ಮೊದಲ ದಿನವೇ ನೀತಿ ಸಂಹಿತೆ ಗುಮ್ಮ
ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.5
ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ನೀತಿ ಸಂಹಿತೆ ಜಾರಿಯಾಗಿದೆ. ಜೊತೆ ಜೊತೆಗೆ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ನೀತಿಸಂಹಿತೆ ಭಯ ಅಟ್ಟಿಕೊಂಡು ಬಂದಿದೆ.
ಪರಿಣಾಮ, ಕೆಲವು ಸರ್ಕಾರಿ ಕಾರ್ಯಕ್ರಮಗಳು ಮೊಟಕುಗೊಂಡವು, ಮತ್ತಷ್ಟು ಕಾರ್ಯಕ್ರಮ ನಡೆಯಲೇ ಇಲ್ಲ, ಸರ್ಕಾರಿ ವಾಹನಗಳು ಮುಂದಡಿಯಿಡಲಿಲ್ಲ, ಮೊಟಕುಗೊಂಡ ಕಾರ್ಯಕ್ರಮಗಳತ್ತ ಅಧಿಕಾರಿಗಳು ಸುಳಿಯಲಿಲ್ಲ. ಇನ್ನೊಂದೆಡೆ ರಾಜಕಾರಣಿಗಳು ತರಾತುರಿಯಲ್ಲೇ ಯೋಜನೆಗಳಿಗೆ ಉದ್ಘಾಟನೆ- ಶಂಕುಸ್ಥಾಪನೆ ನೆರವೇರಿಸಿ ಕೈತೊಳೆದುಕೊಂಡರು.
ಆಯನೂರು- ಇಲ್ಲಿನ ಹೋಬಳಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ ಉಪವಿಭಾಗಾಧಿಕಾರಿ ಕುಸುಮ ಕುಮಾರಿ ಸ್ಥಳದಿಂದ ಕಾಲ್ಕಿತ್ತ ಪ್ರಸಂಗ ಬುಧವಾರ ನಡೆಯಿತು.
ತರಾತುರಿಯಲ್ಲಿ ಆಯೋಜನೆಗೊಂಡ ನಾಡ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಂಜಾನೆಯೇ ಎಸಿಯವರು ಆಯನೂರಿಗೆ ಆಗಮಿಸಿದ್ದರು. ಈ ಮಧ್ಯೆ ಚುನಾವಣಾ ಆಯೋಗ ನೀತಿ ಸಂಹಿತೆ ಘೋಷಣೆ ಮಾಡುತ್ತಾರೆಂಬ ಖಚಿತ ಸುಳಿವು ಅವರಿಗೆ ಸಿಗುತ್ತಿದ್ದಂತೆಯೇ ಅವರು ಅಲ್ಲಿ ನಿಲ್ಲದೆಯೇ ಹೊರಟೇ ಬಿಟ್ಟರು. ಈ ಸಂದರ್ಭ ಕಾರ್ಯಕ್ರಮ ನಡೆಸಬಾರದೆಂಬ ಚರ್ಚೆ ನಡೆಯಿತಾದರೂ ಅಂತಿಮವಾಗಿ ತರಾತುರಿಯಲ್ಲಿ ವೇದಿಕೆ ಕಾರ್ಯಕ್ರಮ ನೆರವೇರಿತು. ಅಧಿಕಾರಿಗಳು ಮಾತ್ರ ವೇದಿಕೆ, ನಾಡಕಚೇರಿ ಸುತ್ತಮುತ್ತಲು ಸುಳಿಯಲೇ ಇಲ್ಲ.
ಬ್ಯಾನರ್ ಮಡಚಿಟ್ಟರು: ಜೆಎನ್‌ಎನ್‌ಸಿಇಯಲ್ಲಿ ಬುಧವಾರ ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಓಗಳಿಗೆ ಜೈವಿಕ ಇಂಧನ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿತ್ತು. ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಗೆ ಎಲ್ಲವೂ ಸಿದ್ಧತೆ ನಡೆದಿತ್ತು. ಯಾವಾಗ ನೀತಿ ಸಂಹಿತೆ ಗುಮ್ಮ ಆವರಿಸಿತೋ ಅಲ್ಲಿದ್ದ ಅಧಿಕಾರಿಗಳಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅತಿಥಿಗಳೂ ಸಹ ಬಂದಾಗಿತ್ತು. ಅಂತಿಮವಾಗಿ ಕಾರ್ಯಕ್ರಮದ ಬ್ಯಾನರ್ ಮಡಚಿಟ್ಟು ಸಾಂಕೇತಿಕವಾಗಿ ಕಾರ್ಯಕ್ರಮ ನಡೆಯಿತು. ಸರ್ಕಾರಿ ಕಾರ್ಯಕ್ರದ ಹೊರತಾಗಿ ಕಾಲೇಜಿನ ಕಾರ್ಯಕ್ರಮವಾಗಿ ರೂಪಾಂತರಗೊಂಡಿತು.
ವಾಹನ ಬಿಟ್ಟು ಹೊರಟರು: ಸಾಗರದಲ್ಲಿ ಬುಧವಾರ ಸಚಿವ ಎಚ್.ಸಿ. ಮಹದೇವಪ್ಪ ಅವರ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇಷ್ಟರ ಮಧ್ಯೆಯೇ ನೀತಿ ಸಂಹಿತೆ ಜಾರಿಗೊಂಡಿದ್ದರಿಂದ ಸಚಿವರು ತಮ್ಮ ಸರ್ಕಾರಿ ಕಾರನ್ನು ಅಲ್ಲಿಯೇ ಬಿಟ್ಟು ಜಿಲ್ಲಾ ಪಂಚಾಯಿತಿ ಸದಸ್ಯರ ಕಾರನ್ನೇರಿ ಅಲ್ಲಿಂದ ಹೊರಟು ನಡೆದರು.