'ಆಪ್ತ ಸಮಾಲೋಚಕರು ಪರಿಪಕ್ವರಾಗಲಿ'
ಶಿವಮೊಗ್ಗ: ನಮ್ಮ ಸಮಾಜ ಇಂದು ಎದುರಿಸುತ್ತಿರುವ ವಿವಿಧ ಪ್ರಭಾವಗಳಿಂದಾಗಿ ಆಪ್ತ ಸಮಾಲೋಚಕರ ಅವಶ್ಯಕತೆ ಹೆಚ್ಚಾಗುತ್ತಿದೆ ಎಂದು ಮನೋವೈದ್ಯ ಅಶೋಕ್ ಪೈ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ಕುವೆಂಪು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿ ಮಾ. 6 ಮತ್ತು 7ರಂದು ಕೌಟುಂಬಿಕ ಸಲಹಾ ಕೇಂದ್ರದ ಆಪ್ತ ಸಮಾಲೋಚಕರಿಗೆ ಮತ್ತು ಅನುದಾನಿತ ಸರ್ಕಾರೇತರ ಸಂಸ್ಥೆಗಳ ಕಾರ್ಯಕರ್ತರಿಗೆ ಆಯೋಜಿಸಿರುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಾಗತೀಕರಣ, ನಗರೀಕರಣ, ಕೈಗಾರಿಕೀಕರಣ, ಪಾಶ್ಚಿಮಾತ್ಯ ಪ್ರಭಾವ, ಕುಟುಂಬ ವಿಘಟನೆ ಸೇರಿದಂತೆ ವಿವಿಧ ಕಾರಣಗಳಿಂದ ಸಮಾಜ ನಲುಗುತ್ತಿದೆ. ಇಂತಹ ಸಂದರ್ಭದಲ್ಲಿ ಆಪ್ತ ಸಮಾಲೋಚನೆ ತುಂಬಾ ಅಗತ್ಯತೆ ಇದೆ ಎಂದು ಹೇಳಿದ ಅವರು, ಆಪ್ತ ಸಮಾಲೋಚಕರು ಪರಿಪಕ್ವವಾಗಬೇಕಾಗಿದೆ. ಸಾಮಾಜಿಕ ಮನೋಕೌಶಲ್ಯ ಬೇಕಾಗುತ್ತದೆ ಎಂದರು.
ಆಪ್ತ ಸಮಾಲೋಚಕರು ಅನೇಕ ಕೌಶಲ್ಯ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯಾಗಾರಗಳು ಮಹತ್ವ ಪಾತ್ರ ವಹಿಸುತ್ತದೆ. ಕೌನ್ಸೆಲರ್ಗಳು ಇಂತಹ ಕಾರ್ಯಕ್ರಮದ ಪ್ರಯೋಜನ ಪಡೆದು ತಮ್ಮನ್ನು ಪರಿಪಕ್ವಗೊಳಿಸಿಕೊಳ್ಳಬೇಕೆಂದರು.
ಆಪ್ತ ಸಮಾಲೋಚನಾ ಕೇಂದ್ರಗಳು, ಆಪ್ತ ಸಮಾಲೋಚಕರ ಸಂಖ್ಯೆ ಹೆಚ್ಚು ಹೆಚ್ಚು ಅಗತ್ಯವಿದೆ. ಕೆಲವು ಸಂದರ್ಭದಲ್ಲಿ ರೋಗಿಗಳಿಗೆ ಕೇವಲ ಔಷಧಿ ನೀಡಿದರೆ ಸಾಲದಾಗುತ್ತದೆ. ಆಪ್ತ ಸಮಾಲೋಚನೆ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಪರಿಣಾಮ ಬೀರುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ನಿಮಾನ್ಸ್ನ ಪ್ರೊ. ಶೇಖರ್ ಮಾತನಾಡಿ, ಆಪ್ತ ಸಮಾಲೋಚನೆಯ ಮಹತ್ವ, ಅಡೆತಡೆಗಳ ಕುರಿತು ವಿವರಿಸಿದರು. ಸಮಾಜ ಕಲ್ಯಾಣ ಮಂಡಳಿ ಕಾರ್ಯದರ್ಶಿ ಜಾನ್ಸಿ ವರ್ಗೀಸ್ ಅವರು ಕಾರ್ಯಕ್ರಮದ ರೂಪುರೇಷೆ ವಿವರಿಸಿದರು.
ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ ಅಧ್ಯಕ್ಷ ಡಾ. ಬಿ.ಎಸ್. ಗುಂಜಾಳ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಶಿಬಿರದಲ್ಲಿ ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು, ಗುಲ್ಬರ್ಗ, ರಾಯಚೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ಆಪ್ತ ಸಮಾಲೋಚಕರು ಪಾಲ್ಗೊಂಡಿದ್ದಾರೆ.