ಕಾಂಗ್ರೆಸ್ನಿಂದ ಜಾತಿ ವಿಷಬೀಜ ಬಿತ್ತುವ ಪ್ರಯತ್ನ
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.6
ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಅಭ್ಯರ್ಥಿ ಎಂದು ನಿಗದಿಯಾದ ನಂತರ ಇದೇ ಮೊದಲ ಬಾರಿಗೆ ನಗರದ ಬಿಜೆಪಿ ಕಚೇರಿಗೆ ಗುರುವಾರ ಸಂಜೆ ಆಗಮಿಸಿದ್ದು, ಅವರಿಗೆ ಪಕ್ಷದ ಎಲ್ಲ ಪ್ರಮುಖರು ಹಾರ್ದಿಕ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್, ಸಂಸದ ಬಿ.ವೈ. ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಮಾಜಿ ಸಚಿವ ಆರಗ ಜ್ಞಾನೇಂದ್ರ, ಮುಖಂಡರಾದ ಸುಕುಮಾರ ಶೆಟ್ಟಿ, ಎಸ್. ರುದ್ರೇಗೌಡ್ರು, ಜ್ಯೋತಿಪ್ರಕಾಶ್, ಸಿ. ಮಂಜುಳಾ, ಪಕ್ಷದ ಜಿಲ್ಲಾ ಪ್ರಭಾರಿ ರೇಖಾ ಹುಲಿಯಪ್ಪಗೌಡ ಸೇರಿದಂತೆ ಹಲವರು ಇದ್ದರು.
ನಂತರ ಕಚೇರಿಯ ಸಭಾಂಗಣದಲ್ಲಿ ಪ್ರಮುಖ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ ಅವರು, ದೇಶದಲ್ಲಿ ಸ್ವಾತಂತ್ರ್ಯಾನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಯುವಕರು ಒಬ್ಬ ವ್ಯಕ್ತಿಯನ್ನು ಪ್ರಧಾನಿಯಾಗಬೇಕೆಂದು ಬಯಸಿದ್ದು ಇದೇ ಮೊದಲು.
ಒಂದೆಡೆ ಸಮರ್ಥ ನಾಯಕನಿಲ್ಲದ ಕಾಂಗ್ರೆಸ್ ಪಕ್ಷ, ಇನ್ನೊಂದೆಡೆ ಸಮರ್ಥ ನಾಯಕ ಬೇಕು ಎಂದು ಜನರೇ ಆಯ್ಕೆ ಮಾಡಿರುವ ನರೇಂದ್ರ ಮೋದಿ, ಹಾಗಾಗಿ ಈ ಚುನಾವಣೆ ಅತ್ಯಂತ ಪ್ರಮುಖವಾದುದು ಎಂದರು.
ಭರವಸೆ: ನರೇಂದ್ರ ಮೋದಿ ಅವರು ವಾಜಪೇಯಿ ಅವರ ಕನಸಿನ ಯೋಜನೆಗಳನ್ನು ಕಾರ್ಯಗರ್ತಗೊಳಿಸುವುದಾಗಿ ಹೇಳಿದ್ದಾರೆ. ದೇಶದ ಪ್ರಮುಖ ನದಿಗಳನ್ನು ಜೋಡಣೆ ಮಾಡುವುದಾಗಿ ಹೇಳಿರುವ ಅವರು ಅಧಿಕಾರಕ್ಕೆ ಬಂದ ಮೂರು ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಗೆ ಹಿಂದೆಂದೂ ಇಲ್ಲದ ಅನುಕೂಲ ಸ್ಥಿತಿ ಇದೆ. ಎಲ್ಲೆಡೆ ಬಿಜೆಪಿ ಪರ ಒಲವು ಕಾಣುತ್ತಿದೆ ಎಂದರು.
ಜಾತಿ ವಿಷ ಬೀಜ: ಕಾಂಗ್ರೆಸ್ ಜಾತಿ ವಿಷ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಕೆಲಸವನ್ನು ಕಾಂಗ್ರೆಸ್ ಮಾಡಬಹುದು ಎಂದು ಯಡಿಯೂರಪ್ಪ ಅವರು ಶಂಕೆ ವ್ಯಕ್ತಪಡಿಸಿದರು.
ಕೂಗು ನಿಲ್ಲಿಸಿಲ್ಲ: ಮೋದಿ ಅವರು ಪಾಕಿಸ್ತಾನಕ್ಕೆ 15 ವರ್ಷ ಅಭಿವೃದ್ಧಿ ಬಗ್ಗೆ ಆಲೋಚನೆ ಮಾಡಿ. ಯುದ್ಧದ ಚಿಂತೆ ಮಾಡಬೇಡಿ ಎನ್ನುತ್ತಾರೆ. ಆದರೆ, ನರೇಂದ್ರ ಮೋದಿ ಅವರಿಂದ ಅಲ್ಪಸಂಖ್ಯಾತರಿಗೆ ತೊಂದರೆಯಾಗುತ್ತಿದೆ ಎಂದು ಕಾಂಗ್ರೆಸ್ನವರು ಇನ್ನೂ ಕೂಗುವುದನ್ನು ನಿಲ್ಲಿಸಿಲ್ಲ ಎಂದರು.
ಕ್ಷೇತ್ರ ಸಮಿತಿ ರಚಿಸುವಾಗ ಎಲ್ಲ ವರ್ಗದವರೂ ಇರುವಂತೆ ನೋಡಿಕೊಳ್ಳಿ. ನಮ್ಮ ಪಕ್ಷದ ಕಾರ್ಯಕರ್ತರಿಗಿಂತ ಬೇರೆ ಪಕ್ಷದವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿ. ವಿರೋಧ ಪಕ್ಷದವರು ಏನೇ ಟೀಕೆ ಮಾಡಿದರೂ ಅದಕ್ಕೆ ಉತ್ತರಿಸಲು ಹೋಗಬೇಡಿ ಎಂದು ಕಿವಿಮಾತು ಹೇಳಿದರು.
ಮಧುಮಗ: ಯಡಿಯೂರಪ್ಪ ಅವರಿಗಿಂತ ಮುಂಚೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ರಾಜ್ಯದಲ್ಲಿ ಮೋದಿ ಹವಾ ಜತೆಗೆ ಯಡಿಯೂರಪ್ಪ ಹವಾ ಸೇರಿ ಉಂಟಾಗುವ ಬಿರುಗಾಳಿ ನಮಗೆ ಗೆಲವು ತರಲಿದೆ ಎಂದು ಹೇಳಿದರು.
ಅಭ್ಯರ್ಥಿಯಾಗಿ ನಿಯೋಜಿತರಾದ ನಂತರ ಮೊದಲ ಬಾರಿಗೆ ಪಕ್ಷದ ಕಚೇರಿಗೆ ಆಗಮಿಸಿರುವ ಯಡಿಯೂರಪ್ಪ ಅವರು ಮಧುಮಗನಂತೆ ಎಂದು ಬಣ್ಣಿಸಿದ ಅವರು, ಮಹೂರ್ತ ಫಿಕ್ಸ್ ಆಗಿದೆ. ಗೆಲವು ನಿಶ್ಚಿತ ಎಂದರು.