ಯುವಕರು ಪೇಟೆ ವ್ಯಾಮೋಹ ಬಿಡಲಿ
ಕನ್ನಡಪ್ರಭ ವಾರ್ತೆ, ಸಾಗರ, ಮಾ.6
ನಮ್ಮಲ್ಲಿ ಪ್ರಜ್ಞಾವಂತರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಸಾಮಾಜಿಕ ವ್ಯವಸ್ಥೆ ಹಳಿ ತಪ್ಪುತ್ತಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಶಿವಮೊಗ್ಗದ ಭಂಡಾರಿ ಫೌಂಡೇಶನ್ ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಯಕತ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೇವಲ ವಿದ್ಯಾವಂತರಿಂದ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲ. ವಿದ್ಯೆಯ ಜತೆಗೆ ಸಾಮಾಜಿಕ ಜವಾಬ್ದಾರಿ, ಸಮಾನತೆ ಪ್ರತಿಪಾದನೆ ಹಾಗೂ ರಾಷ್ಟ್ರೀಯ ಮನೋಭಾವ ಬೆಳೆಸುವ ಪ್ರಜ್ಞಾವಂತಿಕೆ ತೀರಾ ಅಗತ್ಯ. ಸಮಾಜದ ಅವ್ಯವಸ್ಥೆ ನೋಡಿ ಕೈಕಟ್ಟಿ ಕುಳಿತುಕೊಳ್ಳುವ ಮನಸ್ಥಿತಿಯಿಂದ ಯುವಜನರು ಹೊರ ಬರಬೇಕು. ತಪ್ಪು ನಡೆದಾಗ, ಸಮಾಜ ದಾರಿ ತಪ್ಪುತ್ತಿದ್ದಾಗ ಅದನ್ನು ವಿರೋಧಿಸಿ, ವ್ಯವಸ್ಥೆ ಸರಿಪಡಿಸುವ ಕೆಲಸವನ್ನು ಯುವ ಜನಾಂಗ ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ಎಲ್ಲರ ಹೊಣೆ: ವರ್ಣ, ವರ್ಗ ಒಂದಾಗಿ ಹೋರಾಟ ಮಾಡಿದರೆ ದೇಶದಲ್ಲಿ ಬದಲಾವಣೆ ತರಬಹುದು ಎನ್ನುವ ಲೋಹಿಯಾ ವಾದವನ್ನು ಯುವಜನಾಂಗ ಪುನರ್‌ಮನನ ಮಾಡಿಕೊಳ್ಳಬೇಕು. ಜಾತಿ, ಧರ್ಮ, ಭಾಷೆ ಹೆಸರಿನಲ್ಲಿ ಒಡೆದಾಳುವ ಪ್ರವೃತ್ತಿ ಹೆಚ್ಚುತ್ತಿದೆ. ಯುವ ಮನಸ್ಸುಗಳನ್ನು ಕಲುಷಿತಗೊಳಿಸುವ ವಾತಾವರಣ ಸರಿಪಡಿಸುವ ಹೊಣೆಗಾರಿಕೆ ಎಲ್ಲರ ಮೇಲೆ ಇದೆ. ಯುವ ಸಮುದಾಯದಲ್ಲಿ ಪೇಟೆ ವ್ಯಾಮೋಹ ಅತಿಯಾಗುತ್ತಿದ್ದು, ಇದು ನಮ್ಮ ನೆಲಮೂಲ ಸಂಸ್ಕೃತಿಯ ನಾಶಕ್ಕೆ ಕಾರಣವಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಂಡಾರಿ ಫೌಂಡೇಶನ್ ಮುಖ್ಯಸ್ಥ ಮಂಜುನಾಥ ಭಂಡಾರಿ, ಯುವಜನರಿಗೆ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಪ್ರತಿಯೊಂದು ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಇಂತಹ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ. ಯುವಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಕಾಗೋಡು ಅಣ್ಣಪ್ಪ, ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ಚೇತನರಾಮ್, ಆನಂದಪ್ರಭು ಹಾಜರಿದ್ದರು. ಸುಕೃತ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಹಕ್ರೆ ಸ್ವಾಗತಿಸಿದರು. ಗಣಪತಿ ಹೆನಗೆರೆ ವಂದಿಸಿದರು. ಜಿ.ಟಿ. ಸತ್ಯನಾರಾಯಣ್ ನಿರೂಪಿಸಿದರು.