ಅವ್ಯವಹಾರ: ಬಂಧನಕ್ಕೆ ಆಗ್ರಹ
ಶಿವಮೊಗ್ಗ: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಅಕ್ರಮ ಮಂಜೂರಾತಿಯಲ್ಲಿ ಶಾಮೀಲಾದವರನ್ನು ಕೂಡಲೇ ಬಂಧಿಸುವಂತೆ ಅಣ್ಣಾ ಹಜಾರೆ ಹೋರಾಟ ಸಮಿತಿ ಮತ್ತು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿ ಮನವಿ ಅರ್ಪಿಸಿದ ಹೋರಾಟ ಸಮಿತಿ ಪ್ರಮುಖರು, ಸೈಟ್ ಪಡೆದವರ ಕುರಿತಂತೆ ಕೆಲವು ಮಾಹಿತಿ ಕಲೆಹಾಕಿ ತನಿಖೆ ನಡೆಸುವಂತೆಯೂ ಸಲಹೆ ನೀಡಿತು.
ಯಾರೆಲ್ಲಾ ಸರ್ಕಾರಿ ಉದ್ಯೋಗದವರು ನಿವೇಶನ ಪಡೆದಿದ್ದಾರೆ, ಬೇರೆ ಕಡೆ ನಿವೇಶನ ಇದ್ದರೂ ಇಲ್ಲಿ ನಿವೇಶನ ಪಡೆದಿದ್ದಾರೆ, ಗಂಡ-ಹೆಂಡತಿ ಇಬ್ಬರೂ ಸೈಟ್ ಪಡೆದಿರುವ ಪ್ರಕರಣ ಸೇರಿದಂತೆ ವಿವಿಧ ಮಾಹಿತಿ ಕಲೆ ಹಾಕಿ ವರದಿಯೊಂದನ್ನೇ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ನೀಡಿತು.
146 ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಸೂಕ್ಷ್ಮವಾಗಿ ತನಿಖೆ ನಡೆಸುವ ಅಗತ್ಯವಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಕ್ರಮಕ್ಕೆ ಆಗ್ರಹ: ಹೆಂಡತಿ ಹೆಸರಿನಲ್ಲಿ ನಿವೇಶನಕ್ಕೆ ಅರ್ಜಿ ಹಾಕಬೇಕಾದರೆ ಗಂಡನ ಹೆಸರಿನಲ್ಲಿ ನಿವೇಶನ ಹೊಂದಿದ್ದಾರೆಯೇ ಎಂಬ ಬಗ್ಗೆ ಜಂಟಿ ಕೇಳಿ ಪ್ರಮಾಣ ಪತ್ರ ಅವಶ್ಯವಿರುವುದರಿಂದ ಈ ಬಗ್ಗೆ ಪರಿಶೀಲಿಸುವ ಅಗತ್ಯವಿದೆ. ಅದೇ ರೀತಿ ತಪ್ಪು ವಿಳಾಸಕೊಟ್ಟು ಪಡೆದಿರುವ ನಿವೇಶನಗಳ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆಗೆ ಒಳಪಡಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಯೊಬ್ಬ ಮಾಜಿ ಸೈನಿಕರ ದಾಖಲೆಗಳನ್ನು ಪರಿಶೀಲಿಸಿ ದಾಖಲೆ ಸರಿ ಇಲ್ಲದಿದ್ದರೆ ಖುದ್ದಾಗಿ ಅವರನ್ನು ಕರೆಸಿ ಸೂಕ್ತ ಕ್ರಮಕೈಗೊಳ್ಳಬೇಕು, ಪರಿಶಿಷ್ಟ ಜಾತಿ, ಪಂಗಡದವರಿಗೆ ಮತ್ತು ಹಿಂದುಳಿದ ವರ್ಗದವರಿಗೆ ನಿವೇಶನ ಹಂಚಿಕೆ ಮಾಡಿದ್ದು, ಅವರ ದಾಖಲಾತಿಗಳನ್ನು ಹಾಗೂ ಅವರ ಜಾತಿ ಪ್ರಮಾಣ ಪತ್ರದ ಪರಿಶೀಲನೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಸೂಡಾ ಅಧ್ಯಕ್ಷರಿಗೆ, ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ವಿವೇಚನಾ ಕೋಟಾದಡಿ ನಿವೇಶನಗಳನ್ನು ಹಂಚಿರುವ ಬಗ್ಗೆ ಮಾಹಿತಿ ಇದ್ದು, ಇದರ ಬಗ್ಗೆ ತನಿಖೆ ನಡೆಸಬೇಕು. ಈ ಅಕ್ರಮ ಮಂಜೂರಾತಿಯಲ್ಲಿ ಶಾಮೀಲಾಗಿರುವ ಮಾಜಿ ಅಧ್ಯಕ್ಷರು, ಸದಸ್ಯರ ಹಾಗೂ ಆಯುಕ್ತರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ಕಲ್ಲೂರು ಮೇಘರಾಜ್, ಟಿ.ಎಂ.ಅಶೋಕ್ ಯಾದವ್, ಜಿ.ವಿ. ಮಂಜುಳ, ಮಂಜುನಾಥ, ಮಹೇಶ್, ಆನಂದ್, ಸುಬ್ರಹ್ಮಣ್ಯ ಮೊದಲಾದವರು ಇದ್ದರು.