನೆಗೆ ತಮ್ಮ ನೇತೃತ್ವದಲ್ಲಿ ಮೂವರು ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಜಿಲ್ಲಾ ಕಾರ್ಮಿಕ ಅಧಿಕಾರಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಈ ಸಮಿತಿಯಲ್ಲಿದ್ದಾರೆ. ಈಗಾಗಲೇ ಇವರು ಮಧ್ಯಂತರ ವರದಿ ನೀಡಿದ್ದು, ಅಂತಿಮ ವರದಿ ಬಂದ ನಂತರ ಸುಧಾರಣೆಗಾಗಿ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಆಯೋಗದ ಅಧ್ಯಕ್ಷ ಅಶ್ವತ್ಥನಾರಾಯಣ್, ವಸತಿ ನಿಲಯದ ಮೇಲ್ವಿಚಾರಣೆ ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದನ್ನು ಸಹಿಸಿಕೊಳ್ಳಲಾಗುವುದಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು ಜಿಲ್ಲೆಯ ಎಲ್ಲಾ ವಸತಿ ನಿಲಯಗಳಿಗೆ ಭೇಟಿ ನೀಡಿ, ಸಮಸ್ಯೆಯ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ತಾಲೂಕು ಮಟ್ಟದ ಅಧಿಕಾರಿಗಳೂ ಸಹ ವಸತಿ ನಿಲಯಗಳಿಗೆ ಭೇಟಿ ನೀಡಿ ಸಮಸ್ಯೆಯ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆಂದರು.
ಪ್ರಗತಿ ಕುಂಠಿತ: ಪರಿಶಿಷ್ಟರಿಗೆ ಮೀಸಲಾದ ಶೇ.22.75 ಅನುದಾನ ಸಮರ್ಪಕವಾಗಿ ಬಳಕೆಯಾಗದಿರುವುದಕ್ಕೆ ಆಯೋಗದ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಬಾಕಿ ಅವಧಿಯಲ್ಲಿ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಸರ್ಕಾರಗಳು ಕಾಲಕಾಲಕ್ಕೆ ಅನುಷ್ಠಾನಗೊಳಿಸುವ ಯೋಜನೆಗಳ ಕುರಿತಂತೆ ಸಂಬಂಧಿತ ಇಲಾಖಾ ಅಧಿಕಾರಿಗಳು ಪರಸ್ಪರ ಚರ್ಚಿಸಿ ಕಾರ್ಯಗತಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಸಲಾಗುವ ಪರಿಶಿಷ್ಟ ಜಾತಿ ವರ್ಗಗಳ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ನಡೆಸುವಂತೆ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಬಗೆಹರಿಸುವಂತಾದರೆ ಸಮಸ್ಯೆಗಳು ಸಹಜವಾಗಿ ಇಳಿಮುಖವಾಗುತ್ತವೆ ಎಂದರು.
ಗ್ಯಾಸ್ ಬೆಲೆ: ಬಿಸಿಎಂ ಇಲಾಖಾ ವತಿಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಅರ್ಹ ಫಲಾನುಭವಿಗಳಿಗಾಗಿ ವಿತರಿಸಲಾಗುತ್ತಿರುವ ಅಡುಗೆ ಅನಿಲದ ಸಿಲಿಂಡರ್ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಗ್ಯಾಸ್ ವಿತರಕರನ್ನು ಸಂಪರ್ಕಿಸಿ ಸರ್ಕಾರ ನಿಗದಿಪಡಿಸಿದ ದರಕ್ಕೆ ಸಿಲಿಂಡರನ್ನು ಪೂರೈಸಲು ಸೂಚಿಸುವಂತೆ ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖಾ ಯೋಜನೆಗಳ ಪ್ರಗತಿ ಪರಿಶೀಲಿಸಲಾಯಿತು. ಜಿಲ್ಲಾ ಆಯೋಗದ ಕಾರ್ಯದರ್ಶಿ ಪದ್ಮ, ಸದಸ್ಯ ಸತ್ಯೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್, ಜಿ.ಪಂ. ಉಪಕಾರ್ಯದರ್ಶಿಗಳು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಬಾಲರಾಜ್ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಮಸ್ಯೆಗಳ ಮಹಾಪೂರ
ಬೆಳಗಿನ ಅವಧಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಲವು ಸಮಸ್ಯೆಗಳನ್ನು ಆಯೋಗದ ಅಧ್ಯಕ್ಷರ ಗಮನಕ್ಕೆ ತಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ.ಗುರುಮೂರ್ತಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸಾಲಕ್ಕೆ ಅರ್ಜಿ ಹಾಕಿ ಆಯ್ಕೆ ಆದವರಿಗೆ ವಿವಿಧೆಡೆಯಿಂದ ನಿರಾಕ್ಷೇಪಣಾ ಪತ್ರ ತರುವಂತೆ ಹೇಳುತ್ತಾರೆ. ಈ ನಿಯಮ ಬೇರೆ ಯಾವ ಜಿಲ್ಲೆಯಲ್ಲಿಯೂ ಇಲ್ಲ. ಹಾಸ್ಟೆಲ್‌ಗಳಿಗೆ ನೀಡುವ ಸಿಲಿಂಡರ್‌ಗೆ ವಾಣಿಜ್ಯ ದರ ವಿಧಿಸುವುದರಿಂದ ಅನುದಾನ ನಷ್ಟವಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆಯಂತೆ ಭೂಮಿ ಹಕ್ಕು ನೀಡುವಾಗ ಪರಿಶಿಷ್ಟ ಜಾತಿ-ಪಂಡಗಡದವರ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮವು ವಾಹನ ವಿತರಣೆ ಗುರಿ ಹೆಚ್ಚಿಸಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾಡುವ ಸಮಿತಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡುವ ಬದಲು ಡಿಸಿ ಅಥವಾ ಸಿಇಓ ಅಧ್ಯಕ್ಷರಾಗುವುದು ಸೂಕ್ತ ಎಂದರು.
ಪಡುವಳ್ಳಿ ಹರ್ಷೇಂದ್ರ ಕುಮಾರ್, ಸಾಗುವಳಿ ಚೀಟಿ ಇದ್ದರೂ ಸಹ ಮಲೆನಾಡು ಭಾಗದಲ್ಲಿ ಒಕ್ಕಲೆಬ್ಬಿಸಲಾಗುತ್ತಿದೆ ಎಂದರು.
ಪ್ರಭು ಎಚ್.ಎನ್., ಮಹಾನಗರ ಪಾಲಿಕೆಯಲ್ಲಿ ಪರಿಶಿಷ್ಟರ ಅನುದಾನ ಸೂಕ್ತ ಬಳಕೆ ಆಗುತ್ತಿಲ್ಲ ಎಂದರೆ, ಜಯಾನಾಯ್ಕ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳು ಪರಿಶಿಷ್ಟರಿಗೆ ಸಾಲ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು. ಮಾದಿಗ ದಂಡೋರ ಸಮಿತಿಯ ಸಿ.ಮೂರ್ತಿ, ಸದಾಶಿವ ಆಯೋಗ ವರದಿಯನ್ನು ಜಾರಿಗೆ ತರಬೇಕು ಎಂದರು.