ಆನಂದಪುರಂ ಸುತ್ತಮುತ್ತ ವ್ಯಾಪಕ ಕಳ್ಳತನ
ಸಾಗರ: ತಾಲೂಕಿನ ಆನಂದಪುರಂ ಗ್ರಾಮ ಪಂಚಾಯ್ತಿ ಸುತ್ತಮುತ್ತಲು ಕಳೆದ 15 ದಿನಗಳಿಂದ ವ್ಯಾಪಕ ಕಳ್ಳತನ ನಡೆಯುತ್ತಿದ್ದು, ಸಾರ್ವಜನಿಕರು ಆತಂಕಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಮಂಗಳವಾರ ರಾತ್ರಿ ಬಶೀರ್ ಎಂಬುವವರಿಗೆ ಸೇರಿರುವ ಮೊಬೈಲ್ ಅಂಗಡಿಯ ಹೆಂಚು ತೆಗೆದು ಒಳನುಗ್ಗಿರುವ ಕಳ್ಳರು ಕಳ್ಳತನ ನಡೆಸಿದ್ದಾರೆ. ಸುಖಸಾಗರ್ ಹೊಟೇಲ್ನಲ್ಲಿ ಕಳ್ಳತನಕ್ಕೆ ಪ್ರಯತ್ನ ನಡೆಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಆನಂದಪುರಂ ಸುತ್ತಮುತ್ತಲು ವ್ಯಾಪಕ ಕಳ್ಳತನವಾಗುತ್ತಿದ್ದು, ಪೊಲೀಸರಿಗೆ ಸ್ಥಳೀಯರು ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮುಖ್ಯರಸ್ತೆಯಲ್ಲಿರುವ ಸುಖಸಾಗರ ಹೊಟೇಲ್ನಲ್ಲಿ ಎರಡು ಬಾರಿ, ಹಳೆಸಂತೆ ಮೈದಾನದ ಬಳಿಯಿರುವ ಮೊಬೈಲ್ ಅಂಗಡಿಯಲ್ಲಿ, ಮನೆಗಳಲ್ಲಿ ಕಳ್ಳತನ ಆಗಾಗ ನಡೆಯುತ್ತಿದೆ.
ಸಿಬ್ಬಂದಿ ಕೊರತೆ ಇರುವುದರಿಂದ ಪೊಲೀಸರಿಗೆ ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ತಕ್ಷಣ ಹೆಚ್ಚುವರಿ ಪೊಲೀಸರನ್ನು ಆನಂದಪುರಂ ಉಪಠಾಣೆಗೆ ನೇಮಿಸಬೇಕು. ಕಳ್ಳರ ಪತ್ತೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮನೆ ಬೀಗ ಮುರಿದು ಆಭರಣ ಕಳವು
ಭದ್ರಾವತಿ: ತಾಲೂಕಿನ ಹಿರಿಯೂರು ತಾಂಡದ ಜಯಮ್ಮ ಎಂಬವರ ಮನೆ ಬೀಗ ಮುರಿದು ಸುಮಾರು 1.20 ಲಕ್ಷ ಮೌಲ್ಯದ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ಮೊಮ್ಮಗಳು ತೇಜಸ್ವಿನಿಯೊಂದಿಗೆ ಆಸ್ಪತ್ರೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಭದ್ರಾವತಿ ಕಾಗದನಗರ ಪೊಲೀಸರಿಗೆ ಜಯಮ್ಮ ದೂರು ನೀಡಿದ್ದಾರೆ.